ಹೈದರಾಬಾದ್ (www.vknews.in): ಸಿಕಂದರಾಬಾದ್ನ ತಿರುಮಲಗಿರಿ ಪ್ರದೇಶದಲ್ಲಿ ಶಿಯಾ ವಕ್ಫ್ಗೆ ಸೇರಿದ ಭೂಮಿಯಲ್ಲಿ ಅನುಮತಿಯಿಲ್ಲದೆ ದೇವಸ್ಥಾನ ನಿರ್ಮಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನವೆಂಬರ್ 6ರ ಶುಕ್ರವಾರದ ಪ್ರಾರ್ಥನೆಯ ಬಳಿಕ ಈ ಬೆಳವಣಿಗೆ ನಡೆದಿದ್ದು, ಸ್ಥಳೀಯವಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ಎಂದು ವರದಿಯಾಗಿದೆ.
ಸಂರಕ್ಷಿತ ವಕ್ಫ್ ಆಸ್ತಿಯಾದ ‘ಕೋಹೆ ಇಮಾಮ್-ಎ-ಝಮಿನ್’ನ ಅಧ್ಯಕ್ಷ ಸೈಯದ್ ನಿಸಾರ್ ಹುಸೇನ್ ಅವರು ನವೆಂಬರ್ 7ರಂದು ಶನಿವಾರ ತಿರುಮಲಗಿರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಿವಾದಿತ ಕಟ್ಟಡವನ್ನು ತಕ್ಷಣ ತೆರವುಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ. ವಕ್ಫ್ ಆಸ್ತಿಯ ಸದಸ್ಯರು ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಭೂಮಿಯಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
1951ರಿಂದ ಶಿಯಾ ವಕ್ಫ್ ಮಂಡಳಿಯಲ್ಲಿ ನೋಂದಣಿ
ಈ ಭೂಮಿ 1951ರಿಂದ ಶಿಯಾ ವಕ್ಫ್ ಮಂಡಳಿಯಲ್ಲಿ ನೋಂದಣಿಯಾಗಿದ್ದು, ವಕ್ಫ್ ಕಾಯ್ದೆಯಡಿ ಸಂರಕ್ಷಿತ ಆಸ್ತಿಯಾಗಿದೆ ಎಂದು ಸೈಯದ್ ನಿಸಾರ್ ಹುಸೇನ್ ಅವರು ಸಿಯಾಸತ್ ಡಾಟ್ ಕಾಮ್ಗೆ ತಿಳಿಸಿದ್ದಾರೆ. “ಶುಕ್ರವಾರದ ನಮಾಝ್ ಮುಗಿಸಿ ವಾಪಸ್ ಬಂದಾಗ, ಭೂಮಿಯಲ್ಲಿ ದೇವಸ್ಥಾನಕ್ಕಾಗಿ ಕೆಲವು ನಿರ್ಮಾಣ ಕಾರ್ಯಗಳನ್ನು ಮಾಡಿರುವುದು ಕಂಡುಬಂತು” ಎಂದು ಅವರು ಹೇಳಿದ್ದಾರೆ.
ಈ ವಿಚಾರವಾಗಿ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಬಳಿಕ ಸ್ಥಳೀಯ ಪಕ್ಷದ ನಾಯಕರು ಅನಧಿಕೃತ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳಲು ನೆರವಾದರು ಎಂದು ಹುಸೇನ್ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 324(2) (ಆಸ್ತಿ ಹಾನಿ ಉಂಟುಮಾಡುವ ಕೃತ್ಯ) ಮತ್ತು 329(3) (ಅಪರಾಧ ಉದ್ದೇಶದ ಅತಿಕ್ರಮಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಮಜ್ಲಿಸ್ ಬಚಾವೊ ತಹ್ರೀಕ್ ಮುಖಂಡ
ಭೂಮಿಯಲ್ಲಿ ವಿಗ್ರಹವೊಂದನ್ನು ಇರಿಸಿರುವುದನ್ನು ತೋರಿಸುವ ವಿಡಿಯೋ ಮತ್ತು ಚಿತ್ರಗಳನ್ನು ಹುಸೇನ್ ಹಂಚಿಕೊಂಡಿದ್ದಾರೆ. ಮಜ್ಲಿಸ್ ಬಚಾವೊ ತಹ್ರೀಕ್ನ ವಕ್ತಾರ ಅಮ್ಜದ್ ಉಲ್ಲಾ ಖಾನ್ ಕೂಡ ಸ್ಥಳಕ್ಕೆ ಭೇಟಿ ನೀಡಿ, ನಿರ್ಮಾಣದ ಕಾನೂನುಬದ್ಧತೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಎಫ್ಐಆರ್ನಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ಗುಂಪಿನ ಹೆಸರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹುಸೇನ್, ತಮ್ಮ ಬೇಡಿಕೆ ವಿವಾದಿತ ನಿರ್ಮಾಣವನ್ನು ತೆರವುಗೊಳಿಸುವುದಷ್ಟೇ ಆಗಿದ್ದು, ದೂರಿನಲ್ಲಿ ಯಾವುದೇ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭೂಮಿ ವಕ್ಫ್ ಆಸ್ತಿಯೆಂಬುದು ಸಂಬಂಧಪಟ್ಟವರಿಗೆ ತಿಳಿದಿರಲಿಲ್ಲವೇ ಎಂಬ ಪ್ರಶ್ನೆಗೆ, ಹಲವು ವರ್ಷಗಳಿಂದ ನೋಂದಣಿಯಾಗಿರುವ ದೃಢೀಕೃತ ವಕ್ಫ್ ಆಸ್ತಿಯ ಬಗ್ಗೆ ಅವರಿಗೆ ತಿಳಿದಿರಲೇಬೇಕು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಇಂತಹ ಘಟನೆ ನಡೆದಿರಲಿಲ್ಲ ಎಂದಿರುವ ಹುಸೇನ್, ಭಾನುವಾರ ಬೆಳಿಗ್ಗೆ ಪೊಲೀಸರು ನಿರ್ಮಾಣವನ್ನು ತೆರವುಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಪ್ರದೇಶದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದೂ ಅವರು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.