ಮುಂಬೈ (www.vknews.in): ತಂದೆಯ ಎರಡನೇ ಮದುವೆಯನ್ನು ವಿರೋಧಿಸಿದ್ದಕ್ಕಾಗಿ 20 ವರ್ಷದ ಮಗಳನ್ನು ತಂದೆಯೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮುಂಬೈನ ವಡಾಲಾದಲ್ಲಿ ನಡೆದಿದೆ. ಮಗಳು ರಿಫಾತ್ಳಿಗೆ ಬಿರಿಯಾನಿಯಲ್ಲಿ ವಿಷ ಬೆರೆಸಿ ನೀಡಿದ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪದಲ್ಲಿ ಷರೀಫ್ ರಾಜಾ ಹುಸೇನ್ ಖಾನ್ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿ, ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲ ವರದಿ ತಿಳಿಸಿದೆ. ಅಕ್ಟೋಬರ್ 2ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿ ಮನೆಯಲ್ಲಿ ಬಿರಿಯಾನಿ ಖರೀದಿಸಿ ಅದರಲ್ಲಿ ವಿಷ ಬೆರೆಸಿ ತನ್ನ ಮಕ್ಕಳಿಗೆ ನೀಡಿದ್ದ ಎಂದು ವರದಿಯಾಗಿದೆ.
ಬಿರಿಯಾನಿ ಸೇವಿಸಿದ ಬಳಿಕ ಮಗಳನ್ನು ಮನೆಯ ಟೆರೇಸ್ಗೆ ಕರೆದೊಯ್ದು ಕತ್ತು ಹಿಸುಕಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಆಕೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ವರದಿ ತಿಳಿಸಿದೆ.
ಮಗಳ ಸಾವು ಆಹಾರದಲ್ಲಿದ್ದ ವಿಷದಿಂದ ಸಂಭವಿಸಿದೆ ಎಂದು ಬಿಂಬಿಸಲು ಆರೋಪಿ ಪ್ರಯತ್ನಿಸಿದ್ದ ಎನ್ನಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆಯ ಮೇಲೆ ಕತ್ತು ಹಿಸುಕಿದ ಗುರುತುಗಳು ಪತ್ತೆಯಾಗಿದ್ದು, ಸಾವಿನ ಕುರಿತು ಅನುಮಾನ ಮೂಡಿಸಿತು.
ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದರು. ಆರೋಪಿಯ ಅಸಹಜ ವರ್ತನೆಯನ್ನು ಗಮನಿಸಿದ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ, ಮಗಳ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಮೂಲ ವರದಿ ಹೇಳಿದೆ. ತಂದೆಯ ಎರಡನೇ ಮದುವೆಗೆ ಮಗಳು ವಿರೋಧ ವ್ಯಕ್ತಪಡಿಸಿದ್ದೇ ಕೃತ್ಯಕ್ಕೆ ಕಾರಣವೆಂದು ಆರೋಪಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.