ನವದೆಹಲಿ (www.vknews.in): ವಿವಾಹೇತರ ಲೈಂಗಿಕ ಸಂಬಂಧ ಹೊಂದಿದ ಆರೋಪದಲ್ಲಿ ಮಗುವಿಗೆ ಜನ್ಮ ನೀಡಿದ ಕೀನ್ಯಾದ 40 ವರ್ಷದ ಮಹಿಳೆಗೆ ಸೌದಿ ಅರೇಬಿಯಾದ ನ್ಯಾಯಾಲಯ 100 ಛಡಿಯೇಟು ಹಾಗೂ ಒಂದು ವರ್ಷದ ಗಡಿಪಾರು ಶಿಕ್ಷೆ ವಿಧಿಸಿದೆ. ರಿಯಾದ್ನ ಕ್ರಿಮಿನಲ್ ನ್ಯಾಯಾಲಯವು ಎಸ್ತರ್ ವಾಂಜಾ ಮುಥೋನಿ ಎಂಬ ಮಹಿಳೆಯನ್ನು ದೋಷಿ ಎಂದು ತೀರ್ಪು ನೀಡಿದೆ. ಈ ಪ್ರಕರಣವು ವಲಸೆ ಕಾರ್ಮಿಕ ಮಹಿಳೆಯರ ಹಕ್ಕುಗಳು ಮತ್ತು ಸೌದಿ ಅರೇಬಿಯಾದ ಕಾನೂನು ಸುಧಾರಣೆಗಳ ಕುರಿತು ಮಾನವ ಹಕ್ಕುಗಳ ಸಂಘಟನೆಗಳ ಟೀಕೆಗೆ ಕಾರಣವಾಗಿದೆ.
ಐವರು ಮಕ್ಕಳ ತಾಯಿಯಾಗಿರುವ ಮುಥೋನಿ ಸೌದಿ ಅರೇಬಿಯಾದಲ್ಲಿ ಗೃಹ ಕಾರ್ಮಿಕೆಯಾಗಿ ಕಾನೂನುಬದ್ಧವಾಗಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಈಜಿಪ್ಟ್ನ ವ್ಯಕ್ತಿಯೊಬ್ಬರೊಂದಿಗೆ ಅಲ್ಪಾವಧಿಯ ಸಂಬಂಧದಿಂದ ಅವರು ಗರ್ಭಿಣಿಯಾಗಿದ್ದರು. ನ್ಯಾಯಾಲಯದ ದಾಖಲೆಗಳಲ್ಲಿ ಮೊಹಮೂದ್ ಎಂದು ಗುರುತಿಸಲಾದ ಆ ವ್ಯಕ್ತಿ, ಮಹಿಳೆ ಮಗುವಿಗೆ ಜನ್ಮ ನೀಡುವ ವೇಳೆಗೆ ಸೌದಿ ಅರೇಬಿಯಾವನ್ನು ತೊರೆದಿದ್ದ ಎನ್ನಲಾಗಿದೆ.
2025ರ ಆಗಸ್ಟ್ನಲ್ಲಿ ಸಿಬ್ಬಂದಿ ವಸತಿ ನಿಲಯದಲ್ಲಿ ಮುಥೋನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಬುಡಿ ಎಂದು ಹೆಸರಿಸಲಾದ ಮಗುವಿನೊಂದಿಗೆ ತಾಯಿಯನ್ನು ಮೇಲ್ವಿಚಾರಕರೊಬ್ಬರು ಪತ್ತೆಹಚ್ಚಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಗರ್ಭಧಾರಣೆಗೆ ಸಂಬಂಧಿಸಿದ ವಿಚಾರಣೆಗಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.
ಬಿಡುಗಡೆಯಾದ ಬಳಿಕ ಅವರಿಗೆ ವಸತಿ ನಿಲಯ ಪ್ರವೇಶ ನಿರಾಕರಿಸಲಾಯಿತು. ಆಶ್ರಯ ಕೇಂದ್ರವೊಂದರಲ್ಲಿಯೂ ಅವರಿಗೆ ಅವಕಾಶ ಸಿಗಲಿಲ್ಲ ಎಂದು ವರದಿಯಾಗಿದೆ. ಕೊನೆಗೆ ರಿಯಾದ್ನ ಪೆಟ್ರೋಲ್ ಬಂಕ್ ಒಂದರಲ್ಲಿ ಆಶ್ರಯ ಪಡೆದಿದ್ದರು. ಸ್ವದೇಶಕ್ಕೆ ಮರಳಲು ಪ್ರಯತ್ನಿಸುತ್ತಿದ್ದ ಹಲವು ವಲಸೆ ಮಹಿಳೆಯರು ಅಲ್ಲಿದ್ದರು ಎನ್ನಲಾಗಿದೆ.
ನಂತರ ಉದ್ಯೋಗದಾತರು ಅವರಿಗೆ ವಸತಿ ವ್ಯವಸ್ಥೆ ಮಾಡಿದ್ದರು. ಕೀನ್ಯಾ ರಾಯಭಾರ ಕಚೇರಿಯೂ ದೇಶಕ್ಕೆ ಮರಳಲು ಅಗತ್ಯವಾದ ದಾಖಲೆಗಳನ್ನು ನೀಡಿತ್ತು. ಆದರೆ ಕ್ರಿಮಿನಲ್ ಪ್ರಕರಣ ಬಾಕಿ ಇದ್ದ ಕಾರಣ ಅವರಿಗೆ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ.
ನ್ಯಾಯಾಲಯದ ತೀರ್ಪಿನಿಂದ ತೀವ್ರ ಭಯಗೊಂಡಿರುವುದಾಗಿ ಮುಥೋನಿ ದಿ ನ್ಯೂಯಾರ್ಕ್ ಟೈಮ್ಸ್ಗೆ ತಿಳಿಸಿದ್ದಾರೆ. “ನನಗೆ ತುಂಬಾ ಭಯವಾಗುತ್ತಿದೆ. ಆ ಛಡಿಯೇಟುಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನನಗನಿಸುತ್ತದೆ” ಎಂದು ಅವರು ಹೇಳಿದ್ದಾರೆ. ತಮಗೆ ಇಂತಹ ಶಿಕ್ಷೆ ವಿಧಿಸುವ ಅಗತ್ಯವಿರಲಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಮೂರು ನ್ಯಾಯಾಧೀಶರ ಪೀಠವು ಹಲವು ವಿಚಾರಣೆಗಳ ಬಳಿಕ ಅಕ್ಟೋಬರ್ನಲ್ಲಿ ಮುಥೋನಿಯನ್ನು ದೋಷಿ ಎಂದು ತೀರ್ಪು ನೀಡಿದೆ. ವಿಚಾರಣೆ ವೇಳೆ ಭಾಷಾಂತರಕಾರರ ನೆರವು ದೊರೆತಿದ್ದರೂ, ಅವರಿಗೆ ವಕೀಲರ ನೆರವು ಇರಲಿಲ್ಲ ಎಂದು ವರದಿಗಳು ತಿಳಿಸಿವೆ.
ವಿವಾಹೇತರ ಲೈಂಗಿಕ ಸಂಬಂಧಕ್ಕೆ 100 ಛಡಿಯೇಟು ವಿಧಿಸುವ ಇಸ್ಲಾಮಿಕ್ ಕಾನೂನಿನ ವ್ಯಾಖ್ಯಾನವನ್ನು ನ್ಯಾಯಾಲಯ ತನ್ನ ತೀರ್ಪಿಗೆ ಆಧಾರವಾಗಿಸಿಕೊಂಡಿದೆ ಎನ್ನಲಾಗಿದೆ. ಆದರೆ ಮಗುವಿನ ತಂದೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವ ಬಗ್ಗೆ ತೀರ್ಪಿನಲ್ಲಿ ಉಲ್ಲೇಖವಿಲ್ಲ ಎಂದು ವರದಿಯಾಗಿದೆ.
2020ರಲ್ಲಿ ಸೌದಿ ಅರೇಬಿಯಾ ನ್ಯಾಯಾಂಗ ಶಿಕ್ಷೆಯಾಗಿ ಛಡಿಯೇಟು ವಿಧಿಸುವುದನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಕೈಗೊಂಡ ಸುಧಾರಣೆಯ ಬಗ್ಗೆಯೂ ಈ ಪ್ರಕರಣ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನ್ಯಾಯಾಧೀಶರಿಗೆ ಶಿಕ್ಷೆಯ ಪ್ರಮಾಣ ನಿರ್ಧರಿಸುವ ವಿವೇಚನಾಧಿಕಾರವಿರುವ ‘ತಅಝೀರ್’ ಅಪರಾಧಗಳಿಗೆ ಈ ಸುಧಾರಣೆ ಮುಖ್ಯವಾಗಿ ಅನ್ವಯಿಸಿತ್ತು. ಆದರೆ ವ್ಯಭಿಚಾರದಂತಹ ಇಸ್ಲಾಮಿಕ್ ಕಾನೂನಿನಡಿ ನಿಗದಿತ ಶಿಕ್ಷೆ ಹೊಂದಿರುವ ಕೆಲವು ಅಪರಾಧಗಳಿಗೆ ಛಡಿಯೇಟು ಶಿಕ್ಷೆಯ ಅವಕಾಶ ಮುಂದುವರಿದಿತ್ತು ಎಂದು ವರದಿಯಾಗಿದೆ.
ಮಾನವ ಹಕ್ಕುಗಳ ಸಂಘಟನೆ ‘ALQST’ ಈ ತೀರ್ಪನ್ನು ಖಂಡಿಸಿದೆ. ಇದೊಂದು ಹಿಂಸಾತ್ಮಕ ಕ್ರಮ ಎಂದು ಟೀಕಿಸಿರುವ ಸಂಘಟನೆ, ಮುಥೋನಿಗೆ ಶಿಕ್ಷೆ ವಿಧಿಸುವ ಬದಲು ಕೀನ್ಯಾಕ್ಕೆ ಮರಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದೆ.
ತಮ್ಮ ಇತರ ಮಕ್ಕಳ ಬಳಿಗೆ ಮರಳುವ ಉದ್ದೇಶದಿಂದ ಮುಥೋನಿ ಮೇಲ್ಮನವಿ ಸಲ್ಲಿಸದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರ ಕೀನ್ಯಾ ಪ್ರಯಾಣದ ದಾಖಲೆಗಳ ಅವಧಿ ಈಗ ಮುಗಿದಿದೆ. ಶಿಕ್ಷೆಯನ್ನು ಯಾವಾಗ ಜಾರಿಗೊಳಿಸಲಾಗುತ್ತದೆ ಮತ್ತು ಒಂದು ವರ್ಷದ ಗಡಿಪಾರು ಶಿಕ್ಷೆಯು ಅವರನ್ನು ದೇಶದಿಂದ ಗಡೀಪಾರು ಮಾಡುವುದಕ್ಕೆ ಕಾರಣವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸೌದಿ ಅರೇಬಿಯಾದಲ್ಲಿ ವಿವಾಹವಾಗದ ಮಹಿಳೆಯರು ಮಗುವಿಗೆ ಜನ್ಮ ನೀಡಿದರೆ ಆಸ್ಪತ್ರೆಗಳು ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾನೂನು ಕ್ರಮದ ಭೀತಿಯಿಂದ ಅನೇಕ ಮಹಿಳೆಯರು ಆಸ್ಪತ್ರೆಗಳಿಗೆ ತೆರಳುವುದನ್ನು ತಪ್ಪಿಸಿ ಮನೆಗಳಲ್ಲಿಯೇ ಹೆರಿಗೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಹೇಳಿವೆ. ಈ ಪ್ರಕರಣವು ವಿದೇಶಗಳಲ್ಲಿ ಉದ್ಯೋಗಕ್ಕಾಗಿ ತೆರಳಿರುವ ಮಹಿಳೆಯರು ಎದುರಿಸುವ ಕಾನೂನು ಮತ್ತು ಸಾಮಾಜಿಕ ಸವಾಲುಗಳ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.