ಬೆಂಗಳೂರು (www.vknews.in): ಪನ್ನೀರ್ ಪ್ರಿಯರು ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಹೋಟೆಲ್, ರೆಸ್ಟೋರೆಂಟ್ ಹಾಗೂ ವಿವಿಧ ಆಹಾರ ಸಂಸ್ಥೆಗಳಲ್ಲಿ ಕೃತಕವಾಗಿ ತಯಾರಿಸುವ ‘ಅನಲಾಗ್ ಪನ್ನೀರ್’ ಬಳಕೆಯನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿ ಆದೇಶ ಹೊರಡಿಸಿದೆ.
ಸಾಮಾನ್ಯವಾಗಿ ಅಸಲಿ ಪನ್ನೀರ್ ಅನ್ನು ಸಂಪೂರ್ಣವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಆದರೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಕೆಲವೆಡೆ ಹಾಲಿನ ಬದಲು ಸಸ್ಯಜನ್ಯ ಎಣ್ಣೆ, ಪಿಷ್ಟ ಹಾಗೂ ಇತರ ಪದಾರ್ಥಗಳನ್ನು ಬಳಸಿ ತಯಾರಿಸಿದ ಕೃತಕ ‘ಅನಲಾಗ್ ಪನ್ನೀರ್’ ಅನ್ನು ಗ್ರಾಹಕರಿಗೆ ನೀಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಲಾಗಿದೆ.
ಕೃತಕ ಪನ್ನೀರ್ ತಯಾರಿಕೆಯಲ್ಲಿ ಬಳಸುವ ಗುಣಮಟ್ಟವಿಲ್ಲದ ಪದಾರ್ಥಗಳು ಹಾಗೂ ಕೊಬ್ಬಿನಾಂಶ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮ ಕೈಗೊಂಡಿದೆ. ಹಾಲಿನ ಉತ್ಪನ್ನವಲ್ಲದ ಕೃತಕ ವಸ್ತುವನ್ನು ‘ಪನ್ನೀರ್’ ಹೆಸರಿನಲ್ಲಿ ಗ್ರಾಹಕರಿಗೆ ಮಾರಾಟ ಅಥವಾ ವಿತರಿಸುವುದು ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಪನ್ನೀರ್ ತಯಾರಿಕೆಗೆ ಶುದ್ಧ ಹಾಲು ಹಾಗೂ ಅನುಮತಿಸಲಾದ ಹಾಲಿನ ಉತ್ಪನ್ನಗಳನ್ನೇ ಬಳಸಬೇಕು. ಯಾವುದೇ ಕಾರಣಕ್ಕೂ ಕೃತಕ ‘ಅನಲಾಗ್ ಪನ್ನೀರ್’ ಬಳಸಿ ಗ್ರಾಹಕರಿಗೆ ಆಹಾರ ವಿತರಿಸಬಾರದು ಎಂದು ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ರಾಜ್ಯದ ವಿವಿಧ ಹೋಟೆಲ್ಗಳು, ರೆಸ್ಟೋರೆಂಟ್ಗಳು ಹಾಗೂ ಡೈರಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ವಿಶೇಷ ತಪಾಸಣೆ ಮತ್ತು ದಾಳಿ ನಡೆಸಲಿದ್ದಾರೆ.
ನಿಯಮ ಉಲ್ಲಂಘಿಸಿ ಕೃತಕ ಪನ್ನೀರ್ ಬಳಸುವುದು ಅಥವಾ ಗ್ರಾಹಕರಿಗೆ ವಿತರಿಸುವುದು ಕಂಡುಬಂದಲ್ಲಿ, ಸಂಬಂಧಪಟ್ಟವರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.