ಜೈಪುರ (www.vknews.in): ದೇವಸ್ಥಾನದಲ್ಲಿ ಭಜನೆಯ ಧ್ವನಿ ಕಡಿಮೆ ಮಾಡುವಂತೆ ಸೂಚಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವೃದ್ಧ ಅರ್ಚಕನ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಜೈಪುರದ ಕರ್ಧಾನಿ ಪ್ರದೇಶದ ನಿವಾರು ರಸ್ತೆಯ ಗಣೇಶ್ ನಗರ ಮೇನ್ನಲ್ಲಿರುವ ಶಿವ ದೇವಸ್ಥಾನದಲ್ಲಿ ರಾತ್ರಿ ಸುಮಾರು 7.45ಕ್ಕೆ ಘಟನೆ ನಡೆದಿದೆ ಎನ್ನಲಾಗಿದೆ. ದೇವಸ್ಥಾನದ ಸ್ಪೀಕರ್ನಲ್ಲಿ ಭಜನೆ ಪ್ರಸಾರವಾಗುತ್ತಿದ್ದ ವೇಳೆ, ಸಮೀಪದ ನಿವಾಸಿಗಳು ಧ್ವನಿ ಕಡಿಮೆ ಮಾಡುವಂತೆ ಅರ್ಚಕರಿಗೆ ಸೂಚಿಸಿದ್ದಾರೆ.
ಈ ವಿಚಾರದಲ್ಲಿ ಅರ್ಚಕ ರಾಮಕೃಷ್ಣ ಮತ್ತು ಸ್ಥಳೀಯ ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಯುವಕ ಅರ್ಚಕರಿಗೆ ಕಿಕ್ ಮತ್ತು ಪಂಚ್ಗಳಿಂದ ಹಲ್ಲೆ ನಡೆಸಿ ನೆಲಕ್ಕೆ ಕೆಡವಿದ್ದಾನೆ ಎನ್ನಲಾಗಿದೆ.
ಸಿಸಿಟಿವಿ ದೃಶ್ಯಗಳಲ್ಲಿ ಅರ್ಚಕನನ್ನು ನೆಲಕ್ಕೆ ಕೆಡವಿದ ಬಳಿಕವೂ ಹಲ್ಲೆ ಮುಂದುವರಿದಿರುವುದು ಕಂಡುಬರುತ್ತದೆ ಎಂದು ವರದಿಯಾಗಿದೆ. ಹಲ್ಲೆಯ ವೇಳೆ ಅರ್ಚಕರ ಬಟ್ಟೆಗಳೂ ಹರಿದಿವೆ. ಘಟನೆ ಗಮನಿಸಿದ ಸ್ಥಳೀಯರು ಮಧ್ಯಪ್ರವೇಶಿಸಿ ಹಲ್ಲೆ ನಡೆಸುತ್ತಿದ್ದ ವ್ಯಕ್ತಿಯಿಂದ ಅರ್ಚಕರನ್ನು ಬಿಡಿಸಿದ್ದಾರೆ.
ಕರ್ಧಾನಿ ಪೊಲೀಸ್ ಠಾಣೆ ಎಸ್ಎಚ್ಒ ಸವಾಯಿ ಸಿಂಗ್ ಅವರ ಪ್ರಕಾರ, ಗಣೇಶ್ ನಗರ ಮೇನ್ ನಿವಾಸಿ ಪಂಡಿತ್ ರಾಮಕೃಷ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಶಾಂತಿ ಭಂಗಕ್ಕೆ ಕಾರಣವಾದ ಆರೋಪದಲ್ಲಿ ಹರೀಶ್ ಚತುರ್ವೇದಿ ಮತ್ತು ಅವರ ಪುತ್ರ ದೇವಾಂಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ದೂರು ದಾಖಲಾಗಿದೆ.
ದೇವಸ್ಥಾನದ ಆವರಣಕ್ಕೆ ಹರೀಶ್, ದೇವಾಂಶ್ ಮತ್ತು ರಿತು ಬಂದು ಭಜನೆಯ ಧ್ವನಿ ವಿಚಾರವಾಗಿ ಅರ್ಚಕರೊಂದಿಗೆ ಜಗಳ ನಡೆಸಿ, ಭಕ್ತರ ಸಮ್ಮುಖದಲ್ಲೇ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಮಕೃಷ್ಣ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆಗೆ ಸ್ಥಳೀಯರು ಹಾಗೂ ಅರ್ಚಕರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದೇ ವೇಳೆ ಆರೋಪಿತ ಕುಟುಂಬದ ಪರವಾಗಿಯೂ ಪ್ರತಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ಮುಂದುವರಿದಿದ್ದು, ತನಿಖೆಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.