ನವದೆಹಲಿ (www.vknews.in): ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ವೇಳೆ 1 ಕೋಟಿಗೂ ಅಧಿಕ ಹಿಂದೂ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ವರದಿಗಳನ್ನು ಉಲ್ಲೇಖಿಸಿ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. “ಮತದಾರರ ಪಟ್ಟಿಯಿಂದ ಹಿಂದೂಗಳ ಹೆಸರುಗಳನ್ನೂ ತೆಗೆದುಹಾಕಲಾಗಿದೆಯಂತೆ. ಹಾಗಾದರೆ ಅವರೂ ಪಾಕಿಸ್ತಾನಿಗಳೇ?” ಎಂದು ವ್ಯಂಗ್ಯವಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಯನ್ನು ಟೀಕಿಸಿದರು.
ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಒಕ್ಕೂಟದ ‘ವೋಟ್ ಬಚಾವೋ, ದೇಶ್ ಬಚಾವೋ’ ರ್ಯಾಲಿಯಲ್ಲಿ ಮಾತನಾಡಿದ ಅಬ್ದುಲ್ಲಾ, ಬಿಜೆಪಿ ಮತ್ತು ಆರ್ಎಸ್ಎಸ್ ಮುಸ್ಲಿಮರ ದೇಶಭಕ್ತಿಯನ್ನು ಪದೇಪದೇ ಪ್ರಶ್ನಿಸುತ್ತಿವೆ ಎಂದು ಆರೋಪಿಸಿದರು. ಮುಸ್ಲಿಮರು ದೇಶಕ್ಕಾಗಿ ರಕ್ತ ಹರಿಸಿದ್ದರೂ ಅವರ ನಿಷ್ಠೆಯ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ಅವರನ್ನು ಪದೇಪದೇ ಪಾಕಿಸ್ತಾನಿಗಳು ಎಂದು ಕರೆಯಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನುಸುಳುಕೋರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ SIR ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬ ಚರ್ಚೆಯ ನಡುವೆ, ಉತ್ತರ ಪ್ರದೇಶದಲ್ಲಿ 1 ಕೋಟಿಗೂ ಅಧಿಕ ಹಿಂದೂ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂಬ ವರದಿಗಳು ಬಂದಿವೆ ಎಂದು ಅಬ್ದುಲ್ಲಾ ಹೇಳಿದರು. “ಹಾಗಾದರೆ ಈ ಹಿಂದೂ ಮತದಾರರೂ ನುಸುಳುಕೋರರೇ ಅಥವಾ ಪಾಕಿಸ್ತಾನಿಗಳೇ? ಇಂತಹ ನೆಪಗಳನ್ನು ಇನ್ನೆಷ್ಟು ಕಾಲ ಮುಂದುವರಿಸಲಾಗುತ್ತದೆ?” ಎಂದು ಪ್ರಶ್ನಿಸಿದ ಅವರು, ಇದನ್ನು ಮತ ಕಳ್ಳತನ ಎಂದು ಟೀಕಿಸಿದರು. ಧರ್ಮ ಯಾವುದೇ ಇರಲಿ, ಎಲ್ಲರೂ ಭಾರತೀಯ ಪ್ರಜೆಗಳಾಗಿದ್ದು, ದೇಶದಲ್ಲಿ ಬದುಕುವ ಮತ್ತು ಸಾಯುವ ಹಕ್ಕು ಹೊಂದಿದ್ದಾರೆ ಎಂದು ಹೇಳಿದರು.
ಬಾಬಾಸಾಹೇಬ್ ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಶಯಗಳನ್ನು ಉಲ್ಲೇಖಿಸಿದ ಫಾರೂಕ್ ಅಬ್ದುಲ್ಲಾ, ದೇಶದ ಎಲ್ಲ ನಾಗರಿಕರೂ ಸಮಾನರು ಮತ್ತು ಎಲ್ಲರಿಗೂ ಸಮಾನ ಮತದಾನದ ಹಕ್ಕಿದೆ ಎಂದು ಹೇಳಿದರು. ಯಾವುದೇ ಭಾರತೀಯನನ್ನು ಮತದಾನದ ಹಕ್ಕಿನಿಂದ ವಂಚಿಸಬಾರದು. ಜನರು ಭಯಪಡುವ ಬದಲು ಒಗ್ಗಟ್ಟಿನಿಂದ ಇರಬೇಕು. ದೇಶದ ಅಧಿಕಾರ ಜನರ ಕೈಯಲ್ಲಿದೆ ಎಂದು ಅವರು ಕರೆ ನೀಡಿದರು. ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಗಿತ್ತು, ಈಗಲೂ ಇದೆ ಮತ್ತು ಮುಂದೆಯೂ ಇರಲಿದೆ ಎಂದು ಹೇಳಿದ ಅವರು, ತಮ್ಮ ಭಾಷಣವನ್ನು ‘ಜೈ ಹಿಂದ್’ ಘೋಷಣೆಯೊಂದಿಗೆ ಮುಕ್ತಾಯಗೊಳಿಸಿದರು.
ರ್ಯಾಲಿಯಲ್ಲಿ ಭಾಗವಹಿಸಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಕೂಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂವಿಧಾನವನ್ನು ಹಂತಹಂತವಾಗಿ ದುರ್ಬಲಗೊಳಿಸಲಾಗುತ್ತಿದೆ ಮತ್ತು ದೇಶದ ಆಸ್ತಿಗಳನ್ನು ಉದ್ಯಮಿಗಳಿಗೆ ಹಸ್ತಾಂತರಿಸಲಾಗುತ್ತಿದೆ. ಆದರೆ ಬಡವರ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಕಾರ್ಪೊರೇಟ್ ಸಂಸ್ಥೆಗಳಿಗೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲಾಗುತ್ತಿದೆ.
ಉದ್ಯೋಗ ನೀಡುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂದು ಟೀಕಿಸಿದ ಅವರು, ಸೇನೆಗೆ ಸೇರಬೇಕೆಂಬ ಹೆಮ್ಮೆಯ ಕನಸು ಹೊಂದಿದ್ದ ಯುವಕರನ್ನು ದಿನಗೂಲಿ ಕಾರ್ಮಿಕರನ್ನಾಗಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರ್ಯಾಲಿಯಲ್ಲಿ ಭಾಗವಹಿಸಿದ್ದ ಜನರು ದೇಶದ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದು, ಬದಲಾವಣೆಯನ್ನು ಬಯಸುತ್ತಿದ್ದಾರೆ. ಈಗಲೇ ಬದಲಾವಣೆಗೆ ಮುಂದಾಗದಿದ್ದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆಯಿದೆ ಎಂದು ಮೆಹಬೂಬಾ ಮುಫ್ತಿ ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.