ಕೊಪ್ಪಳ (www.vknews.in): ‘ನಾನು ಇಸ್ಲಾಂ ಧರ್ಮದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದೇನೆ. ಬೇರೆ ಧರ್ಮಗಳಿಗಿಂತ ಇಸ್ಲಾಂ ಶ್ರೇಷ್ಠ ಹಾಗೂ ವೈಜ್ಞಾನಿಕ ಧರ್ಮವಾಗಿದೆ’ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಸ್ಲಾಂ ಧರ್ಮದ ಬಗ್ಗೆ ಸಮಾಜದಲ್ಲಿ ಹಲವು ತಪ್ಪು ಕಲ್ಪನೆಗಳಿವೆ. ಹಲವರಿಗೆ ಇಸ್ಲಾಂ ಧರ್ಮದ ನಿಜವಾದ ವಿಚಾರಗಳೇ ತಿಳಿದಿಲ್ಲ ಎಂದರು.
‘ನನಗೆ ಹಜ್ ಯಾತ್ರೆಗೆ ಹೋಗುವ ಆಸೆಯಿದೆ. ಆದರೆ ಅದಕ್ಕೆ ಕೆಲವು ನಿಯಮಗಳಿವೆ. ನಾನು ಕುರಾನ್ ಅಧ್ಯಯನ ಮಾಡಲು ಸಿದ್ಧನಿದ್ದೇನೆ. ಧರ್ಮದ ಕುರಿತು ಇನ್ನಷ್ಟು ಅಧ್ಯಯನ ಮಾಡಬೇಕು. ನಾನು ಮಠ-ಮಂದಿರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹೋಗುವುದಿಲ್ಲ’ ಎಂದು ರಾಯರೆಡ್ಡಿ ಹೇಳಿದರು. ಕುರಾನ್ ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ. ಯಾರು ಬೇಕಾದರೂ ಕುರಾನ್ ಓದಬಹುದು. ಪ್ರವಾದಿ ಮಹಮ್ಮದ್ ಅವರು ಇಡೀ ಮಾನವಕುಲಕ್ಕೆ ಸಂದೇಶ ನೀಡಿದ್ದಾರೆ ಎಂದು ಅವರು ಹೇಳಿದರು.
ಇಸ್ಲಾಂ ಧರ್ಮದಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂಬುದರ ಕುರಿತು ಹಲವು ವಿಚಾರಗಳನ್ನು ತಿಳಿಸಲಾಗಿದೆ. ಧರ್ಮದ ಹಿಂದಿನ ಇತಿಹಾಸವನ್ನು ಅಧ್ಯಯನ ಮಾಡಬೇಕು. ಮತಾಂಧತೆ ಮತ್ತು ಜಾತಿವಾದವನ್ನು ಬಿಟ್ಟು ಎಲ್ಲಾ ಧರ್ಮಗಳಲ್ಲಿರುವ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.
ಮಸೀದಿಗೆ ಹೋಗಿ ‘ಅಲ್ಲಾಹು ಅಕ್ಬರ್’ ಎನ್ನುವುದರಿಂದ ಮಾತ್ರ ಧಾರ್ಮಿಕತೆ ಪೂರ್ಣವಾಗುವುದಿಲ್ಲ. ಇದೇ ರೀತಿ ದೇವಸ್ಥಾನಕ್ಕೆ ಹೋಗುವುದರಿಂದಲೂ ಎಲ್ಲವೂ ಮುಗಿಯುವುದಿಲ್ಲ. ಎಲ್ಲ ಧರ್ಮಗಳಲ್ಲಿರುವ ಒಳ್ಳೆಯ ತತ್ವಗಳನ್ನು ಅರಿತುಕೊಂಡು ಬದುಕಬೇಕು ಎಂದರು.
ಇಸ್ಲಾಂನಲ್ಲಿ ನಮಾಜ್, ಬಡವರಿಗೆ ದಾನ, ಆಹಾರ ಪದ್ಧತಿ ಹಾಗೂ ಮದ್ಯಪಾನದಿಂದ ದೂರವಿರುವುದು ಸೇರಿದಂತೆ ಜೀವನಕ್ಕೆ ಸಂಬಂಧಿಸಿದ ಹಲವು ನಿಯಮಗಳನ್ನು ತಿಳಿಸಲಾಗಿದೆ. ದೇವರು ಒಬ್ಬನೇ ಎಂಬ ಸಂದೇಶವನ್ನೂ ಇಸ್ಲಾಂ ನೀಡುತ್ತದೆ ಎಂದು ರಾಯರೆಡ್ಡಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಅನುದಾನ ದೊರೆತಿದೆ. ಬಸವರಾಜ ರಾಯರೆಡ್ಡಿ ಅವರೂ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ’ ಎಂದು ಅವರು ತಿಳಿಸಿದರು.
ಇಸ್ಲಾಂ ಧರ್ಮದ ಕುರಿತು ರಾಯರೆಡ್ಡಿ ಅವರಿಗೆ ಉತ್ತಮ ಜ್ಞಾನವಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಶ್ಲಾಘಿಸಿದರು. ಎಲ್ಲರ ಸೃಷ್ಟಿಕರ್ತ ಒಬ್ಬನೇ ಎಂಬ ಭಾವನೆಯೊಂದಿಗೆ ಪರಸ್ಪರ ಪ್ರೀತಿಯಿಂದ ಬದುಕಬೇಕು. ಧರ್ಮಗಳ ನಡುವೆ ಜಗಳ ಹಚ್ಚಿ ರಾಜಕೀಯ ಲಾಭ ಪಡೆಯಬಾರದು. ಧರ್ಮವನ್ನು ರಾಜಕಾರಣದೊಂದಿಗೆ ಬೆರೆಸಬಾರದು ಎಂದು ಅವರು ಹೇಳಿದರು. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಪಕ್ಷಗಳಿಗೆ ಬೆಂಬಲ ನೀಡಬಾರದು ಎಂದು ಯತೀಂದ್ರ ಸಿದ್ದರಾಮಯ್ಯ ಇದೇ ವೇಳೆ ಕರೆ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.