ಗುರುವಾಯೂರು (www.vknews.in): ವಯನಾಡಿನ ಚೂರಲ್ಮಲ ಭೂಕುಸಿತ ದುರಂತದಲ್ಲಿ ಕುಟುಂಬದ ಒಂಬತ್ತು ಸದಸ್ಯರನ್ನು ಹಾಗೂ ಮನೆಯನ್ನು ಕಳೆದುಕೊಂಡು ಕೇರಳದ ಜನರ ಕಣ್ಣೀರಿನ ಕಥೆಯಾಗಿದ್ದ ಶ್ರುತಿ, ಇದೀಗ ಜೀವನದ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಶನಿವಾರ ಗುರುವಾಯೂರು ದೇವಸ್ಥಾನದಲ್ಲಿ ತಮ್ಮ ಸಹೋದ್ಯೋಗಿ ಸಂದೀಪ್ ಅವರೊಂದಿಗೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಯನಾಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಸಂದೀಪ್, ಮಾನಂತವಾಡಿಯ ನಿವಾಸಿ. ಕುಟುಂಬದ ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಸಮಾರಂಭ ನೆರವೇರಿತು. ಮಾಜಿ ಸಚಿವ ಕೆ. ರಾಜನ್ ಕೂಡ ವಿವಾಹದಲ್ಲಿ ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು.
ವಿವಾಹದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರುತಿ, “ಈ ಕ್ಷಣದಲ್ಲಿ ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನ ಹಿಂದಿನ ಜೀವನದ ಎಲ್ಲ ವಿಚಾರಗಳನ್ನು ತಿಳಿದಿದ್ದರೂ ಅವರು ನನ್ನ ಕೈ ಹಿಡಿದಿದ್ದಾರೆ. ನಮ್ಮ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಂತಸ ಹಂಚಿಕೊಂಡರು.
ವಯನಾಡಿನ ಚೂರಲ್ಮಲದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಶ್ರುತಿ ತಮ್ಮ ತಂದೆ-ತಾಯಿ ಮತ್ತು ಸಹೋದರಿ ಸೇರಿದಂತೆ ಕುಟುಂಬದ ಒಂಬತ್ತು ಸದಸ್ಯರನ್ನು ಕಳೆದುಕೊಂಡಿದ್ದರು. ದುರಂತದಲ್ಲಿ ಅವರ ಮನೆಯೂ ಸಂಪೂರ್ಣವಾಗಿ ನಾಶವಾಗಿತ್ತು.
ಈ ನೋವಿನಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಕಷ್ಟದ ದಿನಗಳಲ್ಲಿ ಜೊತೆಯಾಗಿದ್ದ ಅವರ ನಿಶ್ಚಿತ ವರ ಜೆನ್ಸನ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದೇ ಅಪಘಾತದಲ್ಲಿ ಶ್ರುತಿ ಅವರ ಕಾಲುಗಳಿಗೂ ಗಾಯಗಳಾಗಿದ್ದವು.
ನಿರಂತರ ದುರಂತಗಳ ನಡುವೆಯೂ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಿದ ಶ್ರುತಿಗೆ ಉದ್ಯೋಗ ಪಡೆಯುವ ಹಾದಿಯಲ್ಲಿಯೂ ಹಲವು ಸವಾಲುಗಳು ಎದುರಾಗಿದ್ದವು. ನಂತರ ವಯನಾಡು ಜಿಲ್ಲಾಧಿಕಾರಿ ಕಚೇರಿಯ ಕಂದಾಯ ಇಲಾಖೆಯ ಸಾರ್ವಜನಿಕ ಕುಂದುಕೊರತೆ ವಿಭಾಗದಲ್ಲಿ (PG Cell) ಗುಮಾಸ್ತೆಯಾಗಿ ಅವರಿಗೆ ನೇಮಕಾತಿ ದೊರೆಯಿತು. 2024ರ ಡಿಸೆಂಬರ್ನಲ್ಲಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ಕಷ್ಟದ ಬದುಕಿನ ಹಲವು ನೋವುಗಳನ್ನು ಎದುರಿಸಿದ ಶ್ರುತಿ ಇದೀಗ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ಅವರ ವಿವಾಹದ ಸುದ್ದಿ ಅನೇಕರಲ್ಲಿ ಸಂತಸ ಮೂಡಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.