ಕೊಡಗು (www.vknews.in): ಮಗಳು ತಡವಾಗಿ ಮನೆಗೆ ಬಂದಿದ್ದಕ್ಕೆ ತಾಯಿ ಗದರಿಸಿದ ವಿಚಾರಕ್ಕೆ ಮನನೊಂದು ಕೆರೆಗೆ ಹಾರಿದ ಬಾಲಕಿಯನ್ನು ರಕ್ಷಿಸಲು ತೆರಳಿದ ತಾಯಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಡಿಕೇರಿ ತಾಲ್ಲೂಕಿನ ತಲಕಾವೇರಿ ಸಮೀಪದ ಕೆಂಪರಾಜಮೊಟ್ಟೆ ಕಾಲೋನಿಯಲ್ಲಿ ನಡೆದಿದೆ. ಮೃತರನ್ನು 45 ವರ್ಷದ ಪ್ರೇಮಾ ಹಾಗೂ ಅವರ 14 ವರ್ಷದ ಪುತ್ರಿ ಪ್ರಿಯಾಂಕಾ ಎಂದು ಗುರುತಿಸಲಾಗಿದೆ.
ಪ್ರಿಯಾಂಕಾ ಕರಿಕೆಯ ಆಶ್ರಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶನಿವಾರ ಶಾಲೆಯಿಂದ ಊರಿಗೆ ಬಂದಿದ್ದ ಪ್ರಿಯಾಂಕಾ ಮನೆಗೆ ತಡವಾಗಿ ಬಂದಿದ್ದಳು. ಈ ವಿಚಾರವಾಗಿ ತಾಯಿ ಪ್ರೇಮಾ ಮಗಳನ್ನು ಗದರಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಪ್ರಿಯಾಂಕಾ, ಮನೆಯ ಸಮೀಪದಲ್ಲಿದ್ದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಅಲ್ಲಿಂದ ಓಡಿದ್ದಾಳೆ.
ಮಗಳನ್ನು ತಡೆಯಲು ಪ್ರೇಮಾ ಕೂಡ ಹಿಂದೆಯೇ ಓಡಿದ್ದಾರೆ. ಆದರೆ, ಅವರು ಕೆರೆ ಬಳಿ ತಲುಪುವಷ್ಟರಲ್ಲಿ ಪ್ರಿಯಾಂಕಾ ನೀರಿಗೆ ಹಾರಿದ್ದಾಳೆ. ಮಗಳನ್ನು ಉಳಿಸಲೇಬೇಕೆಂಬ ಆತಂಕದಲ್ಲಿ ಈಜು ಬಾರದಿದ್ದರೂ ಪ್ರೇಮಾ ಕೂಡ ಕೆರೆಗೆ ಹಾರಿದ್ದಾರೆ. ಸುಮಾರು 15ರಿಂದ 20 ಅಡಿ ಆಳವಿದ್ದ ಕೆರೆಯಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳೀಯರು ರಕ್ಷಣೆಗೆ ಮುಂದಾದರೂ ಕೆರೆಯ ಆಳ ಹೆಚ್ಚಿದ್ದರಿಂದ ತಕ್ಷಣ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ.
ಸೋಮವಾರ ಕತ್ತಲಾದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದ್ದು, ಮಂಗಳವಾರ ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಭಾಗಮಂಡಲ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.