(www.vknews.in) : ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬೆಲೆ ಏರಿಕೆಯ ಬಿಸಿ ಎಲ್ಲರನ್ನೂ ತಟ್ಟುತ್ತಿದೆ. ಹಾಲು, ಮೊಸರು, ಅಕ್ಕಿ, ಬೇಳೆ, ಎಣ್ಣೆ, ತರಕಾರಿ, ಬಸ್ ಪ್ರಯಾಣ, ಮನೆ ಬಾಡಿಗೆ, ಕರೆಂಟ್ ಬಿಲ್ – ಯಾವುದನ್ನು ಮುಟ್ಟಿದರೂ ದುಬಾರಿ. ದಿನಪತ್ರಿಕೆಗಳಲ್ಲಿ, ಟಿವಿ ಚಾನೆಲ್ಗಳಲ್ಲಿ, ವಾಟ್ಸಾಪ್ ಗ್ರೂಪ್ಗಳಲ್ಲಿ ಬೆಲೆ ಏರಿಕೆಯ ಬಗ್ಗೆ ದಿನವೂ ಚರ್ಚೆ ನಡೆಯುತ್ತಿದೆ.
ಆದರೆ ಈ ಬೆಲೆ ಏರಿಕೆಯ ಚರ್ಚೆಯಲ್ಲಿ ಒಂದು ವರ್ಗದ ದನಿ ಎಲ್ಲಿಯೂ ಕೇಳಿಸುತ್ತಿಲ್ಲ. ಅವರು ಕೂಗುವುದಿಲ್ಲ, ಪ್ರತಿಭಟನೆ ಮಾಡುವುದಿಲ್ಲ, ರಸ್ತೆಗಿಳಿಯುವುದಿಲ್ಲ, ಮೈಕ್ ಹಿಡಿದು ಭಾಷಣ ಮಾಡುವುದಿಲ್ಲ. ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡು, ಮಕ್ಕಳಿಗೆ ಪಾಠ ಮಾಡುತ್ತಲೇ ಇರುತ್ತಾರೆ. ಅವರೇ ಮದ್ರಸ ಅಧ್ಯಾಪಕರು.
ಸಮುದಾಯದ ಭವಿಷ್ಯವನ್ನು ರೂಪಿಸುವ ಈ ಮಹಾನ್ ಶಿಕ್ಷಕರು ಇಂದು ಬೆಲೆ ಏರಿಕೆಯ ಸುಳಿಯಲ್ಲಿ ಸಿಕ್ಕಿ ಕಂಗಾಲಾಗಿದ್ದಾರೆ. ಎಲ್ಲದರ ಬೆಲೆ ಏರಿಕೆಯಾಗಿದೆ, ಆದರೆ ಅವರ ಸಂಬಳಕ್ಕೆ ಮಾತ್ರ ಏರಿಕೆ ಇಲ್ಲ. ಹಾಲಿನ ದರ ಲೀಟರ್ಗೆ 8 ರೂ. ಹೆಚ್ಚಳ. ತುಪ್ಪ, ಬೆಣ್ಣೆ, ಪನ್ನೀರ್ ಬೆಲೆ ಶೇ. 20 ರಿಂದ 30 ರಷ್ಟು ಏರಿಕೆ. ಒಂದು ಮನೆಯಲ್ಲಿ ದಿನಕ್ಕೆ 1 ಲೀಟರ್ ಹಾಲು ಬೇಕು ಎಂದರೆ ತಿಂಗಳಿಗೆ 240 ರೂ. ಹೆಚ್ಚು ಖರ್ಚು. ಮಕ್ಕಳಿರುವ ಮನೆಯಲ್ಲಿ 2 ಲೀಟರ್ ಬೇಕು ಎಂದರೆ 480 ರೂ. ಹೆಚ್ಚು.
KSRTC, ವಾಯುವ್ಯ, ಕಲ್ಯಾಣ ಕರ್ನಾಟಕ ಬಸ್ಗಳಲ್ಲಿ ಶೇ. 23 ರಷ್ಟು, BMTC ಬಸ್ಗಳಲ್ಲಿ ಶೇ. 35 ರಷ್ಟು ದರ ಏರಿಕೆ. ಪ್ರತಿದಿನ ಕೆಲಸಕ್ಕೆ ಬಸ್ನಲ್ಲಿ ಹೋಗುವವರಿಗೆ ತಿಂಗಳಿಗೆ 400 ರಿಂದ 600 ರೂ. ಹೆಚ್ಚು ಖರ್ಚು. ಅಕ್ಕಿ ಕೆ.ಜಿ.ಗೆ 10-15 ರೂ., ಬೇಳೆ ಕೆ.ಜಿ.ಗೆ 20-30 ರೂ., ಅಡುಗೆ ಎಣ್ಣೆ ಲೀಟರ್ಗೆ 10-20 ರೂ. ಹೆಚ್ಚಳ. ತರಕಾರಿ ಬೆಲೆ ಸದಾ ಏರಿಳಿತ, ಆದರೆ ಇಳಿಯುವುದೇ ಇಲ್ಲ. ಸಣ್ಣ ಪಟ್ಟಣಗಳಲ್ಲಿಯೂ ಈಗ ಒಂದು ಸಣ್ಣ ಮನೆಗೆ 5000 – 7000 ರೂ. ಬಾಡಿಗೆ.
ಒಟ್ಟಾರೆ ಹೇಳಬೇಕೆಂದರೆ, ಒಂದು ಸಣ್ಣ ಕುಟುಂಬ ನೆಮ್ಮದಿಯಾಗಿ ಬದುಕಲು ತಿಂಗಳಿಗೆ ಕನಿಷ್ಠ 15000 – 18000 ರೂ. ಬೇಕು. ಇದಕ್ಕಿಂತ ಕಡಿಮೆ ಇದ್ದರೆ ಬದುಕುವುದು ಕಷ್ಟ, ಈಗ ಮದ್ರಸ ಉಸ್ತಾದರ ಸಂಬಳ ಎಷ್ಟು ಎಂದು ಪ್ರಾಮಾಣಿಕವಾಗಿ ನೋಡೋಣ. ಕರ್ನಾಟಕದ ಬಹುತೇಕ ಸಣ್ಣ ಮತ್ತು ಮಧ್ಯಮ ಮದ್ರಸಗಳಲ್ಲಿ ಉಸ್ತಾದರ ಸಂಬಳ ಹೀಗಿದೆ:
ಸಹಾಯಕ ಉಸ್ತಾದ್: 12000 – 15000 ರೂ. ಹಿರಿಯ ಉಸ್ತಾದ್: 15000 – 18000 ರೂ. ಸದರ್ ಉಸ್ತಾದ್ /ಮುಅಲ್ಲಿಂ : 13000 – 15000 ರೂ.
ಕೆಲವು ದೊಡ್ಡ ನಗರಗಳ ದೊಡ್ಡ ಮದ್ರಸಗಳಲ್ಲಿ 18000 – 20000 ಸಿಗಬಹುದು. ಆದರೆ ಅಂತಹ ಮದ್ರಸಗಳು ಬೆರಳೆಣಿಕೆಯಷ್ಟು ಮಾತ್ರ. ಅಂದರೆ ಸರಾಸರಿ ಒಬ್ಬ ಉಸ್ತಾದ್ಗೆ ಸಿಗುವುದು 14000 ರೂ.ಮಾತ್ರ.
ಇದರಲ್ಲಿ ಕೆಲವು ಮದ್ರಸಗಳಲ್ಲಿ ಊಟ, ವಸತಿ ಸಿಗುತ್ತದೆ. ಅದು ನಿಜ. ಆದರೆ ಅವರಿಗೆ ಕುಟುಂಬ ಇರುತ್ತದೆ, ಹೆಂಡತಿ, ಮಕ್ಕಳು ಇರುತ್ತಾರೆ. ಹೆಂಡತಿ, ಮಕ್ಕಳನ್ನು ಊರಿನಲ್ಲಿ ಬಿಟ್ಟು ಮದ್ರಸದಲ್ಲಿ ಒಬ್ಬರೇ ಇರುವ ಉಸ್ತಾದರು ಎಷ್ಟು ಜನ ಗೊತ್ತಾ? ಅವರ ಊರಿನ ಖರ್ಚು ಬೇರೆ, ಇಲ್ಲಿನ ಖರ್ಚು ಬೇರೆ. ಒಬ್ಬ ಉಸ್ತಾದ್ ತನ್ನ ತಿಂಗಳ ಲೆಕ್ಕವನ್ನು ನಮಗೆ ತೋರಿಸಿದರೆ ನಮಗೆ ನಾಚಿಕೆಯಾಗುತ್ತದೆ. ನೋಡಿ ಅವರ ಮಾದರಿ ಬಜೆಟ್:
ಊರಿನಲ್ಲಿರುವ ಕುಟುಂಬಕ್ಕೆ ಕಳುಹಿಸುವುದು: 10000 ರೂ. ಮದ್ರಸದಲ್ಲಿ ತನ್ನ ಊಟ, ಚಹಾ, ಸಣ್ಣ ಖರ್ಚು: 2000 ರೂ. ಮಕ್ಕಳ ಶಾಲಾ ಫೀಸ್, ಪುಸ್ತಕ: 1500 ರೂ. ಫೋನ್, ಕರೆಂಟ್, ಔಷಧಿ: 1000 ರೂ. ಊರಿಗೆ ಹೋಗಿ ಬರಲು ಬಸ್ ಖರ್ಚು: 1000 ರೂ.
ಈ ಕೊರತೆಯನ್ನು ತುಂಬಲು ಅವರು ಏನು ಮಾಡಬೇಕು? ಸಾಲ ಮಾಡಬೇಕು. ಮತ್ತೆ ಆ ಸಾಲ ತೀರಿಸಲು ಇನ್ನೊಂದು ಸಾಲ ಮಾಡಬೇಕು. ಇದು ಅವರ ಜೀವನ ಚಕ್ರ.
ಏಕೆ ಸಂಬಳ ಏರಿಕೆಯಾಗುವುದಿಲ್ಲ?
ಮದ್ರಸ ಕಮಿಟಿಯವರು ಕಟ್ಟಡಕ್ಕೆ ಲಕ್ಷಗಟ್ಟಲೆ ಖರ್ಚು ಮಾಡುತ್ತಾರೆ. ಮದ್ರಸಕ್ಕೆ ಮಾರ್ಬಲ್ ಹಾಕಲು, ಸುಂದರ ಗೇಟ್ ಕಟ್ಟಲು ಹಣವಿದೆ. ಆದರೆ ಉಸ್ತಾದರಿಗೆ 1000 ರೂ. ಹೆಚ್ಚು ಕೊಡಲು ಹಣವಿಲ್ಲ ಎನ್ನುತ್ತಾರೆ.
ದೀನ್ನ ಹೆಸರಿನಲ್ಲಿ ಶೋಷಣೆ: “ನೀವು ಅಲ್ಲಾಹನಿಗಾಗಿ ಕೆಲಸ ಮಾಡಿ, ಸಂಬಳ ನೋಡಬೇಡಿ” ಎಂದು ಹೇಳಿ ಉಸ್ತಾದರ ಬಾಯಿ ಮುಚ್ಚಿಸಲಾಗುತ್ತದೆ. ದೀನ್ನ ಸೇವೆಗೆ ಸಂಬಳವೇ ಬೇಡ ಎಂದರೆ, ಕಮಿಟಿಯವರು ದೀನ್ನ ಸೇವೆಯನ್ನು ಉಚಿತವಾಗಿ ಮಾಡುತ್ತಾರೆಯೇ? ಅವರು ವ್ಯಾಪಾರ, ಕೆಲಸ ಎಲ್ಲಾ ಮಾಡುತ್ತಾರೆ. ಉಸ್ತಾದ್ ಮಾತ್ರ ಹಸಿವಿನಿಂದ ಸೇವೆ ಮಾಡಬೇಕೇ?
ಯಾರೂ ಪ್ರಶ್ನಿಸದಿರುವುದು: ಉಸ್ತಾದರು ತಮ್ಮ ಹಕ್ಕಿಗಾಗಿ ಹೋರಾಡುವುದಿಲ್ಲ. ಅವರಿಗೆ ಜಗಳ ಬೇಡ, ಫಿತ್ನಾ ಬೇಡ. ಅವರ ಈ ಸೌಜನ್ಯವೇ ಅವರಿಗೆ ಶಾಪವಾಗಿದೆ.
ಸಂಘಟನೆಯ ಕೊರತೆ: ಉಸ್ತಾದ್ಗಳಿಗೆ ಒಗ್ಗಟ್ಟಾದ ವೇದಿಕೆ ಇಲ್ಲ. ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಸಂಘಟನೆಗಳು ಈ ಬಗ್ಗೆ ಮಾತನಾಡಬೇಕು. ಆದರೆ ಇದುವರೆಗೆ ಈ ವಿಷಯ ಗಂಭೀರ ಚರ್ಚೆಗೆ ಬಂದಿಲ್ಲ.
ಸಮುದಾಯದ ಉದಾಸೀನ: ನಾವು ಮಸೀದಿಗೆ ದೇಣಿಗೆ ಕೊಡುತ್ತೇವೆ, ಮದ್ರಸ ಕಟ್ಟಡಕ್ಕೆ ದೇಣಿಗೆ ಕೊಡುತ್ತೇವೆ. ಆದರೆ “ಉಸ್ತಾದರ ಸಂಬಳಕ್ಕಾಗಿ” ಎಂದು ಪ್ರತ್ಯೇಕ ದೇಣಿಗೆ ಕೊಡುವ ಪದ್ಧತಿ ನಮ್ಮಲ್ಲಿ ಇಲ್ಲ. ಉಸ್ತಾದರ ಸಂಬಳ ಕಡಿಮೆ ಇದ್ದರೆ ನಷ್ಟ ಕೇವಲ ಉಸ್ತಾದರಿಗಲ್ಲ, ಇಡೀ ಸಮುದಾಯಕ್ಕೆ.
ಒಳ್ಳೆಯ ಉಸ್ತಾದರು ಬಿಟ್ಟು ಹೋಗುತ್ತಿದ್ದಾರೆ: ಮದ್ರಸ ಕಲಿಸಿಕೊಡಲು ಇಷ್ಟಪಡುತ್ತಿಲ್ಲ. “10 ವರ್ಷ ಕಲಿತು 10000 ಸಂಬಳಕ್ಕೆ ಕೆಲಸ ಮಾಡುವುದಕ್ಕಿಂತ ಬೇರೆ ಕೆಲಸ ಮಾಡುವುದು ಲೇಸು” ಎಂದು ಅವರು ಹೇಳುತ್ತಾರೆ. ಪರಿಣಾಮವಾಗಿ ಮದ್ರಸಗಳಿಗೆ ಅರ್ಹ ಉಸ್ತಾದ್ರು ಸಿಗುತ್ತಿಲ್ಲ.
ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ: ಹೊಟ್ಟೆ ತುಂಬದ ಉಸ್ತಾದ್ ಮನಸ್ಸಿಟ್ಟು ಪಾಠ ಮಾಡಲು ಹೇಗೆ ಸಾಧ್ಯ? ಚಿಂತೆಯಿಂದಿರುವ ಉಸ್ತಾದ್ ಮಕ್ಕಳಿಗೆ ಸರಿಯಾಗಿ ಪಾಠ ಮಾಡಲು ಸಾಧ್ಯವೇ?
ಮಕ್ಕಳ ಭವಿಷ್ಯ ಅಪಾಯದಲ್ಲಿ: ಇಂದು ಮದ್ರಸದಲ್ಲಿ ಓದುತ್ತಿರುವ ಮಗು ನಾಳಿನ ಇಮಾಮ್, ಖತೀಬ್, ಉಸ್ತಾದ್. ಅವರಿಗೆ ಸರಿಯಾದ ಶಿಕ್ಷಣ ಸಿಗದಿದ್ದರೆ ನಾಳಿನ ಸಮುದಾಯದ ಸ್ಥಿತಿ ಏನಾಗುತ್ತದೆ?
ಗೌರವ ಕಡಿಮೆಯಾಗುತ್ತಿದೆ: ಸಮಾಜದಲ್ಲಿ ಉಸ್ತಾದರ ಗೌರವ ಕಡಿಮೆಯಾಗುತ್ತಿದೆ. ಹಿಂದೆ ಉಸ್ತಾದ್ ಎಂದರೆ ಊರಿನ ದೊಡ್ಡ ವ್ಯಕ್ತಿ. ಇಂದು ಉಸ್ತಾದ್ ಎಂದರೆ ಬಡವ ಎಂಬ ಭಾವನೆ ಬಂದಿದೆ. ಇದು ತುಂಬಾ ಅಪಾಯಕಾರಿ.
ಇಸ್ಲಾಂನಲ್ಲಿ ಶಿಕ್ಷಕರಿಗೆ, ಕಾರ್ಮಿಕರಿಗೆ ಅತ್ಯಂತ ಗೌರವವಿದೆ. ಪ್ರವಾದಿ (ಸ) ಹೇಳಿದ್ದಾರೆ – “ಕಾರ್ಮಿಕನ ಬೆವರು ಆರುವ ಮೊದಲು ಅವನ ಕೂಲಿಯನ್ನು ಕೊಡಿ.”
ಉಸ್ತಾದ್ ಕೇವಲ ಕಾರ್ಮಿಕನಲ್ಲ, ಅವನು ನಬಿ (ಸ) ಅವರ ವಾರಸುದಾರ. “ಉಲಮಾಗಳು ನಬಿಯರ ವಾರಸುದಾರರು” ಎಂದು ಹದೀಸ್ನಲ್ಲಿ ಇದೆ. ಅಂತಹ ವಾರಸುದಾರರನ್ನು ಹಸಿವಿನಲ್ಲಿ ಇಡುವುದು ನಮಗೆ ಶೋಭೆ ತರುತ್ತದೆಯೇ? ಈ ಸಮಸ್ಯೆಯು ಕೇವಲ ಬರಹಗಳಿಂದ ಪರಿಹಾರವಾಗುವುದಿಲ್ಲ. ಕಾರ್ಯರೂಪಕ್ಕೆ ಬರಬೇಕು.
ಕನಿಷ್ಠ ಸಂಬಳ ನಿಗದಿ ಮಾಡೋಣ: ಕರ್ನಾಟಕದ ಎಲ್ಲಾ ಮದ್ರಸಗಳಲ್ಲಿ ಉಸ್ತಾದ್ರ ಕನಿಷ್ಠ ಸಂಬಳ 16000 ರೂ. ಇರಬೇಕು. ಸದರ್ ಉಸ್ತಾದ್ರಿಗೆ 20000 ರೂ. ಇರಬೇಕು. ಇದನ್ನು ರೇಂಜ್ ಕಡ್ಡಾಯವಾಗಿ ಜಾರಿಗೊಳಿಸಲು ಪ್ರಯತ್ನಿಸಬೇಕು.
ವಾರ್ಷಿಕ ಏರಿಕೆ ಕಡ್ಡಾಯ: ಪ್ರತಿ ವರ್ಷ ಕನಿಷ್ಠ 1000 ರೂ. ಸಂಬಳ ಏರಿಕೆ ಆಗಬೇಕು. ಬೆಲೆ ಏರಿಕೆಯಾದಾಗ ಸಂಬಳವೂ ಏರಲೇಬೇಕು.
ಉಸ್ತಾದ್ ಕಲ್ಯಾಣ ನಿಧಿ: ಪ್ರತಿ ಮದ್ರಸದಲ್ಲಿ ಪ್ರತ್ಯೇಕ “ಉಸ್ತಾದ್ ಕಲ್ಯಾಣ ನಿಧಿ” ಇರಬೇಕು. ಅನಾರೋಗ್ಯ, ಮಕ್ಕಳ ಮದುವೆ, ತುರ್ತು ಸಂದರ್ಭದಲ್ಲಿ ಈ ನಿಧಿಯಿಂದ ಸಹಾಯ ಮಾಡಬೇಕು.
ಸಮುದಾಯದಲ್ಲಿ ಜಾಗೃತಿ: ಶುಕ್ರವಾರ, ಸಭೆ, ಸಮಾರಂಭಗಳಲ್ಲಿ ಉಸ್ತಾದರ ಸಂಬಳದ ಬಗ್ಗೆ ಮಾತನಾಡಬೇಕು. “ಮದ್ರಸ ಕಟ್ಟಡಕ್ಕಿಂತ ಮುಖ್ಯ ಉಸ್ತಾದ್” ಎಂಬ ಸಂದೇಶವನ್ನು ಜನರಿಗೆ ತಲುಪಿಸಬೇಕು.
ಸರ್ಕಾರದ ಯೋಜನೆಗಳ ಲಾಭ: ಮದ್ರಸ ಶಿಕ್ಷಕರಿಗೆ ಸರ್ಕಾರದ ವಿವಿಧ ಯೋಜನೆಗಳು, ವಕ್ಫ್ ಬೋರ್ಡ್ನ ಸಹಾಯಧನ ಸಿಗುವಂತೆ ಮಾಡಲು ಪ್ರಯತ್ನಿಸಬೇಕು. ವಕ್ಫ್ ಆಸ್ತಿಯ ಆದಾಯದ ಒಂದು ಭಾಗ ಉಸ್ತಾದ್ರ ಕಲ್ಯಾಣಕ್ಕೆ ಸಿಗಬೇಕು.
ಬೆಲೆ ಏರಿಕೆಯ ಬಗ್ಗೆ ಮಾತನಾಡುವ ಪ್ರತಿಯೊಬ್ಬರಿಗೂ ನನ್ನ ಒಂದು ಮನವಿ.
ಬೆಲೆ ಏರಿಕೆಯಿಂದ ಕಂಗಾಲಾದವರು ಕೇವಲ ಗ್ರಾಹಕರಲ್ಲ, ನಮ್ಮ ಉಸ್ತಾದರೂ ಕೂಡ. ನೀವು ಅಂಗಡಿಯಲ್ಲಿ ಹಾಲು ಖರೀದಿಸುವಾಗ 8 ರೂ. ಹೆಚ್ಚಾಗಿದೆ ಎಂದು ಬೇಸರಪಟ್ಟರೆ, ಒಂದು ಕ್ಷಣ ಯೋಚಿಸಿ – 8 ರೂ. ಹೆಚ್ಚಾದ ಹಾಲನ್ನು ಖರೀದಿಸಲು ಸಾಧ್ಯವಾಗದ ಉಸ್ತಾದ್ ಬಗ್ಗೆ.
ನಾವು ಮಸೀದಿಗೆ ದೇಣಿಗೆ ಕೊಡುವಾಗ, ಮದ್ರಸ ಕಟ್ಟಡಕ್ಕೆ ದೇಣಿಗೆ ಕೊಡುವಾಗ, ಒಂದು ಪಾಲನ್ನು ಉಸ್ತಾದರ ಸಂಬಳಕ್ಕಾಗಿಯೂ ಮೀಸಲಿಡೋಣ. ಏಕೆಂದರೆ ಕಟ್ಟಡಗಳು ಶಾಶ್ವತವಲ್ಲ, ಉಸ್ತಾದರು ಶಾಶ್ವತ. ಕಟ್ಟಡ ಬಿದ್ದು ಹೋದರೆ ಮತ್ತೆ ಕಟ್ಟಬಹುದು, ಆದರೆ ಒಬ್ಬ ಉತ್ತಮ ಉಸ್ತಾದ್ ಹೋದರೆ ಮತ್ತೆ ಸಿಗುವುದಿಲ್ಲ.
ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಕಾಪಾಡಬೇಕು ಎಂದು ನಾವು ಹೇಳುತ್ತೇವೆ. ಸಜ್ಜನರ ಸಂಘದಲ್ಲಿ ಅತ್ಯಂತ ಸಜ್ಜನರು ಯಾರು? ನಮ್ಮ ಉಸ್ತಾದರು. ಅವರನ್ನು ಕಂಗಾಲಾಗಿಸಿ, ನಾವು ಎಂದಿಗೂ ಸಜ್ಜನರಾಗಲು ಸಾಧ್ಯವಿಲ್ಲ. ಅವರಿಗೆ ನ್ಯಾಯ ಕೊಟ್ಟಾಗ ಮಾತ್ರ ನಮ್ಮ ಸಂಘಟನೆಗೆ ಅರ್ಥ ಬರುತ್ತದೆ.
ಬನ್ನಿ, ಪರಸ್ಪರ ಸಹಕಾರಿಗಳಾಗಿ, ಉಸ್ತಾದರ ಬೆಂಬಲಕ್ಕೆ ನಿಲ್ಲೋಣ. ಅವರ ಸಂಬಳ ಏರಿಕೆಗೆ ದನಿಯಾಗೋಣ. ಅವರ ಬದುಕಿಗೆ ಭದ್ರತೆ ನೀಡೋಣ. ಉಸ್ತಾದರು ಉಳಿದರೆ ಮದ್ರಸ ಉಳಿಯುತ್ತದೆ. ಮದ್ರಸ ಉಳಿದರೆ ದೀನ್ ಉಳಿಯುತ್ತದೆ. ದೀನ್ ಉಳಿದರೆ ನಾವು ಉಳಿಯುತ್ತೇವೆ.
✍🏻 ಡಿ.ಎ. ಅಬ್ಬಾಸ್ ರಝ್ವಿ ಪಡಿಕ್ಕಲ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.