ನವದೆಹಲಿ (www.vknews.in): 2004ರಲ್ಲಿ ಪ್ರಧಾನಿ ಹುದ್ದೆ ಸ್ವೀಕರಿಸಲು ತಾನು ನಿರಾಕರಿಸಿದ ನಿರ್ಧಾರದ ಹಿಂದೆ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಆತಂಕವೂ ಪ್ರಮುಖ ಕಾರಣವಾಗಿತ್ತು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಹಿರಂಗಪಡಿಸಿದ್ದಾರೆ. ತಮ್ಮ ಆತ್ಮಕಥನ *‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’*ನಲ್ಲಿ 2004ರ ರಾಜಕೀಯ ಬೆಳವಣಿಗೆಗಳ ಕುರಿತು ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
2004ರ ಲೋಕಸಭೆ ಚುನಾವಣೆಗೂ ಮುನ್ನವೇ ತಾನು ಪ್ರಧಾನಿ ಆಗುವುದಿಲ್ಲ ಎಂಬುದನ್ನು ಮಕ್ಕಳಿಗೆ ಸ್ಪಷ್ಟಪಡಿಸಿದ್ದೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ. ಪ್ರಧಾನಿ ಹುದ್ದೆ ಸ್ವೀಕರಿಸುವ ಬಗ್ಗೆ ತನಗೆ ಎಂದಿಗೂ ಆಸಕ್ತಿ ಇರಲಿಲ್ಲ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಗಳ ಹಿನ್ನೆಲೆ ತನ್ನ ಸುರಕ್ಷತೆಯ ಬಗ್ಗೆ ರಾಹುಲ್ ಹಾಗೂ ಪ್ರಿಯಾಂಕಾ ಆತಂಕ ಹೊಂದಿದ್ದರು. ಹೀಗಾಗಿ ತಾನು ಪ್ರಧಾನಿ ಆಗುವುದು ಅವರಿಗೂ ಇಷ್ಟವಿರಲಿಲ್ಲ ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಯುನೈಟೆಡ್ ಪ್ರೋಗ್ರೆಸಿವ್ ಅಲೈಯನ್ಸ್ (ಯುಪಿಎ) ಮೈತ್ರಿಕೂಟದ ನಾಯಕರು ಪ್ರಧಾನಿ ಹುದ್ದೆ ಸ್ವೀಕರಿಸುವಂತೆ ಒತ್ತಡ ಹೇರಿದ್ದರು. ನಾಯಕರ ಒತ್ತಡಕ್ಕೆ ಮಣಿದು ಆರಂಭದಲ್ಲಿ ಒಪ್ಪಿಗೆ ಸೂಚಿಸಿದ್ದರೂ, ರಾಹುಲ್ ಮತ್ತು ಪ್ರಿಯಾಂಕಾ ಅವರೊಂದಿಗೆ ಈ ವಿಚಾರವಾಗಿ ಚರ್ಚೆ ನಡೆಸಿದ್ದೆ ಎಂದು ಸೋನಿಯಾ ತಿಳಿಸಿದ್ದಾರೆ.
ಒಮ್ಮೆ ರಾಹುಲ್ ಮತ್ತು ಪ್ರಿಯಾಂಕಾ ಅವರಲ್ಲಿ ಒಬ್ಬರು, ಪಕ್ಷ ಗೆದ್ದರೆ ನೀವು ಪ್ರಧಾನಿ ಹುದ್ದೆ ಸ್ವೀಕರಿಸುತ್ತೀರಾ ಎಂದು ಪ್ರಶ್ನಿಸಿದ್ದರು. ಅದಕ್ಕೆ ತಾನು ಖಂಡಿತವಾಗಿಯೂ ಇಲ್ಲ ಎಂದು ಉತ್ತರಿಸಿದ್ದಾಗಿ ಅವರು ಬರೆದಿದ್ದಾರೆ. ಆದರೆ, ಪ್ರಧಾನಿ ಹುದ್ದೆ ನಿರಾಕರಿಸುವ ನಿರ್ಧಾರ ತೆಗೆದುಕೊಳ್ಳುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಕೊನೆಗೆ ಹುದ್ದೆಯನ್ನು ನಿರಾಕರಿಸಿ, ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಯಿತು ಎಂದು ಆತ್ಮಕಥನದಲ್ಲಿ ವಿವರಿಸಿದ್ದಾರೆ.
ಮೋದಿ ಕುರಿತು ಸೋನಿಯಾ ಗಾಂಧಿ ಅಭಿಪ್ರಾಯ
ತಮ್ಮ ಆತ್ಮಕಥನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಸೋನಿಯಾ ಗಾಂಧಿ ಪ್ರಸ್ತಾಪಿಸಿದ್ದಾರೆ. ಮೋದಿ ಅವರೊಂದಿಗೆ ಯಾವುದೇ ವೈಯಕ್ತಿಕ ಸಂಪರ್ಕ ಇಲ್ಲ. ಅಧಿಕೃತ ಅಥವಾ ಅರೆ ಅಧಿಕೃತ ಕಾರ್ಯಕ್ರಮಗಳಲ್ಲಿ ಭೇಟಿಯಾದಾಗ ಔಪಚಾರಿಕ ನಮಸ್ಕಾರಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಹಿಂದೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತಿದ್ದರು. ಆದರೆ, ಮೋದಿ ಅವರು ಮುಖಾಮುಖಿಯಾದಾಗ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ; ಅವರ ದೃಷ್ಟಿ ಬೇರೆಡೆಗೆ ಹರಿಯುತ್ತದೆ ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ಮೋದಿ ಮತ್ತು ತಮ್ಮ ಭಾರತದ ಕಲ್ಪನೆಗಳು ವಿಭಿನ್ನವಾಗಿವೆ ಎಂದು ಹೇಳಿರುವ ಅವರು, ಮೋದಿಯವರ ರಾಜಕೀಯ ಪಯಣದ ಕೆಲವು ಅಂಶಗಳಲ್ಲಿ ಸಾಮ್ಯತೆ ಇದೆ ಎಂದೂ ಆತ್ಮಕಥನದಲ್ಲಿ ಬರೆದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.