ಪುತ್ತೂರು (www.vknews.in): ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ (ರಿ.), ಪುತ್ತೂರು ಇದರ ವತಿಯಿಂದ ಇಂದು (ಆ.31) ಆಯೋಜಿಸಲು ಉದ್ದೇಶಿಸಲಾಗಿದ್ದ “ಪುತ್ತೂರು ಸೌಹಾರ್ದ ಚಲೋ” ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.
ಪುತ್ತೂರಿನ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಮಾನ ಮನಸ್ಕರು, ಬುದ್ಧಿಜೀವಿಗಳು, ಚಿಂತಕರು ಹಾಗೂ ಜಾತ್ಯತೀತ ನಾಯಕರನ್ನು ಒಗ್ಗೂಡಿಸಿ ಕಾರ್ಯಕ್ರಮ ನಡೆಸಲು ಚರ್ಚೆಗಳು ನಡೆದಿದ್ದವು. ಇದರ ಅಂಗವಾಗಿ ಗಾಂಧಿ ಕಟ್ಟೆಯಿಂದ ಮಿನಿ ವಿಧಾನಸೌಧದವರೆಗೆ ಶಾಂತಿ ಯಾತ್ರೆ ನಡೆಸಲು ಯೋಜಿಸಲಾಗಿತ್ತು.
ಆದರೆ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪರಿಷತ್ನ ನಾಯಕರು ವಿವಿಧ ಹಂತಗಳಲ್ಲಿ ಚರ್ಚೆ ನಡೆಸಿದ ಬಳಿಕ, ಆ.31ರಂದು ಇತರ ಕಾರ್ಯಕ್ರಮಗಳು ಹಾಗೂ ಪೊಲೀಸ್ ಬಂದೋಬಸ್ತ್ಗೆ ಸಂಬಂಧಿಸಿದ ಕಾರಣಗಳಿಂದ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸೂಕ್ತ ಸಂದರ್ಭದಲ್ಲಿ ಕಾನೂನುಬದ್ಧವಾಗಿ ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿರುವ ಹಿನ್ನೆಲೆಯಲ್ಲಿ, ಆ.31ರಂದು ನಿಗದಿಯಾಗಿದ್ದ ಶಾಂತಿ ಯಾತ್ರೆ ನಡೆಯುವುದಿಲ್ಲ ಎಂದು ಪರಿಷತ್ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಪರಿಷತ್ನ ಎಲ್ಲಾ ಕಾರ್ಯಕರ್ತರು ಹಾಗೂ ಬೆಂಬಲಿಗರು ಯಾವುದೇ ಕಾರಣಕ್ಕೂ ಗೊಂದಲ, ಉದ್ವಿಗ್ನತೆ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ವಾತಾವರಣವನ್ನು ಸೃಷ್ಟಿಸಬಾರದು ಎಂದು ಮನವಿ ಮಾಡಲಾಗಿದೆ.
ಸಂವಿಧಾನ ಮತ್ತು ಕಾನೂನನ್ನು ಗೌರವಿಸುವ ಪರಿಷತ್, ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸಿ, ಮುಂದಿನ ದಿನಗಳಲ್ಲಿ ಕಾನೂನುಬದ್ಧವಾಗಿ ಹಾಗೂ ಶಾಂತಿಯುತವಾಗಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆ.
“ಶಾಂತಿ ನಮ್ಮ ಉದ್ದೇಶ – ಕಾನೂನು ಪಾಲನೆ ನಮ್ಮ ಬದ್ಧತೆ” ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ (ರಿ.) ತಿಳಿಸಿದೆ. ಈ ಕುರಿತು ಪರಿಷತ್ನ ಸಂಚಾಲಕ ನೂರುದ್ದೀನ್ ಸಾಲ್ಮರ ಹಾಗೂ ಅಧ್ಯಕ್ಷ ಅಶ್ರಫ್ ಕಲ್ಲೇಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.