ಮೊಗಾದಿಶು (www.vknews.in): ಟರ್ಕಿಗೆ ತೆರಳುತ್ತಿದ್ದ ಕ್ಯಾಮರೂನ್ ಧ್ವಜದ ಸರಕು ಹಡಗೊಂದನ್ನು ಸೊಮಾಲಿ ಕಡಲ್ಗಳ್ಳರು ಅಪಹರಿಸಿರುವ ಘಟನೆ ನಡೆದಿದೆ. ಹಡಗಿನಲ್ಲಿದ್ದ ಒಟ್ಟು 10 ಸಿಬ್ಬಂದಿಗಳ ಪೈಕಿ ಆರು ಮಂದಿ ಭಾರತೀಯರು ಎನ್ನಲಾಗಿದೆ.
ಟರ್ಕಿ ಸೇನೆಗೆ ಶಸ್ತ್ರಾಸ್ತ್ರಗಳು, ಸಂವಹನ ಹಾಗೂ ಉಪಗ್ರಹ ಉಪಕರಣಗಳನ್ನು ಸಾಗಿಸುತ್ತಿದ್ದ ‘ಎಂವಿ ಲುಟುಫ್’ ಎಂಬ ಸರಕು ಹಡಗನ್ನು ಪಂಟ್ಲ್ಯಾಂಡ್ನ ಐಲ್ ಜಿಲ್ಲೆಯ ಮರಾಯಾ ಕರಾವಳಿಯಿಂದ ಸುಮಾರು ಮೂರೂವರೆ ನಾಟಿಕಲ್ ಮೈಲಿ ದೂರದಲ್ಲಿ ಕಡಲ್ಗಳ್ಳರು ವಶಪಡಿಸಿಕೊಂಡಿದ್ದಾರೆ ಎಂದು ಸೊಮಾಲಿ ಅಧಿಕಾರಿಗಳು ತಿಳಿಸಿದ್ದಾರೆ. ಅಪಹರಣಕ್ಕೊಳಗಾದ ಸಿಬ್ಬಂದಿಗಳಲ್ಲಿ ಆರು ಭಾರತೀಯರ ಜೊತೆಗೆ ಟರ್ಕಿಯ ಓರ್ವ ಪ್ರಜೆ, ಜಾರ್ಜಿಯಾದ ಓರ್ವ ಪ್ರಜೆ ಹಾಗೂ ಇಬ್ಬರು ಸರ್ಬಿಯನ್ ಭದ್ರತಾ ಸಿಬ್ಬಂದಿ ಇದ್ದಾರೆ ಎಂದು ವರದಿಯಾಗಿದೆ.
ಪೋಲಾರ್ ಮೂವ್ ಮೆಂಟ್ ಶಿಪ್ಪಿಂಗ್ ಸಂಸ್ಥೆಯ ಒಡೆತನದಲ್ಲಿರುವ ಈ ಹಡಗು ಮೊಗಾದಿಶುವಿನಲ್ಲಿರುವ ಟರ್ಕಿಶ್ ಮಿಲಿಟರಿ ತರಬೇತಿ ಕೇಂದ್ರಕ್ಕೆ ಶಸ್ತ್ರಾಸ್ತ್ರಗಳು ಹಾಗೂ ವಿವಿಧ ಸಂವಹನ ಮತ್ತು ಉಪಗ್ರಹ ಉಪಕರಣಗಳನ್ನು ಸಾಗಿಸುತ್ತಿತ್ತು ಎನ್ನಲಾಗಿದೆ. ಅಪಹರಣದ ಬಳಿಕ ಕಡಲ್ಗಳ್ಳರು ಹಡಗನ್ನು ಪಂಟ್ಲ್ಯಾಂಡ್ನ ಡಂಗೋರಿಯೊ ಜಿಲ್ಲೆಯ ಗಾರ್ಮಲ್ ಕರಾವಳಿ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಹಡಗು ಕಡಲ್ಗಳ್ಳರ ವಶಕ್ಕೆ ಸಿಕ್ಕಿರುವ ಹಿನ್ನೆಲೆಯಲ್ಲಿ ಟರ್ಕಿಯ ಹೆಲಿಕಾಪ್ಟರ್ಗಳು ಹಾಗೂ ಡ್ರೋನ್ಗಳು ಗಾರ್ಮಲ್ ಕರಾವಳಿ ಪ್ರದೇಶದ ಮೇಲೆ ನಿಗಾ ವಹಿಸುತ್ತಿವೆ ಎಂದು ವರದಿಯಾಗಿದೆ. ಏಪ್ರಿಲ್ 26ರಂದು ‘ಎಂವಿ ಸ್ವೋರ್ಡ್’ ಎಂಬ ಮತ್ತೊಂದು ಹಡಗನ್ನು ಅಪಹರಿಸಿದ್ದ ಕಡಲ್ಗಳ್ಳರ ಗುಂಪೇ ಈ ಹಡಗಿನ ಅಪಹರಣದ ಹಿಂದೆಯೂ ಇರಬಹುದು ಎಂದು ವರದಿಗಳು ತಿಳಿಸಿವೆ. ಆರು ಭಾರತೀಯರು ಸೇರಿದಂತೆ ಒಟ್ಟು 10 ಸಿಬ್ಬಂದಿಗಳು ಕಡಲ್ಗಳ್ಳರ ವಶದಲ್ಲಿರುವ ಹಿನ್ನೆಲೆಯಲ್ಲಿ, ಅವರ ಸುರಕ್ಷತೆ ಹಾಗೂ ಬಿಡುಗಡೆ ಕುರಿತು ಮುಂದಿನ ಬೆಳವಣಿಗೆಗಳತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.