ನವದೆಹಲಿ: (www.vknews.in) ಬಿಜೆಪಿ ಬೆಂಬಲಿತ ಎನ್ಡಿಎ ಮೈತ್ರಿಕೂಟದ ಅಂಗಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ)ಗೆ ಸೇರ್ಪಡೆಯಾಗುವಂತೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೀಡಿರುವ ಆಹ್ವಾನಕ್ಕೆ ‘ಕಾಕ್ರಾಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದ್ದಾರೆ.
ಅಠಾವಳೆ ಅವರ ಆಹ್ವಾನದ ಕುರಿತ ವರದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಅಭಿಜೀತ್ ದೀಪ್ಕೆ, “ಕೇವಲ ಒಂದು ತಿಂಗಳ ಹಿಂದೆ ನಾನು ನಿಮಗೆ ದೇಶದ್ರೋಹಿಯಂತೆ ಕಾಣುತ್ತಿದ್ದೆ ಅಲ್ಲವೇ?” ಎಂಬ ಅರ್ಥದ ಪ್ರಶ್ನೆ ಮೂಲಕ ತಮ್ಮ ವಿರುದ್ಧ ಈ ಹಿಂದೆ ಕೇಳಿಬಂದಿದ್ದ ಟೀಕೆಗಳನ್ನು ನೆನಪಿಸಿದ್ದಾರೆ.
ನಾಗಪುರದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ಅಭಿಜೀತ್ ದೀಪ್ಕೆ ಅವರನ್ನು ಯುವ ಹಾಗೂ ಸಕ್ರಿಯ ಅಂಬೇಡ್ಕರ್ವಾದಿ ಎಂದು ಬಣ್ಣಿಸಿದ್ದರು. ದೀಪ್ಕೆ ಅವರು ತಮ್ಮ ಪಕ್ಷಕ್ಕೆ ಸೇರ್ಪಡೆಯಾದರೆ ಪಕ್ಷ ಮತ್ತಷ್ಟು ಬಲಗೊಳ್ಳುವುದರ ಜೊತೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸಲು ಸಹಕಾರಿಯಾಗಲಿದೆ ಎಂದು ಅಠಾವಳೆ ಆಹ್ವಾನ ನೀಡಿದ್ದರು. ಆದರೆ, ಸದ್ಯಕ್ಕೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಆಲೋಚನೆ ತಮ್ಮಲ್ಲಿಲ್ಲ ಎಂದು ಅಭಿಜೀತ್ ದೀಪ್ಕೆ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐಗಳನ್ನು ಬಳಸಿಕೊಂಡು ರಾಜಕೀಯ ಪಕ್ಷಗಳನ್ನು ಒಡೆಯಲಾಗುತ್ತಿದೆ ಹಾಗೂ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ದೀಪ್ಕೆ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಮತ್ತೊಂದು ರಾಜಕೀಯ ಪಕ್ಷವನ್ನು ಕಟ್ಟುವುದರಿಂದ ಯುವಕರ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ದೇಶಕ್ಕೆ ಪ್ರಸ್ತುತ ಬಲವಾದ ಜನಪದ ಚಳವಳಿಯ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದಿಂದ ಭಾರತಕ್ಕೆ ಮರಳಿದ ಬಳಿಕ NEET-UG ಪರೀಕ್ಷಾ ಅಕ್ರಮದ ವಿರುದ್ಧ ದೆಹಲಿಯಲ್ಲಿ ನಡೆದ ಬೃಹತ್ ಯುವ ಪ್ರತಿಭಟನೆಗೆ ಅಭಿಜೀತ್ ದೀಪ್ಕೆ ನೇತೃತ್ವ ವಹಿಸಿದ್ದರು. ಸದ್ಯ ಅವರ ನೇತೃತ್ವದ CJP ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ಮೂಲಸೌಕರ್ಯ ಸುಧಾರಣೆಗೆ ಒತ್ತಾಯಿಸಿ ‘ಸ್ಕೂಲ್ ಠೀಕ್ ಕರೋ’ ಅಭಿಯಾನ ನಡೆಸುತ್ತಿದೆ. ಇದರ ಭಾಗವಾಗಿ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ತಮ್ಮ ಸ್ವಂತ ಗ್ರಾಮವಾದ ಸಂತುಕ್ ಪಿಂಪ್ರಿಯ ಸರ್ಕಾರಿ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ, ಶಾಲೆಗಳ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.