ಸೌತ್ ಕ್ಯಾರೋಲಿನಾ (www.vknews.in): ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ಸ್ವಂತ ಭೂಭಾಗ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಸೌತ್ ಕ್ಯಾರೋಲಿನಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ವಿರುದ್ಧದ ಅಮೆರಿಕದ ಮಿಲಿಟರಿ ಕ್ರಮ ಹಾಗೂ ಸಂಘರ್ಷದ ಕುರಿತು ಪ್ರಸ್ತಾಪಿಸುವ ವೇಳೆ ಈ ಹೇಳಿಕೆ ನೀಡಿದ್ದಾರೆ.
“ಇರಾನ್ ವಿರುದ್ಧದ ಯುದ್ಧದಲ್ಲಿ ನಾವು ಗೆದ್ದಿದ್ದೇವೆಯೇ ಎಂಬುದು ನಮಗೇ ತಿಳಿದಿಲ್ಲ. ಏಕೆಂದರೆ ನಾನು ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ಸ್ವಂತ ಪ್ರದೇಶವೆಂದು ಪರಿಗಣಿಸಿದ್ದೇನೆ” ಎಂದು ಟ್ರಂಪ್ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅಮೆರಿಕದ ನೌಕಾಪಡೆ ಹಾರ್ಮುಜ್ ಜಲಸಂಧಿಯಲ್ಲಿ ದಿಗ್ಬಂಧನ ವಿಧಿಸಿದೆ ಹಾಗೂ ಅಮೆರಿಕ ಅನುಮತಿ ನೀಡಿದರೆ ಮಾತ್ರ ಹಡಗುಗಳು ಆ ಮಾರ್ಗದಲ್ಲಿ ಸಂಚರಿಸಲು ಸಾಧ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಟ್ರಂಪ್ ಅವರ ಹೇಳಿಕೆಗೆ ಇರಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇರಾನ್ನ ಉಪ ವಿದೇಶಾಂಗ ಸಚಿವ ಕಾಜೆಮ್ ಗರೀಬಾಬಾದಿ ಪ್ರತಿಕ್ರಿಯಿಸಿ, ಹಾರ್ಮುಜ್ ಜಲಸಂಧಿ ಅಮೆರಿಕದ ಆಸ್ತಿ ಎಂಬ ಟ್ರಂಪ್ ಅವರ ಹೇಳಿಕೆಯನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ. “ಹಾರ್ಮುಜ್ ಜಲಸಂಧಿಯು ಅಮೆರಿಕದ ಆಸ್ತಿ ಎಂಬುದು ಟ್ರಂಪ್ ಅವರ ಸಂಪೂರ್ಣ ಭ್ರಮೆ” ಎಂದು ಅವರು ತಿರುಗೇಟು ನೀಡಿದ್ದಾರೆ.
ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಮತ್ತು ಇಂಧನ ಸಾಗಣೆಯ ಪ್ರಮುಖ ಸಮುದ್ರ ಮಾರ್ಗವಾಗಿರುವ ಹಿನ್ನೆಲೆಯಲ್ಲಿ, ಟ್ರಂಪ್ ಅವರ ಹೇಳಿಕೆ ಹಾಗೂ ಇರಾನ್ನ ಪ್ರತಿಕ್ರಿಯೆ ಇದೀಗ ಅಂತಾರಾಷ್ಟ್ರೀಯ ವಲಯದಲ್ಲಿ ಗಮನ ಸೆಳೆದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.