ಪುತ್ತೂರು (www.vknews.in): ಶಾಸಕ ಅಶೋಕ್ ಕುಮಾರ್ ರೈ ಅವರ ಅಭಿವೃದ್ಧಿ ಕಾರ್ಯಗಳ ಕುರಿತು ಬಹಿರಂಗ ಚರ್ಚೆಗೆ ಬಿಜೆಪಿ ಪದಾಧಿಕಾರಿ ಆದೇಶ್ ಶೆಟ್ಟಿ ಅವರು ಹಾಕಿರುವ ಸವಾಲನ್ನು ಕಾಂಗ್ರೆಸ್ ಕಾರ್ಯಕರ್ತ ಜಯಂತ ಕಾರೆಕಾಡು ಸ್ವೀಕರಿಸಿದ್ದಾರೆ. ಶಾಸಕರು ಕ್ಷೇತ್ರಕ್ಕೆ ತಂದಿರುವ ಅನುದಾನಗಳು, ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಜನಪರ ಯೋಜನೆಗಳ ಕುರಿತು ದಾಖಲೆಗಳ ಸಹಿತ ಬಹಿರಂಗ ಚರ್ಚೆಗೆ ಸಿದ್ಧ ಎಂದು ಅವರು ಘೋಷಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಯಂತ ಕಾರೆಕಾಡು, ಅಶೋಕ್ ಕುಮಾರ್ ರೈ ಅವರ ಹೆಸರನ್ನು ಪ್ರಸ್ತಾಪಿಸುವ ಮೂಲಕ ಪ್ರಚಾರ ಪಡೆಯುವ ಉದ್ದೇಶದಿಂದ ಮಾಧ್ಯಮಗಳ ಮುಂದೆ ಬಹಿರಂಗ ಸವಾಲು ಹಾಕಿರಬಹುದು ಎಂದು ಟೀಕಿಸಿದ್ದಾರೆ. ಅಶೋಕ್ ಕುಮಾರ್ ರೈ ಅವರು ಪ್ರತಿಯೊಬ್ಬ ಬಿಜೆಪಿ ಪದಾಧಿಕಾರಿಯ ಹೇಳಿಕೆಗೂ ಉತ್ತರಿಸುತ್ತಾ ಕೂರುವ ಅಗತ್ಯವಿಲ್ಲ. ಅವರ ಅಭಿವೃದ್ಧಿ ಕಾರ್ಯಗಳೇ ಪ್ರಶ್ನೆಗಳಿಗೆ ಉತ್ತರ ನೀಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದಾಖಲೆಗಳೊಂದಿಗೆ ಚರ್ಚೆಗೆ ಸಿದ್ಧ
ಶಾಸಕರ ಪರವಾಗಿ ಮಾತನಾಡಲು ಹಾಗೂ ಅವರ ಅಭಿವೃದ್ಧಿ ಕಾರ್ಯಗಳ ದಾಖಲೆಗಳನ್ನು ಮುಂದಿಡಲು ತನ್ನಂತಹ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನೇ ಸಾಕು ಎಂದು ಹೇಳಿರುವ ಜಯಂತ, ಆದೇಶ್ ಶೆಟ್ಟಿ ಹಾಕಿರುವ ಸವಾಲನ್ನು ಬಹಿರಂಗವಾಗಿಯೇ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.
ಪುತ್ತೂರು ಕ್ಷೇತ್ರಕ್ಕೆ ಶಾಸಕರು ತಂದಿರುವ ಅನುದಾನಗಳು, ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ಜಾರಿಗೊಳಿಸಿರುವ ಜನಪರ ಯೋಜನೆಗಳ ಕುರಿತು ಯಾವುದೇ ಪೂರ್ವಸಿದ್ಧತೆಯ ಭಯವಿಲ್ಲದೆ ಚರ್ಚೆಗೆ ಸಿದ್ಧನಿದ್ದೇನೆ. ನೀವು ದಾಖಲೆಗಳೊಂದಿಗೆ ಬನ್ನಿ, ನಾನೂ ದಾಖಲೆಗಳೊಂದಿಗೇ ಬರುತ್ತೇನೆ ಎಂದು ಸವಾಲು ಹಾಕಿದ್ದಾರೆ.
“ದಿನಾಂಕ ನಿಮ್ಮದು, ಸ್ಥಳ ನಿಮ್ಮದು…”
“ಆದ್ದರಿಂದ ಇನ್ನು ತಡವೇಕೆ? ದಿನಾಂಕ ನಿಮ್ಮದು… ಸ್ಥಳ ನಿಮ್ಮದು… ವೇದಿಕೆ ನಿಮ್ಮದು… ಸವಾಲು ನಿಮ್ಮದು… ಉತ್ತರ ಮಾತ್ರ ನನ್ನದು!” ಎಂದು ಜಯಂತ ಕಾರೆಕಾಡು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಪ್ರಚಾರಕ್ಕಾಗಿ ಸವಾಲು ಹಾಕುವುದು ಬೇರೆ, ದಾಖಲೆಗಳೊಂದಿಗೆ ಚರ್ಚೆಗೆ ನಿಲ್ಲುವುದು ಬೇರೆ ಎಂದು ಹೇಳಿರುವ ಅವರು, ಆದೇಶ್ ಶೆಟ್ಟಿ ಅವರು ಚರ್ಚೆಗೆ ನಿಗದಿಪಡಿಸುವ ದಿನಾಂಕ ಮತ್ತು ಸ್ಥಳದ ಮಾಹಿತಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.