ಬೆಂಗಳೂರು (www.vknews.in): ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಅವರು ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿರುವ ಸಿಎಂ ಕಚೇರಿಯಲ್ಲಿ ದಿಢೀರ್ ಭೇಟಿ ಮಾಡಿದ್ದಾರೆ. ‘ಎದ್ದೇಳು ಕರ್ನಾಟಕ’ ಸಂಘಟನೆಯ ನಿಯೋಗದೊಂದಿಗೆ ಆಗಮಿಸಿದ್ದ ಪ್ರಕಾಶ್ ರಾಜ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಲೋಪದೋಷಗಳ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಿದರು.
ಪ್ರಕಾಶ್ ರಾಜ್ ನೇತೃತ್ವದ ನಾಗರಿಕ ಸಂಘಟನೆಗಳ ನಿಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳು ಕೈಬಿಡಲಾಗುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದೆ. ಮತದಾನದ ಹಕ್ಕು ಪ್ರತಿಯೊಬ್ಬ ಅರ್ಹ ನಾಗರಿಕನ ಮೂಲಭೂತ ಹಕ್ಕಾಗಿದ್ದು, ಯಾವುದೇ ಲೋಪದಿಂದ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಮನವಿ ಮಾಡಿದೆ.
ಗಮನ ಸೆಳೆದ ಡಿಕೆಶಿ–ಪ್ರಕಾಶ್ ರಾಜ್ ಭೇಟಿ..
ಇತ್ತೀಚಿನ ದಿನಗಳಲ್ಲಿ ಮತದಾರರ ಪಟ್ಟಿ ಹಾಗೂ ವೋಟರ್ ಐಡಿ ವಿಚಾರದಲ್ಲಿ ಧ್ವನಿ ಎತ್ತುತ್ತಿರುವ ಪ್ರಕಾಶ್ ರಾಜ್ ಅವರ ಈ ಭೇಟಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ. ಅಥೀಕ್ ಕೂಡ ಉಪಸ್ಥಿತರಿದ್ದರು.
ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ನಿಯೋಗದ ಆಕ್ಷೇಪ..
ನಿಯೋಗದ ಪ್ರಕಾರ, ರಾಜ್ಯದ ಸುಮಾರು 1.9 ಕೋಟಿಗೂ ಹೆಚ್ಚು ಮತದಾರರ ಹೆಸರುಗಳ ಪರಿಷ್ಕರಣೆ ನಡೆಯುತ್ತಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಸಹಜ ಪ್ರಮಾಣದಲ್ಲಿ ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.
ರಾಜ್ಯದ 3 ಸಾವಿರಕ್ಕೂ ಹೆಚ್ಚು ಬೂತ್ಗಳಲ್ಲಿ ಶೇ.60ಕ್ಕೂ ಅಧಿಕ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ ಎಂದು ನಿಯೋಗ ಮುಖ್ಯಮಂತ್ರಿಯ ಗಮನಕ್ಕೆ ತಂದಿದೆ.
ಇದಲ್ಲದೆ, ಬದುಕಿರುವವರನ್ನೇ ಮತದಾರರ ಪಟ್ಟಿಯಲ್ಲಿ ‘ಮೃತರು’ ಎಂದು ಗುರುತಿಸಲಾಗುತ್ತಿದೆ. ಬಾಡಿಗೆ ಮನೆ ಬದಲಿಸಿರುವವರು ಅಥವಾ ಉದ್ಯೋಗದ ಕಾರಣದಿಂದ ಬೇರೆಡೆ ತೆರಳಿರುವವರನ್ನು ‘ಗೈರು ಹಾಜರು’ ಎಂದು ನಮೂದಿಸುವ ಮೂಲಕ ಅವರ ಮತದಾನದ ಹಕ್ಕಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ನಿಯೋಗ ಆತಂಕ ವ್ಯಕ್ತಪಡಿಸಿದೆ.
BLOಗಳ ತರಬೇತಿ ಬಗ್ಗೆಯೂ ಪ್ರಶ್ನೆ..
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ BLOಗಳಿಗೆ (Booth Level Officers) ಸಮರ್ಪಕ ತರಬೇತಿ ನೀಡದೆ ತರಾತುರಿಯಲ್ಲಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬ ಆರೋಪವನ್ನೂ ನಿಯೋಗ ಮಾಡಿದೆ.
ಕೇವಲ ಒಂದು ತಿಂಗಳ ಅವಧಿಯಲ್ಲಿ ಮನೆಮನೆಗೆ ತೆರಳಿ ನಿಖರವಾಗಿ ಪರಿಶೀಲನೆ ನಡೆಸುವುದು ಕಷ್ಟವಾಗಿದ್ದು, ಇದರಿಂದ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ನಿಯೋಗ ತಿಳಿಸಿದೆ.
ಸಿಎಂ ಮುಂದೆ ಪ್ರಮುಖ ಬೇಡಿಕೆಗಳೇನು?
ಸಮಯ ವಿಸ್ತರಣೆ: ತರಾತುರಿಯಲ್ಲಿ ನಡೆಯುತ್ತಿರುವ SIR (Special Intensive Revision) ಪ್ರಕ್ರಿಯೆಗೆ ಕನಿಷ್ಠ ಮೂರು ತಿಂಗಳ ಕಾಲಾವಕಾಶ ವಿಸ್ತರಿಸುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಬೇಕು.
ಫಾರ್ಮ್ 6 ಮತ್ತು 8ಕ್ಕೆ ಅವಕಾಶ: ಸ್ಥಳಾಂತರಗೊಂಡವರು ಸೇರಿದಂತೆ ಅರ್ಹ ಮತದಾರರಿಗೆ ಮತ್ತೊಮ್ಮೆ ಮನೆಮನೆಗೆ ತೆರಳಿ ಹೆಸರು ಸೇರ್ಪಡೆ ಹಾಗೂ ಅಗತ್ಯ ತಿದ್ದುಪಡಿಗಳಿಗೆ ಅವಕಾಶ ಕಲ್ಪಿಸಬೇಕು.
ವ್ಯಾಪಕ ಜಾಗೃತಿ ಅಭಿಯಾನ: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಪರಿಶೀಲಿಸಿ, ಅಗತ್ಯವಿದ್ದರೆ ತಿದ್ದುಪಡಿ ಅಥವಾ ಸೇರ್ಪಡೆ ಮಾಡಿಕೊಳ್ಳುವ ಕುರಿತು ಸರ್ಕಾರದ ವತಿಯಿಂದ ವ್ಯಾಪಕ ಜನಜಾಗೃತಿ ಮೂಡಿಸಬೇಕು.
ಅರ್ಹ ಮತದಾರರ ಮತದಾನದ ಹಕ್ಕಿಗೆ ಯಾವುದೇ ರೀತಿಯ ಧಕ್ಕೆಯಾಗಲು ಅವಕಾಶ ನೀಡಬಾರದು. ಮತದಾರರ ಹಕ್ಕು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರಕಾಶ್ ರಾಜ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.
ಡಿಕೆಶಿ ಮತ್ತು ಪ್ರಕಾಶ್ ರಾಜ್ ಅವರ ಈ ದಿಢೀರ್ ಭೇಟಿ ಇದೀಗ ರಾಜಕೀಯ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಭೇಟಿಯ ರಾಜಕೀಯ ಮಹತ್ವವೇನು ಎಂಬ ಕುತೂಹಲವೂ ಮೂಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.