(www.vknews.in) : ಭಾರತೀಯ ಮುಸ್ಲಿಂ ಸಮಾಜವನ್ನು ಒಂದೇ ಸಮುದಾಯದ ಒಂದೇ ಭಾಷೆ ಮತ್ತು ಒಂದೇ ಸಾಮಾಜಿಕ ಹಿನ್ನೆಲೆಯ ಸಮುದಾಯವೆಂದು ಗ್ರಹಿಸುವುದು ಅದರ ಇತಿಹಾಸ ಮತ್ತು ಸಾಮಾಜಿಕ ವಾಸ್ತವವನ್ನು ಸರಳೀಕರಿಸಿದಂತಾಗುತ್ತದೆ. ಭಾರತದ ಬಹುಪಾಲು ಮುಸ್ಲಿಮರು ಸ್ಥಳೀಯ ಸಮುದಾಯಗಳಿಂದ ವಿವಿಧ ಕಾಲಘಟ್ಟಗಳಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರಾಗಿದ್ದು, ಅವರ ಭಾಷೆ, ವೃತ್ತಿ, ಸಂಸ್ಕೃತಿ ಮತ್ತು ಸಾಮಾಜಿಕ ಗುರುತುಗಳಲ್ಲಿ ಈ ನೆಲದ ಇತಿಹಾಸದ ಛಾಪು ಸ್ಪಷ್ಟವಾಗಿದೆ. ಹೀಗಾಗಿ ಭಾರತೀಯ ಮುಸ್ಲಿಮರ ಇತಿಹಾಸವು ಕೇವಲ ಧಾರ್ಮಿಕ ಪರಿವರ್ತನೆಯ ಕಥೆಯಲ್ಲ ಅದು ಸ್ಥಳೀಯ ಸಮಾಜದ ಪಲ್ಲಟ., ಸಾಂಸ್ಕೃತಿಕ ಸಂಯೋಜನೆ ಮತ್ತು ಸಾಮಾಜಿಕ ನ್ಯಾಯದ ಅಪೂರ್ಣ ಹೋರಾಟದ ಕಥೆಯೂ ಹೌದು.
ಧರ್ಮ ಒಂದಾದರೂ ಸಾಮಾಜಿಕ ವಾಸ್ತವ ಒಂದಲ್ಲ:
ಕರ್ನಾಟಕದ ಮುಸ್ಲಿಂ ಸಮಾಜವನ್ನೇ ಗಮನಿಸಿದರೆ ನದಾಫ್, ಅನ್ಸಾರಿ, ಪಿಂಜಾರ, ನವಾಯತ, ಬ್ಯಾರಿ ಸೇರಿದಂತೆ ಹಲವು ಸಮುದಾಯಗಳು ತಮ್ಮದೇ ಆದ ಭಾಷೆ, ವೃತ್ತಿ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಹೊಂದಿವೆ. ಕನ್ನಡ, ತುಳು, ಕೊಂಕಣಿ, ತೆಲುಗು, ಬ್ಯಾರಿ ಮತ್ತು ನವಾಯತಿ ಭಾಷೆಗಳು ಮುಸ್ಲಿಮರ ಬದುಕಿನ ವೈವಿಧ್ಯವನ್ನು ಪ್ರತಿಬಿಂಬಿಸುತ್ತವೆ. ಬೆಂಗಳೂರು ಕರಗದಲ್ಲಿ ಟವಕ್ಕಲ್ ಮಸ್ತಾನ್ ದರ್ಗಾಕ್ಕೆ ಸಲ್ಲಿಸುವ ಗೌರವ, ಶಬರಿಮಲೆ ಯಾತ್ರೆಯಲ್ಲಿ ವಾವರ್ ಸ್ವಾಮಿಗೆ ಇರುವ ಸ್ಥಾನ ಹಾಗೂ ಮಂಟೇಸ್ವಾಮಿ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಮುಸ್ಲಿಂ ಶಿಷ್ಯರ ಸ್ಮೃತಿಗಳು ಧಾರ್ಮಿಕ ಗಡಿಗಳನ್ನು ಮೀರಿದ ಸ್ಥಳೀಯ ಸಾಂಸ್ಕೃತಿಕ ಸಂಬಂಧಗಳಿಗೆ ಉದಾಹರಣೆಗಳಾಗಿವೆ.
ಈ ಪರಂಪರೆಗಳು ಭಾರತೀಯ ಸಮಾಜದ ಬಹುಸಾಂಸ್ಕೃತಿಕ ಸ್ವರೂಪವನ್ನು ಪರಿಚಯಿಸುತ್ತವೆ. ಆದರೆ ಸೌಹಾರ್ದದ ಇತಿಹಾಸವನ್ನು ಸ್ಮರಿಸುವುದಷ್ಟೇ ಸಾಕಾಗುವುದಿಲ್ಲ ಆ ಸಮಾಜಗಳ ಒಳಗಿರುವ ಅಸಮಾನತೆಗಳನ್ನೂ ಗುರುತಿಸಬೇಕಾಗಿದೆ. ಇಸ್ಲಾಂ ಧರ್ಮದ ಮೂಲತತ್ತ್ವ ಸಮಾನತೆಯನ್ನು ಪ್ರತಿಪಾದಿಸಿದರೂ, ಭಾರತೀಯ ಸಾಮಾಜಿಕ ವ್ಯವಸ್ಥೆಯ ಪ್ರಭಾವದಿಂದ ಮುಸ್ಲಿಂ ಸಮಾಜದೊಳಗೂ ಶ್ರೇಣೀಕರಣ ಬೆಳೆದಿದೆ. ಅಶ್ರಫ್, ಅಜ್ಲಫ್, ಅರ್ಜಲ್ ಎಂಬ ವರ್ಗೀಕರಣಗಳ ಚರ್ಚೆ ಇದಕ್ಕೆ ಸಂಬಂಧಿಸಿದೆ.
ವಂಶಾವಳಿ, ಸಾಂಪ್ರದಾಯಿಕ ವೃತ್ತಿ, ವಿವಾಹ ಸಂಬಂಧ ಮತ್ತು ಸಾಮಾಜಿಕ ಗೌರವದ ಆಧಾರದಲ್ಲಿ ಅಂತರಗಳು ರೂಪುಗೊಂಡಿರುವುದನ್ನು ಸಮಾಜಶಾಸ್ತ್ರೀಯ ಅಧ್ಯಯನಗಳು ದಾಖಲಿಸಿವೆ. ಸಾಚಾರ್ ಸಮಿತಿ ವರದಿ ಮುಸ್ಲಿಮರ ಶೈಕ್ಷಣಿಕ, ಆರ್ಥಿಕ ಮತ್ತು ಉದ್ಯೋಗ ಸಂಬಂಧಿತ ಹಿಂದುಳಿತವನ್ನು ಬೆಳಕಿಗೆ ತಂದರೆ, ಪಸ್ಮಂದಾ ಚಳವಳಿ ಮುಸ್ಲಿಂ ಸಮಾಜದೊಳಗಿನ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯ ಮತ್ತು ಹಕ್ಕುಗಳ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಪ್ರತಿಪಾದಿಸುವುದರ ಜೊತೆಗೆ ಅಲ್ಪಸಂಖ್ಯಾತ ಸಮುದಾಯಗಳ ಒಳಗಿನ ಅಸಮಾನತೆಗಳನ್ನೂ ಪ್ರಶ್ನಿಸುವುದು ಸಾಮಾಜಿಕ ನ್ಯಾಯದ ಅನಿವಾರ್ಯ ಭಾಗವಾಗಿದೆ.
1950ರ ರಾಷ್ಟ್ರಪತಿಗಳ ಆದೇಶ: ಧರ್ಮವೇ ಮಾನದಂಡವಾಗಬೇಕೇ?
ಇಲ್ಲಿಯೇ ದಲಿತ ಮುಸ್ಲಿಮರು ಮತ್ತು ದಲಿತ ಕ್ರೈಸ್ತರ ಮೀಸಲಾತಿ ಪ್ರಶ್ನೆ ಮಹತ್ವ ಪಡೆಯುತ್ತದೆ. ಸಂವಿಧಾನದ 341ನೇ ವಿಧಿಯಡಿ ಹೊರಡಿಸಲಾದ 1950ರ ರಾಷ್ಟ್ರಪತಿಗಳ ಆದೇಶವು ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಆರಂಭದಲ್ಲಿ ಹಿಂದೂ ಧರ್ಮದ ಸಮುದಾಯಗಳಿಗೆ ಸೀಮಿತಗೊಳಿಸಿತು. 1956ರಲ್ಲಿ ಸಿಖ್ಖರು ಮತ್ತು 1990ರಲ್ಲಿ ಬೌದ್ಧ ಧರ್ಮದ ಅನುಯಾಯಿಗಳಿಗೂ ಈ ಮಾನ್ಯತೆಯನ್ನು ವಿಸ್ತರಿಸಲಾಯಿತು. ಆದರೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತ ಸಮುದಾಯಗಳು ಪರಿಶಿಷ್ಟ ಜಾತಿ ಸ್ಥಾನಮಾನದಿಂದ ಹೊರಗೇ ಉಳಿದಿವೆ. ಮತಾಂತರದಿಂದ ವ್ಯಕ್ತಿಯ ಧಾರ್ಮಿಕ ಗುರುತು ಬದಲಾಗಬಹುದು. ಆದರೆ ಅದರಿಂದಲೇ ಶತಮಾನಗಳ ಸಾಮಾಜಿಕ ತಾರತಮ್ಯ, ವೃತ್ತಿ ಆಧಾರಿತ ಕಳಂಕ ಮತ್ತು ವಿವಾಹ ಸಂಬಂಧಗಳಲ್ಲಿನ ನಿರ್ಬಂಧಗಳು ತಕ್ಷಣವೇ ಅಳಿದುಹೋಗುತ್ತವೆಯೇ? ಇದೇ ಈ ಚರ್ಚೆಯ ಕೇಂದ್ರ ಪ್ರಶ್ನೆ.
ನ್ಯಾಯಮೂರ್ತಿ ರಂಗನಾಥ್ ಮಿಶ್ರ ಆಯೋಗವು ಪರಿಶಿಷ್ಟ ಜಾತಿ ಸ್ಥಾನಮಾನವನ್ನು ನಿರ್ಧರಿಸುವಾಗ ಧರ್ಮವನ್ನು ನಿರ್ಬಂಧಕ ಮಾನದಂಡವಾಗಿಸಬಾರದು ಎಂಬ ನಿಲುವನ್ನು ಮುಂದಿಟ್ಟಿತ್ತು. ಮತ್ತೊಂದೆಡೆ, ಪರಿಶಿಷ್ಟ ಜಾತಿ ಸ್ಥಾನಮಾನವು ಐತಿಹಾಸಿಕ ಅಸ್ಪೃಶ್ಯತೆಯ ಅನುಭವಕ್ಕೆ ಸಂಬಂಧಿಸಿದೆ ಎಂಬ ಆಧಾರದಲ್ಲಿ ಪ್ರಸ್ತುತ ಕಾನೂನು ವ್ಯವಸ್ಥೆಯನ್ನು ಸಮರ್ಥಿಸುವ ವಾದವೂ ಇದೆ. ಆದ್ದರಿಂದ ಈ ಪ್ರಶ್ನೆಯನ್ನು ಘೋಷಣೆಗಳ ಮೂಲಕವಲ್ಲ, ಸಾಮಾಜಿಕ ವಾಸ್ತವ, ಸಂವಿಧಾನಾತ್ಮಕ ಸಮಾನತೆ ಮತ್ತು ಸಾಕ್ಷ್ಯಾಧಾರಿತ ಅಧ್ಯಯನಗಳ ಮೂಲಕ ನಿರ್ಧರಿಸಬೇಕು.
ಪರಿಶಿಷ್ಟ ಜಾತಿ ಸ್ಥಾನಮಾನಕ್ಕೆ ಸಂಬಂಧಿಸಿದ ನಿರ್ಬಂಧದಿಂದಾಗಿ, ಪ್ರಸ್ತುತ ಕಾನೂನಿನಡಿ ದಲಿತ ಮುಸ್ಲಿಮರು ಮತ್ತು ದಲಿತ ಕ್ರೈಸ್ತರು ಪರಿಶಿಷ್ಟ ಜಾತಿಗಳಿಗೆ ಅನ್ವಯಿಸುವ ಮೀಸಲಾತಿ ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ರಕ್ಷಣೆಯನ್ನು ಅದೇ ಆಧಾರದ ಮೇಲೆ ಪಡೆಯಲು ಸಾಧ್ಯವಾಗುವುದಿಲ್ಲ. ಇದು ಸಾಮಾಜಿಕ ತಾರತಮ್ಯದ ಅನುಭವ ಮತ್ತು ಕಾನೂನು ರಕ್ಷಣೆಯ ನಡುವಿನ ಗಂಭೀರ ಅಂತರವನ್ನು ಎತ್ತಿ ತೋರಿಸುತ್ತದೆ. ಸಾಮಾಜಿಕ ನ್ಯಾಯದ ನಿಜವಾದ ಪರೀಕ್ಷೆ ದಲಿತ ಮುಸ್ಲಿಮರು ಮತ್ತು ದಲಿತ ಕ್ರೈಸ್ತರ ಪ್ರಶ್ನೆಯನ್ನು ಮುಸ್ಲಿಂ ಅಥವಾ ಕ್ರೈಸ್ತ ಸಮುದಾಯಗಳ ಪ್ರತ್ಯೇಕ ಬೇಡಿಕೆಯಾಗಿ ಮಾತ್ರ ನೋಡುವುದು ತಪ್ಪು. ಇದು ಧಾರ್ಮಿಕ ಸ್ವಾತಂತ್ರ್ಯ, ಸಮಾನತೆ ಮತ್ತು ಐತಿಹಾಸಿಕ ಅನ್ಯಾಯಕ್ಕೆ ಪರಿಹಾರ ಒದಗಿಸುವ ರಾಜ್ಯದ ಹೊಣೆಗಾರಿಕೆಗೆ ಸಂಬಂಧಿಸಿದ ಪ್ರಶ್ನೆ.
ಧರ್ಮದ ಆಧಾರದ ಮೇಲೆ ಹಕ್ಕುಗಳನ್ನು ನಿರಾಕರಿಸಬಾರದು ಎಂಬ ವಾದವನ್ನು ಪರಿಶೀಲಿಸುವಾಗ, ಪರಿಶಿಷ್ಟ ಜಾತಿ ಸ್ಥಾನಮಾನದ ನಿರ್ದಿಷ್ಟ ಕಾನೂನು ಮಾನದಂಡಗಳು ಮತ್ತು ಐತಿಹಾಸಿಕ ಹಿನ್ನೆಲೆಯನ್ನೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಅದೇ ರೀತಿ, ಮುಸ್ಲಿಂ ಸಮಾಜದ ಒಳಗಿನ ಹಿಂದುಳಿದ ಸಮುದಾಯಗಳ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯದ ಕೊರತೆಯನ್ನು ಗುರುತಿಸಲು ಸಮಗ್ರ ಸಾಮಾಜಿಕ ಸಮೀಕ್ಷೆಗಳು ಅಗತ್ಯ. ಧರ್ಮದ ಹೆಸರಿನಲ್ಲಿ ಒಳಗಿನ ಅಸಮಾನತೆಗಳನ್ನು ಮರೆಮಾಚುವುದಾಗಲಿ, ಅಲ್ಪಸಂಖ್ಯಾತರೆಂಬ ಕಾರಣಕ್ಕೆ ಎಲ್ಲರನ್ನೂ ಒಂದೇ ಸಾಮಾಜಿಕ ವರ್ಗವೆಂದು ಪರಿಗಣಿಸುವುದಾಗಲಿ ನ್ಯಾಯಸಮ್ಮತವಲ್ಲ.
ಸಂವಿಧಾನದ ಸಮಾನತೆ ಎಂದರೆ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುವುದಷ್ಟೇ ಅಲ್ಲ ಐತಿಹಾಸಿಕವಾಗಿ ಹಿಂದುಳಿದವರಿಗೆ ನ್ಯಾಯಯುತ ಅವಕಾಶಗಳನ್ನು ಖಚಿತಪಡಿಸುವುದೂ ಕೂಡ ಆಗಿರುತ್ತದೆ. ದೇಸಿ ಮುಸ್ಲಿಮರ ವೈವಿಧ್ಯವನ್ನು ಗುರುತಿಸುವುದು, ಅವರೊಳಗಿನ ಸಾಮಾಜಿಕ ಶ್ರೇಣೀಕರಣವನ್ನು ಪ್ರಶ್ನಿಸುವುದು ಮತ್ತು ದಲಿತ ಮುಸ್ಲಿಮರು–ದಲಿತ ಕ್ರೈಸ್ತರ ಹಕ್ಕುಗಳ ಕುರಿತು ನ್ಯಾಯಸಮ್ಮತ ಪರಿಹಾರ ಕಂಡುಕೊಳ್ಳುವುದು ಒಂದೇ ಸಾಮಾಜಿಕ ನ್ಯಾಯದ ಚಿಂತನೆಯ ಭಾಗಗಳಾಗಿವೆ.
ಭಾರತದ ಬಹುಸಾಂಸ್ಕೃತಿಕ ಪರಂಪರೆಯ ಬಗ್ಗೆ ಹೆಮ್ಮೆಪಡುವ ಸಮಾಜವು ಅದರೊಳಗಿನ ಅಸಮಾನತೆಗಳನ್ನೂ ಎದುರಿಸಬೇಕು ಇದು ಇಂದಿನ ಕಾಲದ ತುರ್ತುಕೂಡ. ಸೌಹಾರ್ದವು ಸಂಸ್ಕೃತಿಯ ಮೌಲ್ಯವಾದರೆ, ಸಮಾನತೆ ಅದರ ಸಂವಿಧಾನಾತ್ಮಕ ಹೊಣೆಗಾರಿಕೆ. ಈ ಎರಡನ್ನೂ ಒಟ್ಟಿಗೆ ಸಾಧಿಸಿದಾಗ ಮಾತ್ರ ಸಾಮಾಜಿಕ ನ್ಯಾಯವು ಘೋಷಣೆಯಿಂದ ವಾಸ್ತವಕ್ಕೆ ಇಳಿಯಬಲ್ಲದು. ಸಂವಿಧಾನದ ಮೂಲ ಆಶಯ ಈಡೇರಬಹುದು.
— ಖಾಸಿಂ ಸಾಬ್. ಎ, ಚಿಂತಕರು, ಬೆಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.