ವಡೋದರ (www.vknews.in): ರಕ್ಷಾ ಬಂಧನದ ದಿನ ಮನೆಗೆ ಪಾರ್ಸೆಲ್ ತಲುಪಿಸಲು ಬಂದ ಡೆಲಿವರಿ ಬಾಯ್ಗೆ ಯುವತಿಯೊಬ್ಬರು ರಾಖಿ ಕಟ್ಟಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಡೆಲಿವರಿ ಬಾಯ್ ನೀಡಿದ ₹50 ಉಡುಗೊರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ವಡೋದರದ ಆಕಾಂಕ್ಷಾ ಸಿಂಗ್ ಎಂಬುವರು ಈ ಭಾವನಾತ್ಮಕ ಕ್ಷಣದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಈ ಬಾರಿ ನಮ್ಮ ಡೆಲಿವರಿ ಪಾರ್ಟ್ನರ್ಗೆ ರಕ್ಷಾ ಬಂಧನದ ರಾಖಿ ಕಟ್ಟಲು ಇದ್ದಕ್ಕಿದ್ದಂತೆ ನಿರ್ಧರಿಸಿದ್ದೆವು. ಆದರೆ ಆತ ಆ ಕ್ಷಣವನ್ನು ಮರೆಯಲಾಗದಂತೆ ಮಾಡಿದರು’ ಎಂದು ಅವರು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಆಕಾಂಕ್ಷಾ ಬಾಗಿಲು ತೆರೆದು ಡೆಲಿವರಿ ಬಾಯ್ನೊಂದಿಗೆ ಮಾತನಾಡುತ್ತಾರೆ. ಬಳಿಕ ಅವರಿಗೆ ರಾಖಿ ಕಟ್ಟಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಅನಿರೀಕ್ಷಿತವಾಗಿ ದೊರೆತ ಈ ಸಹೋದರತ್ವದ ಪ್ರೀತಿಗೆ ಡೆಲಿವರಿ ಬಾಯ್ ಕೂಡ ಭಾವುಕರಾಗಿ ಸಹೋದರನಂತೆ ಪ್ರತಿಕ್ರಿಯಿಸಿದ್ದಾರೆ.
ರಾಖಿ ಕಟ್ಟಿದ ಬಳಿಕ ಸಹೋದರಿಗೆ ಉಡುಗೊರೆ ಅಥವಾ ಹಣ ನೀಡುವುದು ಸಂಪ್ರದಾಯ. ಇದೇ ಭಾವನೆಯಿಂದ ಡೆಲಿವರಿ ಬಾಯ್ ಆಕಾಂಕ್ಷಾಗೆ ಹಣ ನೀಡಲು ಮುಂದಾಗಿದ್ದಾರೆ. ಆಕೆ ಬೇಡ ಎಂದರೂ ಅವರು ಒಪ್ಪಲಿಲ್ಲ. ಡಿಜಿಟಲ್ ಪಾವತಿಯ ಕಾಲವಾಗಿರುವುದರಿಂದ ಜೇಬಿನಲ್ಲಿ ಹೆಚ್ಚು ನಗದು ಇರಲಿಲ್ಲ. ಹೀಗಾಗಿ ಮೊದಲು ಸ್ಕ್ಯಾನರ್ ಕೇಳಿದ ಅವರು, ಆಕಾಂಕ್ಷಾ ನಿರಾಕರಿಸಿದ ಬಳಿಕ ಜೇಬಿನಲ್ಲಿದ್ದ ₹50ರ ನೋಟನ್ನೇ ಉಡುಗೊರೆಯಾಗಿ ನೀಡಿದ್ದಾರೆ. ಹಣ ನೀಡುವಾಗ ‘ಅಬ್ ಬೆಹೆನ್ ಬೋಲಾ ಹೈ ನಾ’ (ಈಗ ತಂಗಿ ಅಂದಿದ್ದೀನಲ್ಲ) ಎಂದು ಅವರು ಹೇಳಿದ್ದಾಗಿ ಆಕಾಂಕ್ಷಾ ತಿಳಿಸಿದ್ದಾರೆ.
ವಿಡಿಯೋ ಹಂಚಿಕೊಂಡ ಆಕಾಂಕ್ಷಾ, ‘ಕೆಲವು ಉಡುಗೊರೆಗಳು ಕೇವಲ ₹50 ಆಗಿದ್ದರೂ, ಅವು ಬೆಲೆಕಟ್ಟಲಾಗದವು’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ‘ಈ ₹50 ನಾವು ತೆಗೆದುಕೊಂಡ ಹಣವಲ್ಲ. ಕೆಲವೇ ನಿಮಿಷಗಳ ಕಾಲ ಭೇಟಿಯಾದ ವ್ಯಕ್ತಿಯಿಂದ ಸಿಕ್ಕ ನೆನಪು, ಆಶೀರ್ವಾದ, ಪ್ರೀತಿ ಮತ್ತು ಗೌರವದ ಸಂಕೇತ’ ಎಂದು ಅವರು ಹೇಳಿದ್ದಾರೆ. ಯುವತಿ ತೋರಿದ ಸಹೋದರತ್ವದ ಪ್ರೀತಿ ಹಾಗೂ ಡೆಲಿವರಿ ಬಾಯ್ನ ಹೃದಯವಂತಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಣದ ಮೌಲ್ಯಕ್ಕಿಂತ ಅದರ ಹಿಂದಿರುವ ಭಾವನೆ ದೊಡ್ಡದು ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
https://www.instagram.com/reel/DckquRBo8uN/?utm_source=ig_web_button_share_sheet
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.