ಮಂಗಳೂರು(ವಿಶ್ವ ಕನ್ನಡಿಗ ನ್ಯೂಸ್):ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರಿನ ಪ್ರಧಾನ ವರದಿಗಾರ, ಹಿರಿಯ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಆರಿಫ್ ಪಡುಬಿದ್ರಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಿದೆ.
ಮಂಗಳೂರಿನ ನೆಹರೂ ಮೈದಾನದಲ್ಲಿ ನವೆಂಬರ್1ರಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಫರೀದ್ ಪ್ರಶಸ್ತಿ ಪ್ರದಾನ ಮಾಡಿದ್ದು, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಡಿ.ವೇದವ್ಯಾಸ ಕಾಮತ್, ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪ್ರಮುಖರಾದ ಮಮತಾ ಡಿ.ಎಸ್.ಗಟ್ಟಿ, ಟಿ.ಎಂ.ಶಾಹೀದ್ ತೆಕ್ಕಿಲ್, ಅಬ್ದುಲ್ ಲತೀಫ್ ಕಂದಕ್, ಝಕರಿಯಾ ಜೋಕಟ್ಡೆ, ಶಾಹುಲ್ ಹಮೀದ್ ಕೆ.ಕೆ., ಪ್ರದೀಪ ಕುಮಾರ ಎಸ್.ಕಲ್ಕೂರ, ಜಿಲ್ಲಾಕಾರಿ ದರ್ಶನ್ ಎಚ್.ವಿ., ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿ ಡಾ.ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಅವರ ನೇತೃತ್ವದಲ್ಲಿ ನಡೆದಿದ್ದ ವಿಶೇಷ ಸಭೆಯಲ್ಲಿ ಮುಹಮ್ಮದ್ ಆರಿಫ್ ಪಡುಬಿದ್ರಿ ಹಾಗೂ ಇತರ ಪತ್ರಕರ್ತರ ಹೆಸರನ್ನು ಅಂತಿಮಗೊಳಿಸಿ, ಪ್ರಶಸ್ತಿಗಾಗಿ ಜಿಲ್ಲಾಕಾರಿಗೆ ಶಿಫಾರಸು ಮಾಡಿತ್ತು. ಪತ್ರಿಕೋದ್ಯಮದ ಅನುಭವ, ಹಿರಿತನದ ಆಧಾರದಲ್ಲಿ ಅವರನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ವ್ಯಕ್ತಿ ಪರಿಚಯ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿಯಲ್ಲಿ 12.08.1974ರಂದು ಜನಿಸಿರುವ ಮುಹಮ್ಮದ್ ಆರಿಫ್ ಅವರ ಪೋಷಕರು ದಿವಂಗತರಾದ ಬೈಲೂರು ಸಯ್ಯದ್ ಬುಡನ್ ಆದಂ ಮತ್ತು ಖಾತೂನ್ ಬಿ.ಪಡುಬಿದ್ರಿಯ ಉರ್ದು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಆರಂಭಿಸಿ, ನಂತರ ಎರ್ಮಾಳು ಸರಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಮುಂದೆ ಪಡುಬಿದ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದಾರೆ. ಹಗಲು ಕೆಲಸ ಮಾಡಿಕೊಂಡು ಸಂಜೆ ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಬಿಎ ಪದವಿ ಮುಗಿಸಿದ್ದು, ಮುಂದೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎರಡನೇ ರ್ಯಾಂಕ್ನೊಂದಿಗೆ ಪತ್ರಿಕೋದ್ಯಮ ಡಿಪ್ಲೊಮಾ ಹಾಗೂ ನಂತರ ಸಮಾಜಶಾಸ್ತ್ರದಲ್ಲಿ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ವೃತ್ತಿ ಜೀವನ: 1996ರಲ್ಲಿ ಕೆನರಾ ಟೈಮ್ಸ್ ಬಳಗದ ಕನ್ನಡ ಜನಾಂತರಂಗ ಮತ್ತು ಕರಾವಳಿ ಅಲೆ ಪತ್ರಿಕೆ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಆರಂಭದಲ್ಲಿ ಕಚೇರಿಯಲ್ಲಿ ಪ್ರೂಫ್ ರೀಡರ್ ಕೆಲಸ ಮಾಡುತ್ತಿದ್ದರು. ಮುಂದೆ ಉಡುಪಿ ಜಿಲ್ಲಾ ವರದಿಗಾರನಾಗಿ ನಿಯುಕ್ತಿಗೊಂಡು ಮೂರು ವರ್ಷ ಕಾಲ ಕಾರ್ಯನಿರ್ವಹಿಸಿದ್ದರು.
1999ರಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಬೆಂಗಳೂರು ಕಚೇರಿಯಲ್ಲಿ ಉಪಸಂಪಾದಕನಾಗಿ ಸೇರ್ಪಡೆಗೊಂಡು ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಆವೃತ್ತಿಗಳ ಮುಖ್ಯಸ್ಥ ಹಾಗೂ ಜನರಲ್ ಡೆಸ್ಕ್ನಲ್ಲಿ ಕಾರ್ಯ ನಿರ್ವಹಣೆ ಹೊಣೆ ಹೊತ್ತಿದ್ದರು. 2000 ಇಸವಿಯಲ್ಲಿ ವಿಜಯ ಕರ್ನಾಟಕದ ಮಂಗಳೂರು ಆವೃತ್ತಿ ಆರಂಭಗೊಂಡಾಗ, ಉಪಸಂಪಾದಕ, ನಂತರ ವರದಿಗಾರ, ಹಿರಿಯ ವರದಿಗಾರನಾಗಿ ಮುಂದೆ ಮಂಗಳೂರಿನ ಪ್ರಧಾನ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
30 ವರ್ಷಗಳ ಅನುಭವ: ಪತ್ರಿಕೋದ್ಯಮದಲ್ಲಿ ಒಟ್ಟು 30 ವರ್ಷಗಳ ಅನುಭವ ಅವರದ್ದು. ಮುಖ್ಯವಾಗಿ ಸರಕಾರಿ ಕಚೇರಿಗಳು, ರಾಷ್ಟೀಯ ಹೆದ್ದಾರಿ, ರೈಲ್ವೇ, ವಿಮಾನ ನಿಲ್ದಾಣಗಳು, ಮಾನವಾಸಕ್ತ, ಪ್ರಮುಖ ರಾಜಕೀಯ ಘಟನಾವಳಿಗಳ ಅಸಂಖ್ಯಾತ ವಿಶೇಷ ವರದಿಗಳನ್ನು ಮಾಡಿದ್ದಾರೆ. ಸರಕಾರಿ ಇಲಾಖೆಗಳಿಂದ ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ನಿರಂತರ 100 ದಿನಗಳ ಕಾಲ `ಜನರಿಂದ ಜನರಿಗಾಗಿ’ ಎಂಬ ಮಾಲಿಕೆ ನಡೆಸಿರುವುದು ಜನಜನಿತ. ಸುರತ್ಕಲ್- ಬಿಸಿ ರೋಡ್, ಕುಂದಾಪುರ- ತಲಪಾಡಿ, ಮಂಗಳೂರು- ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಬಗ್ಗೆ ನಿರಂತರ ವಿಶೇಷ ವರದಿಗಳನ್ನು ಪ್ರಕಟಿಸುವ ಮೂಲಕ ಜನಪ್ರತಿನಿಗಳು, ಅಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಜವಾಬ್ದಾರಿಗಳು: 1998ರಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಹೊಸ ಜಿಲ್ಲೆಯ ಪತ್ರಕರ್ತರನ್ನು ಸಂಘಟಿಸಿದ್ದು, ಸಂಘದ ಪ್ರಥಮ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಪತ್ರಕರ್ತರ ತರಬೇತಿ ಶಿಬಿರ ಆಯೋಜನೆ, ಸ್ವಾವಲಂಬಿ ಸಂಘ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
2000 ಇಸವಿ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ, ಕಾರ್ಯಕಾರಿ ಸಮಿತಿ ಸದಸ್ಯ, ಉಪಾಧ್ಯಕ್ಷ, ಮಂಗಳೂರು ಪ್ರೆಸ್ ಕ್ಲಬ್ ಉಪಾಧ್ಯಕ್ಷ, ದಕ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘದ ನಿರ್ದೇಶಕನಾಗಿ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
ಸಾಮಾಜಿಕ ಸೇವೆ: ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗಾರರಿಗೆ ರಾತ್ರಿ ಊಟ ನೀಡುವ ಕಾರುಣ್ಯ ಯೋಜನೆ, ಗ್ರಾಮೀಣ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ಒದಗಿಸುವ ಕ್ಲಾಸ್ ಆನ್ ವೀಲ್- ಕಂಪ್ಯೂಟರ್ ಬಸ್ ಯೋಜನೆ, ಬಡ ರೋಗಿಗಳ ಚಿಕಿತ್ಸೆ ನೆರವು, ಸೌಲಭ್ಯ ವಿತರಣೆ ಮಾಡುತ್ತಿರುವ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ 30 ವರ್ಷಗಳಿಂದ ವರ್ಷಕ್ಕೆ 3-4 ಬಾರಿಯಂತೆ ಅಗತ್ಯ ಸ್ವತಃ ರಕ್ತದಾನ ಮಾಡುತ್ತಿದ್ದು, ಅಗತ್ಯ ಇರುವ ರೋಗಿಗಳಿಗೆ ರಕ್ತ ಪೂರೈಕೆಯ ವ್ಯವಸ್ಥೆ, ಆರೋಗ್ಯ, ಶಿಕ್ಷಣಕ್ಕೆ ನೆರವು ನೀಡುತ್ತಾ ಬಂದಿದ್ದಾರೆ.
ಲಭಿಸಿರುವ ಪ್ರಶಸ್ತಿ, ಪುರಸ್ಕಾರಗಳು: ಮುಹಮ್ಮದ್ ಆರಿಫ್ ಅವರಿಗೆ ಪಡುಬಿದ್ರಿ ಜೇಸಿಯಿಂದ ಯಂಗ್ ಟ್ಯಾಲೆಂಟ್ ಪ್ರಶಸ್ತಿ, ಉಡುಪಿಯ ಬನ್ನಂಜೆ ರಾಮಾಚಾರ್ಯರ ಪುರಸ್ಕಾರ, ದಕ ಪತ್ರಕರ್ತ ಸಂಘದ ಪ.ಗೋಪಾಲಕೃಷ್ಣ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರಥಮ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ, ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪುರಸ್ಕಾರ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಟ್ಯಾಲೆಂಟ್ ಮೀಲಾದ್ ಪ್ರಶಸ್ತಿ, ಕಾಸರಗೋಡು ಪತ್ರಕರ್ತರ ಸಂಘದ ಮುಗರೋಡಿ ಗೋಪಾಲಕೃಷ್ಣ ಮೇಲಾಂಟ ಪ್ರಶಸ್ತಿ ಇತ್ಯಾದಿಗಳು ಲಭಿಸಿವೆ. ಇದೀಗ ದಕ್ಷಿಣ ಕನ್ನಡ ಜಿಲ್ಲಾ ಪ್ರಶಸ್ತಿ ಸೇರ್ಪಡೆಯಾಗಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.