ನಾಗ್ಪುರ (www.vknews.in): 1930ರ ದಶಕದಲ್ಲಿ ಆರ್ಎಸ್ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಮೇಲೆ ಮೊದಲ ಬಾರಿಗೆ ನಿಷೇಧ ಹೇರಲು ಪ್ರಯತ್ನ ನಡೆದ ಸಂದರ್ಭದಲ್ಲಿ, ಸಂಘದ ಪರವಾಗಿ ಧ್ವನಿ ಎತ್ತಿದ್ದು ಇಬ್ರಾಹಿಂ ಎಂಬ ವ್ಯಕ್ತಿ ಮಾತ್ರ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ಮರಿಸಿದ್ದಾರೆ.
ನಾಗ್ಪುರ ನಾಗರಿಕ ಸಹಕಾರಿ ಬ್ಯಾಂಕ್ ಲಿಮಿಟೆಡ್ನ ನವೀಕರಿಸಲಾದ ಪ್ರಧಾನ ಕಚೇರಿಯಲ್ಲಿ ನೂತನವಾಗಿ ನಿರ್ಮಿಸಲಾದ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೆಂಟ್ರಲ್ ಪ್ರಾವಿನ್ಸ್ ವಿಧಾನಸಭೆಯಲ್ಲಿ ಸಂಘದ ಮೇಲೆ ನಿಷೇಧ ಹೇರುವ ಪ್ರಸ್ತಾಪ ಬಂದಾಗ ಅದನ್ನು ವಿರೋಧಿಸಲು ಯಾವುದೇ ಸ್ವಯಂಸೇವಕರು ಮುಂದೆ ಬಂದಿರಲಿಲ್ಲ. ಸಂಘದ ಸಿದ್ಧಾಂತವನ್ನು ಬೆಂಬಲಿಸುವವರೂ ಇರಲಿಲ್ಲ ಎಂದು ಹೇಳಿದರು.
ಆ ಸಂದರ್ಭದಲ್ಲಿ ಇಬ್ರಾಹಿಂ ಎಂಬ ವ್ಯಕ್ತಿ ಮಾತ್ರ ಸಂಘವನ್ನು ಮುಚ್ಚಬಾರದು, ಅದು ಕೋಮುವಾದಿ ಸಂಘಟನೆಯಲ್ಲ ಎಂದು ವಾದಿಸಿದ್ದರು ಎಂದು ಭಾಗವತ್ ತಿಳಿಸಿದರು.
ಇಬ್ರಾಹಿಂ ಅವರ ಮಾತುಗಳನ್ನು ಸ್ಮರಿಸಿದ ಭಾಗವತ್, “ಹಿಂದೂ ರಾಷ್ಟ್ರ ಎಂದು ಹೇಳುವವರನ್ನು ಮಾನಸಿಕ ಆಸ್ಪತ್ರೆಗೆ ಕಳುಹಿಸಬೇಕು ಎಂದು ನಾನು ಭಾವಿಸುತ್ತೇನೆ. ಆದರೆ, ನನಗೆ ಡಾ. ಹೆಡ್ಗೇವಾರ್ ಪರಿಚಯವಿದೆ. ಅವರು ಮಾನಸಿಕ ಅಸ್ವಸ್ಥರಲ್ಲ; ಒಳ್ಳೆಯ ವ್ಯಕ್ತಿ. ಹಾಗಾಗಿ ಸಂಘ ಕೋಮುವಾದಿಯಾಗಿರಲು ಸಾಧ್ಯವಿಲ್ಲ ಎಂದು ಇಬ್ರಾಹಿಂ ಹೇಳಿದ್ದರು” ಎಂದು ವಿವರಿಸಿದರು.
ಸಂಘ ಸ್ಥಾಪನೆಯಾಗಿ ಕೆಲವೇ ವರ್ಷಗಳಾಗಿದ್ದ ಆ ಸಮಯದಲ್ಲಿ ಅದು ಹೆಚ್ಚು ಪರಿಚಿತವಾಗಿರಲಿಲ್ಲ. ಆದರೆ ಡಾ. ಹೆಡ್ಗೇವಾರ್ ಎಲ್ಲರಿಗೂ ಪರಿಚಿತರಾಗಿದ್ದರು. ಸಂಘ ಆರಂಭವಾದಾಗಿನಿಂದಲೂ ಸ್ವಯಂಸೇವಕರೇ ಅದರ ಗುರುತಾಗಿದ್ದು, 100 ವರ್ಷಗಳ ನಂತರವೂ ಸ್ವಯಂಸೇವಕರೇ ಸಂಘದ ಪ್ರಮುಖ ಗುರುತಾಗಿದ್ದಾರೆ ಎಂದು ಅವರು ಹೇಳಿದರು.
ಪ್ರಚಾರಕರ ಜೀವನದಲ್ಲಿ ಸ್ವಾರ್ಥಕ್ಕೆ ಸ್ಥಾನವಿಲ್ಲ
ಪ್ರಚಾರಕರ ಕುರಿತ ಪುಸ್ತಕವೊಂದರ ಕುರಿತು ಮಾತನಾಡಿದ ಭಾಗವತ್, ಅವರ ಜೀವನದ ಕುರಿತು ಬರೆಯುತ್ತಿರುವುದು ಕೃತಜ್ಞತೆ ಮತ್ತು ಪ್ರೀತಿಯ ಅಭಿವ್ಯಕ್ತಿಯೇ ಹೊರತು ಯಾವುದೇ ಭೌತಿಕ ಲಾಭದ ಉದ್ದೇಶದಿಂದಲ್ಲ ಎಂದರು.
“ಯಾವುದೇ ಪ್ರಚಾರಕರು ಇಂತಹ ಗೌರವವನ್ನು ನಿರೀಕ್ಷಿಸಿಲ್ಲ, ಮುಂದೆಯೂ ನಿರೀಕ್ಷಿಸುವುದಿಲ್ಲ. ಏಕೆಂದರೆ ಇದರಿಂದ ಅವರಿಗೆ ಯಾವುದೇ ಭೌತಿಕ ಲಾಭವಿಲ್ಲ. ಪ್ರಚಾರಕರಿಗೆ ಸಂಘವೇ ಎಲ್ಲವೂ. ಸಂಘವೊಂದನ್ನು ಹೊರತುಪಡಿಸಿ ಅವರಿಗೆ ಬೇರೇನೂ ಇರುವುದಿಲ್ಲ” ಎಂದು ಹೇಳಿದರು.
ಅಂತಹ ವ್ಯಕ್ತಿಗಳ ಬಗ್ಗೆ ಸಹಜವಾಗಿಯೇ ಗೌರವ ಮತ್ತು ಭಕ್ತಿ ಮೂಡುತ್ತದೆ. ಅವರ ಸಮರ್ಪಣೆ ಹಾಗೂ ನಿಷ್ಠೆಯನ್ನು ಕೇವಲ ಬರವಣಿಗೆಯ ಮೂಲಕ ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ. ಅವರೊಂದಿಗೆ ನೇರ ಸಂಪರ್ಕ ಹೊಂದಿದ್ದವರು ಮಾತ್ರ ಅದನ್ನು ಅನುಭವದ ಮೂಲಕ ಅರಿತುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾಜದ ಒಳಿತೇ ಸ್ವಯಂಸೇವಕನ ಗುರಿ
ಸ್ವಯಂಸೇವಕನ ಬದುಕನ್ನು “ಪ್ರವಾಹದ ವಿರುದ್ಧ ಈಜುವ ಜೀವನ” ಎಂದು ಬಣ್ಣಿಸಿದ ಭಾಗವತ್, ಅದು ತತ್ವಾಧಾರಿತ ಬದುಕಾಗಿದ್ದು, ಸ್ವಾರ್ಥ, ಅಹಂಕಾರ ಅಥವಾ ವೈಯಕ್ತಿಕ ನಿರೀಕ್ಷೆಗಳಿಗೆ ಅಲ್ಲಿ ಅವಕಾಶವಿಲ್ಲ ಎಂದರು.
“ಸಮಾಜಕ್ಕೆ ನಾನು ಎಷ್ಟು ಒಳಿತು ಮಾಡಬಹುದು ಎಂಬುದೊಂದೇ ಸ್ವಯಂಸೇವಕನ ಮನಸ್ಸಿನಲ್ಲಿರುವ ಆಲೋಚನೆ” ಎಂದು ಹೇಳಿದರು. ಪ್ರತಿಯೊಬ್ಬ ಸ್ವಯಂಸೇವಕನೂ ಈ ಆದರ್ಶವನ್ನು ಸಂಪೂರ್ಣವಾಗಿ ಪಾಲಿಸುತ್ತಾನೆ ಎಂದು ಹೇಳಲಾಗದು. ವ್ಯಕ್ತಿಯಿಂದ ವ್ಯಕ್ತಿಗೆ ಅದರ ಮಟ್ಟದಲ್ಲಿ ವ್ಯತ್ಯಾಸಗಳಿರಬಹುದು. ಆದರೆ ಎಲ್ಲರ ದಿಕ್ಕು ಮತ್ತು ಗುರಿ ಒಂದೇ ಆಗಿರುತ್ತದೆ ಎಂದು ಮೋಹನ್ ಭಾಗವತ್ ತಿಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.