ದುಬೈ | www.vknews.in: ಯುಎಇಯಲ್ಲಿ ಹೋಟೆಲ್, ರೆಸ್ಟೋರೆಂಟ್, ಕೆಫೆ, ಮಾಲ್, ಫಿಟ್ನೆಸ್ ಕೇಂದ್ರ ಸೇರಿದಂತೆ ವಾಣಿಜ್ಯ ಉದ್ದೇಶಗಳಿಗಾಗಿ ಸಂಗೀತವನ್ನು ಪ್ರಸಾರ ಮಾಡುವ ಸಂಸ್ಥೆಗಳಿಗೆ ಸಂಗೀತ ಪರವಾನಗಿ ಹಾಗೂ ಶುಲ್ಕವನ್ನು ಕಡ್ಡಾಯಗೊಳಿಸಲಾಗಿದೆ. ಈ ಹೊಸ ನಿಯಮವು ಡಿಸೆಂಬರ್ 2026ರಿಂದ ಜಾರಿಗೆ ಬರಲಿದೆ.
ಯುಎಇ ಆರ್ಥಿಕ ಮತ್ತು ಪ್ರವಾಸೋದ್ಯಮ ಸಚಿವಾಲಯವು ಈ ಕುರಿತು ‘ಕಲೆಕ್ಟಿವ್ ಮ್ಯಾನೇಜ್ಮೆಂಟ್ ಇನ್ ಮ್ಯೂಸಿಕ್ ಗೈಡ್’ ಬಿಡುಗಡೆ ಮಾಡಿದೆ. ಸಂಸ್ಥೆಯ ಗಾತ್ರ ಹಾಗೂ ಸಂಗೀತವನ್ನು ಬಳಸುವ ವಿಧಾನವನ್ನು ಆಧರಿಸಿ ಪರವಾನಗಿ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ. ಪರವಾನಗಿ ಒಂದು ವರ್ಷದವರೆಗೆ ಮಾನ್ಯವಾಗಿರಲಿದೆ.
ಸಚಿವಾಲಯದಿಂದ ಮಾನ್ಯತೆ ಪಡೆದ ಎಮಿರೇಟ್ಸ್ ಮ್ಯೂಸಿಕ್ ರೈಟ್ಸ್ ಅಸೋಸಿಯೇಷನ್ ಮತ್ತು ಮ್ಯೂಸಿಕ್ ನೇಷನ್ ಸಂಸ್ಥೆಗಳು ಪರವಾನಗಿ ಶುಲ್ಕವನ್ನು ಸಂಗ್ರಹಿಸಲಿವೆ. ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು, ರಾಷ್ಟ್ರೀಯ ಆಚರಣೆಗಳು ಹಾಗೂ ವೈಯಕ್ತಿಕ ಮತ್ತು ವಾಣಿಜ್ಯೇತರ ಕಾರ್ಯಕ್ರಮಗಳಿಗೆ ಈ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಸಂಗೀತ ಕ್ಷೇತ್ರದಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ತಡೆಯುವುದು ಹಾಗೂ ಕಲಾವಿದರ ಹಕ್ಕುಗಳನ್ನು ರಕ್ಷಿಸುವುದು ಹೊಸ ನಿಯಮದ ಪ್ರಮುಖ ಉದ್ದೇಶವಾಗಿದೆ ಎಂದು ಆರ್ಥಿಕ ಮತ್ತು ಪ್ರವಾಸೋದ್ಯಮ ಸಚಿವ ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ತಿಳಿಸಿದ್ದಾರೆ.
ಸಂಗ್ರಹವಾಗುವ ಪರವಾನಗಿ ಶುಲ್ಕದ 10ರಷ್ಟು ಭಾಗವನ್ನು ‘ಸಾಂಸ್ಕೃತಿಕ ಬೆಂಬಲ ನಿಧಿ’ಗೆ ವರ್ಗಾಯಿಸಲಾಗುತ್ತದೆ. ಈ ಮೂಲಕ ಸ್ಥಳೀಯ ಕಲಾವಿದರು ಮತ್ತು ಸಂಗೀತ ಕ್ಷೇತ್ರದ ಹೊಸ ಪ್ರತಿಭೆಗಳಿಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.
ಹೊಸ ನಿಯಮದ ಅನುಸರಣೆ ಖಚಿತಪಡಿಸಿಕೊಳ್ಳಲು ಸಚಿವಾಲಯದ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಹಾಗೂ ಹಣಕಾಸು ಮತ್ತು ತಾಂತ್ರಿಕ ದಾಖಲೆಗಳ ಪರಿಶೀಲನೆ ನಡೆಯಲಿದೆ. ಹಕ್ಕುಸ್ವಾಮ್ಯ ಉಲ್ಲಂಘನೆಗೆ ಸಂಬಂಧಿಸಿದಂತೆ ಕಲಾವಿದರು ಹಾಗೂ ಸಂಬಂಧಪಟ್ಟವರು ದೂರು ಸಲ್ಲಿಸಲು ಅವಕಾಶವೂ ಇರಲಿದೆ. ಅಗತ್ಯವಿದ್ದಲ್ಲಿ ಪರವಾನಗಿ ಷರತ್ತುಗಳನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಸಚಿವಾಲಯ ಹೊಂದಿರಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.