ಮರ್ಹೂಂ ಶಾಹ್ ಉಸ್ತಾದರ ಗರಡಿಯಲ್ಲಿ ಪಳಗಿದ ಶಿಸ್ತಿನ ಶಿಪಾಯಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ.,
(www.vknews.in) : ಅರಂತೋಡು ಅಸುಪಾಸಿನ ಅನಿವಾಸಿಯರು ಸೇರಿ ಇತ್ತೀಚೆಗೆ ದುಬಾಯಿಯಲ್ಲಿ ನಡೆಸಿದ ಸ್ನೇಹ ಸಮ್ಮಿಲನ ಅಕ್ಷರಶಃ ಸ್ನೇಹದ, ಭಾತೃತ್ವದ, ಪ್ರೀತಿಯ,ಶಾಂತಿಯ ಮೇರು ಉದಾಹರಣೆಯಾಗಿ ಅದ್ಭುತ ಚಿಂತನ ಮಂಥನದ ವೇದಿಕೆಯಾಗಿ ಮೂಡಿಬಂತು. ಅರಂತೋಡು ಎಂಬ ಚಿಕ್ಕ ಊರಿಗೆ ಕರಾವಳಿಯಲ್ಲಿ ಅದರದ್ದೇ ಆದ ಸ್ಥಾನ ಮಾನವಿದೆ.
ಕನ್ನಡದ ಕುಲಪತಿ ಮರ್ಹೂಂ ಡಾ| ಕೆ ಎಂ ಶಾಹ್ ಉಸ್ತಾದರಿಂದಾಗಿಯೇ ದಕ್ಷಿಣ ಕರ್ನಾಟಕ ಹಾಗೂ ಕಾಸರಗೋಡಿನ ಮುಸ್ಲಿಂ ಕ್ಷೇತ್ರದಲ್ಲಿ ಅರಂತೋಡು ಬಹುಶಃ ಬಹಳ ಪ್ರಸಿದ್ದಿ ಪಡೆದಿದೆ ಎನ್ನ ಬಹುದು. ಮುಸ್ಲಿಮರಿಗೆ ಕನ್ನಡದೊಂದಿಗೆ ಒಂದು ರೀತಿಯ ಅಸ್ಪೃಶ್ಯತಾ ಭಾವವಿದ್ದ ಆ ಕಾಲದಲ್ಲಿ ಅಂದರೆ ಸುಮಾರು ಐವತ್ತು ವರ್ಷಗಳ ಹಿಂದೆ ಕನ್ನಡದಲ್ಲಿ ಸರಳ ಪಥ ಹಾಗೂ ಅಲಮುಲ್ ಹುದಾ ಮಾಸ ಪತ್ರಿಕೆಯನ್ನು ಹೊರತಂದು ಅದನ್ನು ಸ್ವ ಪರಿಶ್ರಮದಿಂದ ಪ್ರಚಾರ ಪಡಿಸಿ ಕನ್ನಡ ಸೇವೆ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು. ಅದು ಮಾತ್ರವಲ್ಲದೇ ಅಂದಿನ ಸಂದರ್ಭದಲ್ಲಿ ಒಬ್ಬ ಮುಸ್ಲಿಂ ಧಾರ್ಮಿಕ ಗುರುವಾಗಿ ಕನ್ನಡದಲ್ಲಿ ಭಾಷಣ ಮಾಡುವುದಕ್ಕೂ ಅವರು ಮಾದರಿ ತೋರಿಸಿ ಕೊಟ್ಟಿದ್ದರು.
ಪಾಂಡಿತ್ಯದ ಮೇರು ಪರ್ವತವಾಗಿದ್ದ ಅವರು ಒಬ್ಬ ಯೂನಾನಿ ವೈದ್ಯರೂ ಆಗಿದ್ದರು. ಐವತ್ತು ವರ್ಷಕ್ಕಿಂತಲೂ ಮಿಕ್ಕಿ ಒಂದೇ ಮಸೀದಿಯಲ್ಲಿ ಸೇವೆಗೈದು ದಾಖಲೆ ನಿರ್ಮಿಸಿದ ಶಾಹ್ ಉಸ್ತಾದ್ ರನ್ನು ಜಿಲ್ಲೆಯ ಮುಸ್ಲಿಂ ಸಂಘಟನೆಗಳು ಗುರುತಿಸುವಲ್ಲಿ ವಿಫಲತೆ ಕಂಡಿದೆ ಎಂಬುದನ್ನು ಸಾಂದರ್ಭಿಕವಾಗಿ ಹೇಳಬೇಕಾಗುತ್ತದೆ. ಶಾಹ್ ಉಸ್ತಾದರ ಗರಡಿಯಲ್ಲಿ ಪಳಗಳು ಭಾಗ್ಯ ದೊರಕಿದ ಅರಂತೋಡು ಅಸುಪಾಸಿನ ನಿವಾಸಿಗಳು ಕೂಡಾ ಶಾಹ್ ಉಸ್ತಾದರ ಅದೇ ಹಾದಿಯಲ್ಲಿ ಇವತ್ತಿಗೂ ಮುಂದುವರಿಯುತ್ತಿರುವುದು ವಿಷೇಶ.
ಸುಳ್ಯ ಭಾಗದ ಮುಸ್ಲಿಮರು ಹೆಚ್ಚಾಗಿ ಮಲಯಾಳಿಗೆ ಹತ್ತಿರವಾಗಿದ್ದರೂ ಸ್ನೇಹ ಸಮ್ಮಿಲನದ ಉದ್ದಗಲಕ್ಕೂ ಕನ್ನಡವೇ ಕಾರುಬಾರು ಸಾಧಿಸಿದ್ದು ಶಾಹ್ ಉಸ್ತಾದರಿಂದ ದೊರಕಿದ ಪ್ರೋತ್ಸಾಹ ಎಂಬುದನ್ನು ನಾನು ಸ್ಮರಿಸಿದಾಗ ಸಭಿಕರು ಹೌದೌದೆಂದಿದ್ದು ಒಂದು ಪ್ರಭುದ್ದ ಧಾರ್ಮಿಕ ಗುರುವಿಗೆ ಜನರನ್ನು ಎಲ್ಲಾ ಕ್ಷೇತ್ರದಲ್ಲೂ ಪರಿವರ್ತಿಸಲು ಸಾಧ್ಯ ಎಂಬುದಕ್ಕೆ ನಿದರ್ಶನವೊದಗಿಸಿತು.
ಅಷ್ಟೊಂದು ದೊಡ್ಡ ಮೊಹಲ್ಲಾ ಅಲ್ಲದಿದ್ದರೂ ದೊಡ್ಡ ಮೊಹಲ್ಲಾಗಳನ್ನೇ ನಾಚಿಸುವ ಹಂತಕ್ಕೆ ಅರಂತೋಡಿನ ಯುವಕರ ಒಗ್ಗಟ್ಟು ,ಇಚ್ಚಾಶಕ್ತಿ ,ಉದಾರತೆ,ಗುರುತಿಸುವಿಕೆ,ಸಾಮಾಜಿಕ ಪ್ರಜ್ಞೆ ಬೆಳೆದದ್ದು ಮೆಚ್ಚುವಂತದ್ದೇ. ಸದ್ಯ ಅರಂತೋಡಿನ ಮಸೀದಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೂಫೀವರ್ಯರಾದ ಕೊಡಗಿನ ಆಸಿಫ್ ಅಝ್ಹರಿ ಉಸ್ತಾದರ ಬಗ್ಗೆ ಹಲವರು ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿ ಮಾತಾಡಿದ್ದು ಕೇಳಿಸಿ ಕೊಂಡಾಗ ಊರಿನ ಧಾರ್ಮಿಕ ಕ್ಷೇತ್ರದ ಬಗ್ಗೆ ಇವರಿಗೆ ಇರುವ ಕಾಳಜಿಯೇ ಇವರನ್ನು ಮುನ್ನಡೆಸುತ್ತಿದೆ ಎಂಬುದು ಮನದಟ್ಟಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಲು ಅವಕಾಶ ನೀಡಿ ಸನ್ಮಾನಿಸಿ ಬೀಳ್ಕೊಟ್ಟ ಸಂಘಟಕರಿಗೆ ಅಲ್ಲಾಹು ಎಲ್ಲಾ ರೀತಿಯ ಅನುಗ್ರಹ ಕರುಣಿಸಲಿ.ಆಮೀನ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.