ನೈರೋಬಿ (www.vknews.in): ವಿವಾಹೇತರ ಸಂಬಂಧದಿಂದ ಮಗುವಿಗೆ ಜನ್ಮ ನೀಡಿದ ಆರೋಪದಲ್ಲಿ ಸೌದಿ ಅರೇಬಿಯಾದಲ್ಲಿ 100 ಛಡಿಯೇಟು ಶಿಕ್ಷೆಗೆ ಗುರಿಯಾಗಿರುವ 40 ವರ್ಷದ ಕೀನ್ಯಾ ಮಹಿಳೆಯ ಪ್ರಕರಣವನ್ನು ಬಗೆಹರಿಸಲು ಕೀನ್ಯಾ ಸರ್ಕಾರ ಸೌದಿ ಅರೇಬಿಯಾದೊಂದಿಗೆ ಮಾತುಕತೆ ನಡೆಸಲು ಮುಂದಾಗಿದೆ. ಕೀನ್ಯಾದ ವಿದೇಶಾಂಗ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಕೊರಿರ್ ಸಿಂಗೋಯಿ ಈ ವಿಷಯವನ್ನು ತಿಳಿಸಿದ್ದಾರೆ.
ದಿ ನ್ಯೂಯಾರ್ಕ್ ಟೈಮ್ಸ್ ಮೊದಲು ವರದಿ ಮಾಡಿದ್ದ ಈ ಪ್ರಕರಣದಲ್ಲಿ ಎಸ್ತರ್ ವಾಂಜಾ ಮುಥೋನಿ ಎಂಬ ಮಹಿಳೆ ತನ್ನ ಒಂದು ವರ್ಷದ ಮಗನೊಂದಿಗೆ ಕೀನ್ಯಾಕ್ಕೆ ಮರಳಲು ಪ್ರಯತ್ನಿಸುತ್ತಿದ್ದರೂ ಸೌದಿ ಅರೇಬಿಯಾವನ್ನು ತೊರೆಯಲು ಸಾಧ್ಯವಾಗಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಕೊರಿರ್ ಸಿಂಗೋಯಿ, ಸಂಕೀರ್ಣ ಕಾನೂನು ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ಸೌದಿ ಅರೇಬಿಯಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
“ನಮ್ಮ ಕಾನೂನು ವ್ಯವಸ್ಥೆಯ ಪ್ರಕಾರ ಇದು ಕ್ರೂರ ಮತ್ತು ಅಮಾನವೀಯ ಶಿಕ್ಷೆಯಾಗಿರಬಹುದು ಎಂಬ ವಿಚಾರದಿಂದ ಬೇಸರವಾಗಿದೆ. ಆದರೆ ಸೌದಿ ನ್ಯಾಯಾಂಗ ವ್ಯವಸ್ಥೆಯ ಸಾರ್ವಭೌಮತ್ವವನ್ನು ನಾವು ಗೌರವಿಸುತ್ತೇವೆ. ನ್ಯಾಯಾಂಗ ಶಿಕ್ಷೆಗಳ ಜಾರಿಯಂತಹ ಸಂಕೀರ್ಣ ವಿಚಾರಗಳಲ್ಲಿ ನಮ್ಮ ಸಹವರ್ತಿಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತೇವೆ” ಎಂದು ಅವರು ತಿಳಿಸಿದ್ದಾರೆ.
ಮುಥೋನಿ ಸೌದಿ ಅರೇಬಿಯಾದಲ್ಲಿ ಗೃಹ ಕಾರ್ಮಿಕೆಯಾಗಿ ಕೆಲಸ ಮಾಡುತ್ತಿದ್ದಾಗ ಈಜಿಪ್ಟ್ನ ವ್ಯಕ್ತಿಯೊಬ್ಬರಿಂದ ಗರ್ಭಿಣಿಯಾಗಿದ್ದರು. ಬಳಿಕ ಆ ವ್ಯಕ್ತಿ ದೇಶ ತೊರೆದಿದ್ದ ಎಂದು ವರದಿಯಾಗಿದೆ. ಮಹಿಳೆಯ ಮಗುವಿಗೆ ಜನನ ಪ್ರಮಾಣಪತ್ರ ನಿರಾಕರಿಸಲಾಗಿತ್ತು. ಕೀನ್ಯಾಕ್ಕೆ ಮರಳುವ ಪ್ರಕ್ರಿಯೆಗೆ ಈ ದಾಖಲೆ ಸಹಕಾರಿಯಾಗುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೀನ್ಯಾ ರಾಯಭಾರ ಕಚೇರಿಯು ಮುಥೋನಿ ಹಾಗೂ ಇದೇ ರೀತಿಯ ಪರಿಸ್ಥಿತಿಯಲ್ಲಿದ್ದ ಇತರ ಮಹಿಳೆಯರ ಮನವಿಗಳನ್ನು ನಿರ್ಲಕ್ಷಿಸಿತ್ತು ಎಂಬ ಆರೋಪವೂ ವರದಿಯಲ್ಲಿದೆ. ಕೆಲವರಿಗೆ ನೆರವು ನೀಡುವ ಬದಲಾಗಿ ಲಂಚ ಅಥವಾ ಲೈಂಗಿಕ ಅನುಕೂಲಗಳನ್ನು ಕೇಳಲಾಗಿತ್ತು ಎಂಬ ಆರೋಪಗಳೂ ಕೇಳಿಬಂದಿವೆ.
2025ರಲ್ಲಿ ದಿ ನ್ಯೂಯಾರ್ಕ್ ಟೈಮ್ಸ್ ಈ ಮಹಿಳೆಯ ಸಂಕಷ್ಟದ ಕುರಿತು ವರದಿ ಪ್ರಕಟಿಸಿದ ಬಳಿಕ, ಅವರನ್ನು ಸೌದಿ ಅರೇಬಿಯಾಕ್ಕೆ ಕರೆದೊಯ್ದಿದ್ದ ಮಹರಾ ಹ್ಯೂಮನ್ ರಿಸೋರ್ಸಸ್ ಸಂಸ್ಥೆ ಮಧ್ಯಪ್ರವೇಶಿಸಿ ಆಶ್ರಯ ವ್ಯವಸ್ಥೆ ಮಾಡಿತ್ತು. ಬಳಿಕ ಕೀನ್ಯಾ ರಾಯಭಾರ ಕಚೇರಿ ಮುಥೋನಿ ಮತ್ತು ಅವರ ಮಗನಿಗೆ ಪ್ರಯಾಣದ ದಾಖಲೆಗಳನ್ನು ನೀಡಿತ್ತು. ಆದರೆ ಕ್ರಿಮಿನಲ್ ಪ್ರಕರಣ ಬಾಕಿ ಇದ್ದ ಕಾರಣ ಅವರು ದೇಶ ತೊರೆಯಲು ಸಾಧ್ಯವಾಗಿರಲಿಲ್ಲ.
ನಂತರ ವಿವಾಹೇತರ ಲೈಂಗಿಕ ಸಂಬಂಧ ಹೊಂದಿದ ಆರೋಪದಲ್ಲಿ ನ್ಯಾಯಾಲಯ ಅವರನ್ನು ದೋಷಿ ಎಂದು ಘೋಷಿಸಿತ್ತು. ವಿಚಾರಣೆ ವೇಳೆ ಭಾಷಾಂತರಕಾರರ ನೆರವು ದೊರೆತಿದ್ದರೂ, ಕಾನೂನು ಪ್ರತಿನಿಧಿ ಅಥವಾ ವಕೀಲರ ನೆರವು ಇರಲಿಲ್ಲ ಎಂದು ವರದಿಯಾಗಿದೆ.
ಸೌದಿ ಅರೇಬಿಯಾದಲ್ಲಿ ವಿವಾಹೇತರ ಲೈಂಗಿಕ ಸಂಬಂಧ ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಲವು ದೇಶಗಳು ತಮ್ಮ ನಾಗರಿಕರಿಗೆ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವಾಗ ಕಾನೂನು ಸಂಬಂಧಿತ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತವೆ.
ನಿರಂತರ ಟೀಕೆಗಳ ಹಿನ್ನೆಲೆಯಲ್ಲಿ 2020ರಲ್ಲಿ ಸೌದಿ ಅರೇಬಿಯಾ ನ್ಯಾಯಾಂಗ ಶಿಕ್ಷೆಯಾಗಿ ಛಡಿಯೇಟು ವಿಧಿಸುವುದನ್ನು ರದ್ದುಗೊಳಿಸುವುದಾಗಿ ಘೋಷಿಸಿತ್ತು. ಆದರೆ ಕೆಲವು ಅಪರಾಧಗಳಿಗೆ ಸಂಬಂಧಿಸಿದಂತೆ ಛಡಿಯೇಟು ಶಿಕ್ಷೆ ಇನ್ನೂ ಅನ್ವಯವಾಗುತ್ತಿರುವುದು ಈ ಪ್ರಕರಣದ ಮೂಲಕ ಮತ್ತೆ ಚರ್ಚೆಗೆ ಬಂದಿದೆ.
ಸೌದಿ ಅರೇಬಿಯಾದಲ್ಲಿ ದಾಖಲೆಗಳಿಲ್ಲದೆ ಜನಿಸಿರುವ ಮಕ್ಕಳ ಸಮಸ್ಯೆಗಳ ಕುರಿತು 2025ರ ನವೆಂಬರ್ನಲ್ಲಿ ಕೀನ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗಮನ ಸೆಳೆದಿತ್ತು. ಸಚಿವಾಲಯದ ಪ್ರಕಾರ, ಈ ಸಮಸ್ಯೆಗೆ ಸಂಬಂಧಿಸಿದಂತೆ 707 ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಸೌದಿ ಸರ್ಕಾರದೊಂದಿಗೆ ಮಾತುಕತೆ ನಡೆಸಿದ ಬಳಿಕ ತುರ್ತು ಪ್ರಯಾಣದ ದಾಖಲೆಗಳನ್ನು ಒದಗಿಸಿ 59 ಕೀನ್ಯಾ ತಾಯಂದಿರು ಮತ್ತು 73 ಮಕ್ಕಳನ್ನು ಸ್ವದೇಶಕ್ಕೆ ಮರಳಲು ಸಹಕರಿಸಲಾಗಿತ್ತು.
2022ರಿಂದ ಈವರೆಗೆ ಸುಮಾರು 500 ಸಂತ್ರಸ್ತರನ್ನು ಕೀನ್ಯಾಕ್ಕೆ ವಾಪಸ್ ಕರೆತರಲಾಗಿದೆ. ಉದ್ಯೋಗದ ಹೆಸರಿನಲ್ಲಿ ವಂಚನೆ ನಡೆಸುತ್ತಿದ್ದ 600 ವಿದೇಶಿ ಉದ್ಯೋಗ ನೇಮಕಾತಿ ಏಜೆನ್ಸಿಗಳ ನೋಂದಣಿಯನ್ನೂ ರದ್ದುಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.