ಬೆಂಗಳೂರು | www.vknews.in: ಬಿ. ನಾಗೇಂದ್ರ ಅವರು ಸಚಿವರಾಗಿರುವವರೆಗೂ ವಿಧಾನಸಭೆ ಅಧಿವೇಶನ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿ. ನಾಗೇಂದ್ರ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಲೇ ಪಡೆಯಬೇಕು ಎಂದು ಆಗ್ರಹಿಸಿದರು.
ಸದನದಲ್ಲಿ ಎಲ್ಲ ಪ್ರಶ್ನೆಗಳಿಗೂ ಮುಖ್ಯಮಂತ್ರಿಯೇ ಉತ್ತರಿಸುವುದಾದರೆ ಸಚಿವರು ಏಕೆ ಬೇಕು ಎಂದು ಪ್ರಶ್ನಿಸಿದ ಅಶೋಕ್, ಜನರ ತೆರಿಗೆ ಹಣದಿಂದ ಸಚಿವರಿಗೆ ಕಾರು, ಮನೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ. ಇದು ಚಕ್ರಾಧಿಪತ್ಯವಲ್ಲ. ಸಂವಿಧಾನಕ್ಕೆ ಗೌರವ ನೀಡುವುದಾದರೆ ಸಚಿವರು ಮತ್ತು ಮುಖ್ಯಮಂತ್ರಿಗೆ ಇರುವ ಅಧಿಕಾರ ಹಾಗೂ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ನಾಗೇಂದ್ರ ರಾಜೀನಾಮೆಗೆ ಪಟ್ಟು..
ಅಧಿವೇಶನ ನಡೆಸುವ ಜವಾಬ್ದಾರಿ ಸರ್ಕಾರಕ್ಕಿದ್ದರೆ, ಮೊದಲು ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು. ಬಿಡದಿ ಟೌನ್ಶಿಪ್, ಕೆಪಿಎಸ್ಸಿ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಅಧಿವೇಶನದಲ್ಲಿ ಚರ್ಚಿಸಬೇಕಿದೆ. ಆದರೆ ನಾಗೇಂದ್ರ ಸಚಿವರಾಗಿರುವವರೆಗೆ ಸದನದ ಕಲಾಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಶೋಕ್ ಎಚ್ಚರಿಕೆ ನೀಡಿದರು. ಕಳೆದ ಬಾರಿ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದು ಏಕೆ ಮತ್ತು ಇದೀಗ ಮತ್ತೆ ಸಚಿವರನ್ನಾಗಿ ಮಾಡಿದ್ದು ಏಕೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕೇಂದ್ರಗಳಲ್ಲೂ ಬಿಜೆಪಿ ಹೋರಾಟ..
ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಆರಂಭಿಸಲಾಗುವುದು. ಪ್ರತಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ವಿಧಾನಸಭೆಯ ಒಳಗೂ ಹೊರಗೂ ಹೋರಾಟ ಮುಂದುವರಿಸಲಾಗುವುದು ಎಂದು ಆರ್. ಅಶೋಕ್ ತಿಳಿಸಿದರು.
ನಾಗೇಂದ್ರ ವಿರುದ್ಧ ವಿವಿಧ ತನಿಖಾ ಸಂಸ್ಥೆಗಳಲ್ಲಿ ಪ್ರಕರಣಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು, ಸಿಬಿಐನಲ್ಲಿ ಮೂರು, ಲೋಕಾಯುಕ್ತದಲ್ಲಿ ಐದು, ಎಸ್ಐಟಿಯಲ್ಲಿ ಒಂದು ಹಾಗೂ ಸಿಐಡಿ ಸೇರಿದಂತೆ ವಿವಿಧೆಡೆ ಪ್ರಕರಣಗಳಿವೆ ಎಂದು ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ ನಾಗೇಂದ್ರ ಅವರು ವಿಧಾನಸೌಧಕ್ಕೆ ಯಾವಾಗ ಬರುತ್ತಾರೆ? ಇಲಾಖೆಯ ಕೆಲಸಗಳನ್ನು ಯಾವಾಗ ನಿರ್ವಹಿಸುತ್ತಾರೆ? ಎಂದು ಆರ್. ಅಶೋಕ್ ಪ್ರಶ್ನಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.