ಮಂಗಳೂರು (www.vknews.in): ಇಮಾಮ್-ಎ-ಅಹ್ಲೆ ಸುನ್ನತ್ ಇಮಾಮ್ ಅಹ್ಮದ್ ರಝಾ ಖಾನ್ ಬರೇಲ್ವಿ ರಹ್ಮತುಲ್ಲಾಹಿ ಅಲೈಹಿ ಅವರ ಆಂಡ್ ಪ್ರಯುಕ್ತ ಕರ್ನಾಟಕ ರಝ್ವಿ ಕೌನ್ಸಿಲ್ ವತಿಯಿಂದ ಆಯೋಜಿಸಲಾಗಿದ್ದ ‘ರಝ್ವಿ ಸಂಗಮ ಮಹಾಸಭೆ’ ದೇರಳಕಟ್ಟೆಯ ತಾಜುಲ್ ಉಲಮಾ ಮಸೀದಿಯಲ್ಲಿ ಆ.11ರಂದು ಯಶಸ್ವಿಯಾಗಿ ನಡೆಯಿತು.
ಚಿನಾಲದ ದಾರುನ್ನಜಾತ್ ಶರೀಅತ್ ಕಾಲೇಜಿನಿಂದ ಕಳೆದ ಐದು ವರ್ಷಗಳಲ್ಲಿ 100ಕ್ಕೂ ಹೆಚ್ಚು ‘ರಝ್ವಿ’ ಬಿರುದು ಪಡೆದ ಆಲಿಮರು ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದು, ಅವರ ಒಕ್ಕೂಟವಾಗಿ ಕರ್ನಾಟಕ ರಝ್ವಿ ಕೌನ್ಸಿಲ್ ಕಾರ್ಯನಿರ್ವಹಿಸುತ್ತಿದೆ. ಉಲಮಾಗಳ ಏಕತೆ, ಇಲ್ಮ್ನ ಪ್ರಸಾರ ಹಾಗೂ ಮಸ್ಲಕ್-ಎ-ಅಹ್ಲೆ ಸುನ್ನತ್ನ ರಕ್ಷಣೆಯ ಉದ್ದೇಶದಿಂದ ಮಹಾಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ದಾರುನ್ನಜಾತ್ ಸಂಸ್ಥೆಯ ಶಿಲ್ಪಿ ಅಬ್ದುಲ್ ಖಾದರ್ ಸಖಾಫಿ ಉಸ್ತಾದ್ ವಹಿಸಿದ್ದರು.
ಸಭೆಯ ವಿಶೇಷತೆಯಾಗಿ ಹಲವು ರಝ್ವಿ ಉಲಮಾಗಳು ತಮ್ಮ ವೈಯಕ್ತಿಕ ಸಂಕಷ್ಟಗಳ ನಡುವೆಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜ್ವರದಿಂದ ಬಳಲುತ್ತಿದ್ದ ಸಂಶುದ್ದೀನ್ ರಝ್ವಿ ಕುಂಬ್ರ ಹಾಗೂ ಬೈಕ್ ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಬ್ದುಲ್ ಅಝೀಝ್ ರಝ್ವಿ ಮಾಡಾವು ಸಭೆಗೆ ಆಗಮಿಸಿ ಪ್ರೋತ್ಸಾಹ ನೀಡಿದರು.
ಬೆಂಗಳೂರಿನಲ್ಲಿ ಸೇವೆಯಲ್ಲಿದ್ದ ಮುಹಮ್ಮದ್ ರಫೀಕ್ ರಝ್ವಿ ನೆಕ್ಕರೆ ಅವರು ಕೇವಲ ಈ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಬೆಂಗಳೂರಿನಿಂದ ಆಗಮಿಸಿದರು. ಅದೇ ರೀತಿ ತಮ್ಮ ಊರಿನ ಮದ್ರಸಾದ ರೇಂಜ್ ಮೀಟಿಂಗ್ ಇದ್ದರೂ ಅದನ್ನು ಬದಿಗಿಟ್ಟು ಪಿ.ಕೆ. ಮುಹಮ್ಮದ್ ಹನೀಫ್ ರಝ್ವಿ ಉರುವಾಲುಪದವು, ಮುಹಮ್ಮದ್ ಶರೀಫ್ ರಝ್ವಿ ಬೈತಡ್ಕ ಹಾಗೂ ನಾಸಿರ್ ರಝ್ವಿ ಬೈತಡ್ಕ ಅವರು ಸಮಯಕ್ಕೆ ಸರಿಯಾಗಿ ಸಭೆಯಲ್ಲಿ ಪಾಲ್ಗೊಂಡರು.
ಸಭೆಯಲ್ಲಿ ಕೇರಳ ರಝ್ವಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಬಶೀರ್ ಅಹ್ಮದ್ ರಝ್ವಿ ಮಂಜೇಶ್ವರ, ಅಬ್ದುಲ್ಲಾ ರಝ್ವಿ ಉದ್ಯಾವರ, ದಾರುನ್ನಜಾತ್ ರಝ್ವಿ ಕೌನ್ಸಿಲ್ ಕೇಂದ್ರ ಕಮಿಟಿ ಅಧ್ಯಕ್ಷ ಅಬ್ದುಲ್ ರಶೀದ್ ರಝ್ವಿ ಕಟಪಾಡಿ ಸೇರಿದಂತೆ ಕರ್ನಾಟಕ ರಝ್ವಿ ಕೌನ್ಸಿಲ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಭಾಗಗಳಿಂದ ಡಿ.ಜೆ. ಮುಹಮ್ಮದ್ ರಝ್ವಿ ಪಕ್ಷಿಕೆರೆ, ಕೆ.ಕೆ. ಉಸ್ಮಾನ್ ರಝ್ವಿ ಕಾಜೂರು, ಇಬ್ರಾಹಿಂ ಖಲೀಲ್ ರಝ್ವಿ ನೆಲ್ಯಾಡಿ, ಸಿನಾನ್ ರಝ್ವಿ ಎರ್ಮಾಳ, ಅಬ್ದುರ್ರಹ್ಮಾನ್ ರಝ್ವಿ ಪುಣಚ, ಅಬ್ದುಲ್ ರಝಾಕ್ ರಝ್ವಿ ಕಕ್ಕಿಂಜೆ, ಖಲೀಲ್ ರಝ್ವಿ ಕಾಜೂರು, ಹೈದರ್ ಅಲಿ ರಝ್ವಿ ಕಾಞಂಗಾಡ್, ಹುಸನ್ ರಝ್ವಿ ಉಜಿರೆ ಸೇರಿದಂತೆ 40ಕ್ಕೂ ಹೆಚ್ಚು ರಝ್ವಿ ಉಲಮಾಗಳು ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಉಲಮಾಗಳು, “ನಾವೆಲ್ಲರೂ ಒಂದಾಗಬೇಕು. ಆಲಾ ಹಝ್ರತ್ ಅವರ ಮಸ್ಲಕ್ ಅನ್ನು ಮನೆಮನೆಗೆ ತಲುಪಿಸಬೇಕು. ಯುವಕರಿಗೆ ಸರಿಯಾದ ಅಖೀದಾವನ್ನು ಕಲಿಸಬೇಕು” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ರಝ್ವಿ ಒಕ್ಕೂಟವು ಮುಂದಿನ ದಿನಗಳಲ್ಲೂ ಮತ್ತಷ್ಟು ಬಲಿಷ್ಠವಾಗಿ ಕಾರ್ಯನಿರ್ವಹಿಸಬೇಕು ಹಾಗೂ ದಾರುನ್ನಜಾತ್ ಶರೀಅತ್ ಕಾಲೇಜಿನಿಂದ ಇನ್ನಷ್ಟು ಆಲಿಮರು, ಹಾಫಿಝ್ಗಳು ಮತ್ತು ಖಾದಿಮರು ಸಮಾಜಕ್ಕೆ ಸೇವೆ ಸಲ್ಲಿಸುವಂತಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ದೇರಳಕಟ್ಟೆ ತಾಜುಲ್ ಉಲಮಾ ಮಸೀದಿ ಆಡಳಿತ ಮಂಡಳಿ, ಸಹಾಯ ಮಾಡಿದ ಎಲ್ಲರು ಹಾಗೂ ಭಾಗವಹಿಸಿದ ರಝ್ವಿ ಉಲಮಾಗಳಿಗೆ ಕರ್ನಾಟಕ ರಝ್ವಿ ಕೌನ್ಸಿಲ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.