ಮುಂಬೈ: ಮಹಾರಾಷ್ಟ್ರದ ಮುಂಬೈನ ಚಿರಾಗ್ ನಗರದಲ್ಲಿ ಭೂಕುಸಿತದಿಂದ ಚಾಲ್ವೊಂದು ಕುಸಿದು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಸಾಹಿಲ್ ಅನ್ಸಾರಿ (28) ಮತ್ತು ಮುಹಮ್ಮದ್ ಸಮೀರ್ (14) ಎಂದು ಗುರುತಿಸಲಾಗಿದೆ.
ಬುಧವಾರ ಮುಂಜಾನೆ ಚಿರಾಗ್ ನಗರದ ಗೌಷಿಯಾ ಚಾಲ್ ಮೇಲೆ ಭೂಕುಸಿತ ಸಂಭವಿಸಿ, ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಭೂಕುಸಿತದಿಂದಾಗಿ ಸಮೀಪದಲ್ಲಿದ್ದ ಚಾಲ್ನ ಎರಡರಿಂದ ಮೂರು ಕೊಠಡಿಗಳ ಮೇಲೆ ಭಾರಿ ಪ್ರಮಾಣದ ಅವಶೇಷಗಳು ಕುಸಿದು ಬಿದ್ದಿವೆ. ವಿಶೇಷ ರಕ್ಷಣಾ ಉಪಕರಣಗಳ ನೆರವಿನಿಂದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.
ಸದ್ಯ ಸುಮಾರು 50 ಬಿಎಂಸಿ ಕಾರ್ಮಿಕರು ಹಾಗೂ ಎನ್ಡಿಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಇನ್ನೂ 6ರಿಂದ 8 ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಅವಶೇಷಗಳಿಂದ ಹೊರತೆಗೆಯಲಾದ ಸಾಹಿಲ್ ಅನ್ಸಾರಿ ಹಾಗೂ ಮುಹಮ್ಮದ್ ಸಮೀರ್ ಅವರನ್ನು ರಾಜವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಇಬ್ಬರೂ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಇನ್ನು ತಲೆಗೆ ಗಾಯಗೊಂಡಿರುವ ಸೋಹೆಲ್ ಅನ್ಸಾರಿ (18) ಹಾಗೂ ಮುಹಮ್ಮದ್ ಅನ್ಸಾರಿ (14) ಅವರನ್ನು ಕುರ್ಲಾದ ಭಾಭಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಮುಂದುವರಿದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.