ಧುಬ್ರಿ (www.vknews.in): ಅಸ್ಸಾಂನ ಧುಬ್ರಿ ಜಿಲ್ಲೆಯ ಅಲಂಗಂಜ್ ರಂಗಮತಿ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಯ ಬಳಿಕ ಮಸೀದಿಯನ್ನು ಧ್ವಂಸಗೊಳಿಸಲಾಗಿದ್ದು, ಅದರ ಅವಶೇಷಗಳ ನಡುವೆಯೇ ಮುಸ್ಲಿಂ ಧರ್ಮೀಯರು ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ಕಾರ್ಯಾಚರಣೆಯಲ್ಲಿ ಸಮೀಪದಲ್ಲಿದ್ದ ಮದರಸಾವನ್ನೂ ನೆಲಸಮಗೊಳಿಸಲಾಗಿದೆ ಎಂದು ವರದಿಯಾಗಿದೆ.
ಅಸ್ಸಾಂನಲ್ಲಿ ನವೆಂಬರ್ 1ರಿಂದ ನಡೆಯುತ್ತಿರುವ ತೆರವು ಕಾರ್ಯಾಚರಣೆಯಿಂದ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಮನೆ ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಈ ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ಬುಲ್ಡೋಜರ್ಗಳು ಮತ್ತು ಅಗೆಯುವ ಯಂತ್ರಗಳನ್ನು ಬಳಸಲಾಗಿದ್ದು, ಸುಮಾರು 650 ಬಿಘಾ ಭೂಮಿಯನ್ನು ತೆರವುಗೊಳಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ನವೆಂಬರ್ 13ರಂದು ಗುವಾಹಟಿ ಹೈಕೋರ್ಟ್ ನಡೆಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಸ್ಸಾಂನಾದ್ಯಂತ ನಡೆಯುತ್ತಿರುವ ತೆರವು ಅಭಿಯಾನದ ಭಾಗವಾಗಿ ಅಲಂಗಂಜ್ ರಂಗಮತಿ ಪ್ರದೇಶದಲ್ಲಿಯೂ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಇದಕ್ಕೂ ಮೊದಲು ನವೆಂಬರ್ 8ರಂದು ಲಖಿಂಪುರದಲ್ಲಿಯೂ ಇದೇ ರೀತಿಯ ತೆರವು ಕಾರ್ಯಾಚರಣೆ ನಡೆದಿತ್ತು.
ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಲಖಿಂಪುರದ ತೆರವು ಕಾರ್ಯಾಚರಣೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಕಾರ್ಯಾಚರಣೆಯನ್ನು ಅವರು ‘ಘರ್ ಕಿ ಸಫಾಯಿ’ ಎಂದು ಬಣ್ಣಿಸಿದ್ದರು. ದೀಪಾವಳಿ ಸಂದರ್ಭದಲ್ಲಿ ಮನೆಗಳನ್ನು ಸ್ವಚ್ಛಗೊಳಿಸುವುದಕ್ಕೆ ಹೋಲಿಕೆ ಮಾಡಿ ಈ ಪದವನ್ನು ಬಳಸಿದ್ದರು ಎಂದು ವರದಿ ತಿಳಿಸಿದೆ.
ಈ ಬೆಳವಣಿಗೆ ಕುರಿತು ಎಂ.ಡಿ. ಜಾವೇದ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, ಅಧಿಕಾರದಲ್ಲಿರುವವರು ಯಾರೂ ಶಾಶ್ವತವಲ್ಲ. ಮುಗ್ಧ ಜನರ ಮೇಲೆ ಉಂಟಾಗುವ ನೋವು ಮತ್ತು ಸಂಕಷ್ಟವು ತಲೆಮಾರುಗಳವರೆಗೆ ಉಳಿಯುವ ಗಾಯಗಳನ್ನು ಉಂಟುಮಾಡುತ್ತದೆ ಎಂದು ಬರೆದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.