ಲಕ್ನೋ (www.vknews.in): ರಾಂಪುರ ಸಿಆರ್ಪಿಎಫ್ ದಾಳಿ ಪ್ರಕರಣದಲ್ಲಿ ಸುಮಾರು 18 ವರ್ಷಗಳ ಕಾಲ ಜೈಲಿನಲ್ಲಿದ್ದು, ಬಳಿಕ ಅಲಹಾಬಾದ್ ಹೈಕೋರ್ಟ್ನಿಂದ ಪ್ರಮುಖ ಆರೋಪಗಳಿಂದ ಖುಲಾಸೆಗೊಂಡಿದ್ದ ಮೊಹಮ್ಮದ್ ಶರೀಫ್ ಅವರನ್ನು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಖಜೂರಿಯಾ ಪೊಲೀಸ್ ಠಾಣೆಯ ಸಮೀಪವೇ ಈ ಘಟನೆ ನಡೆದಿದ್ದು, ಪೊಲೀಸರ ಪಾತ್ರದ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾಗಿವೆ.
ಪೊಲೀಸ್ ಠಾಣೆಯಲ್ಲಿ ಪರಿಶೀಲನಾ ಸಭೆ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಶರೀಫ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ದೇಹದಲ್ಲಿ ಹಲವು ಗುಂಡಿನ ಗಾಯಗಳಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪೊಲೀಸರ ಗೈರುಹಾಜರಿ ಹಲವು ಅನುಮಾನಗಳಿಗೆ ಕಾರಣ..
ಮೊಹಮ್ಮದ್ ಶರೀಫ್ ಅವರನ್ನು ಪದೇಪದೇ ಪೊಲೀಸ್ ಠಾಣೆಗೆ ವಿಚಾರಣೆ ಅಥವಾ ಪರಿಶೀಲನೆಗಾಗಿ ಕರೆಸಲಾಗುತ್ತಿತ್ತು ಎನ್ನಲಾಗಿದೆ. ಆದರೆ, ಅವರು ಠಾಣೆಗೆ ಬಂದಿದ್ದ ಸಂದರ್ಭದಲ್ಲಿ ಠಾಣಾಧಿಕಾರಿ (ಎಸ್ಎಚ್ಒ) ಮನೋಜ್ ಕುಮಾರ್ ಪಾಂಡೆ ಹಾಗೂ ಸಂಬಂಧಪಟ್ಟ ಕಾನ್ಸ್ಟೆಬಲ್ ಹಾಜರಿರಲಿಲ್ಲ ಎಂಬ ಅಂಶ ಪ್ರಕರಣಕ್ಕೆ ಮತ್ತಷ್ಟು ನಿಗೂಢತೆಯನ್ನು ತಂದಿದೆ.
ಶರೀಫ್ ಅವರ ವಕೀಲ ಹಾಗೂ ರಹಾಯಿ ಮಂಚ್ ಅಧ್ಯಕ್ಷ ಮೊಹಮ್ಮದ್ ಶೋಯೆಬ್, ಅವರು ಪೊಲೀಸ್ ಠಾಣೆಯಿಂದ ಹೊರಡುವ ಮಾಹಿತಿಯನ್ನು ದಾಳಿಕೋರರಿಗೆ ಯಾರು ನೀಡಿದರು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸ್ ಠಾಣೆಯ ಸಮೀಪ ನಡೆದ ಈ ಹತ್ಯೆಯಲ್ಲಿ ಪೊಲೀಸರ ಪಾತ್ರವಿದೆಯೇ ಎಂಬ ಬಗ್ಗೆಯೂ ಆರೋಪಗಳು ಕೇಳಿಬಂದಿವೆ. ಆದರೆ, ಈ ಆರೋಪಗಳು ಇನ್ನೂ ತನಿಖೆಯಿಂದ ದೃಢಪಟ್ಟಿಲ್ಲ.
ನ್ಯಾಯಾಲಯದಿಂದ ಖುಲಾಸೆಯಾದರೂ ಹತ್ಯೆ
ರಹಾಯಿ ಮಂಚ್ ಪ್ರಧಾನ ಕಾರ್ಯದರ್ಶಿ ರಾಜೀವ್ ಯಾದವ್ ಮಾತನಾಡಿ, ಭಯೋತ್ಪಾದಕ ಪ್ರಕರಣಗಳಲ್ಲಿ ಬಂಧಿತರಾಗಿ ದೀರ್ಘಕಾಲ ಜೈಲಿನಲ್ಲಿದ್ದ ಮುಸ್ಲಿಂ ಯುವಕರು ನ್ಯಾಯಾಲಯದಿಂದ ಖುಲಾಸೆಗೊಂಡು ಬಿಡುಗಡೆಯಾದ ಬಳಿಕವೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕಾನ್ಪುರ ಸ್ಫೋಟ ಪ್ರಕರಣ ಮತ್ತು ರಾಂಪುರ ನ್ಯಾಯಾಲಯ ಸ್ಫೋಟ ಪ್ರಕರಣಗಳಂತಹ ಹಿಂದಿನ ಘಟನೆಗಳನ್ನು ಉಲ್ಲೇಖಿಸಿದ ಅವರು, ನ್ಯಾಯಾಲಯದಿಂದ ಖುಲಾಸೆಗೊಂಡಿದ್ದರೂ ಪೊಲೀಸ್ ಪರಿಶೀಲನೆಯ ಹೆಸರಿನಲ್ಲಿ ಶರೀಫ್ ಅವರನ್ನು ಮತ್ತೆ ಗುರಿಯಾಗಿಸಲಾಗಿದೆ ಎಂಬುದು ರಾಜ್ಯ ವ್ಯವಸ್ಥೆಯ ಪೂರ್ವಾಗ್ರಹವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಏನಿದು ರಾಂಪುರ ಸಿಆರ್ಪಿಎಫ್ ದಾಳಿ ಪ್ರಕರಣ?
2008ರ ಡಿಸೆಂಬರ್ 31ರಿಂದ 2009ರ ಜನವರಿ 1ರ ನಡುವಿನ ಅವಧಿಯಲ್ಲಿ ನಡೆದ ರಾಂಪುರ ಸಿಆರ್ಪಿಎಫ್ ಗ್ರೂಪ್ ಸೆಂಟರ್ ಮೇಲಿನ ದಾಳಿ ಪ್ರಕರಣದಲ್ಲಿ ಮೊಹಮ್ಮದ್ ಶರೀಫ್ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿತ್ತು. ಈ ದಾಳಿಯಲ್ಲಿ ಏಳು ಸಿಆರ್ಪಿಎಫ್ ಸಿಬ್ಬಂದಿ ಹಾಗೂ ಓರ್ವ ರಿಕ್ಷಾ ಚಾಲಕ ಮೃತಪಟ್ಟಿದ್ದರು.
ಸುಮಾರು 18 ವರ್ಷಗಳ ಕಾಲ ಜೈಲಿನಲ್ಲಿದ್ದ ಶರೀಫ್ ಮತ್ತು ಇತರ ಆರೋಪಿಗಳನ್ನು ಅಲಹಾಬಾದ್ ಹೈಕೋರ್ಟ್ 2025ರ ಅಕ್ಟೋಬರ್ನಲ್ಲಿ ಪ್ರಮುಖ ಆರೋಪಗಳಿಂದ ಖುಲಾಸೆಗೊಳಿಸಿತ್ತು. ತನಿಖೆಯಲ್ಲಿನ ಗಂಭೀರ ಲೋಪಗಳು ಹಾಗೂ ಸಾಕ್ಷ್ಯಗಳ ನಿರ್ವಹಣೆಯಲ್ಲಿನ ಅಸ್ಪಷ್ಟತೆಗಳನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಆದರೆ, ಶಸ್ತ್ರಾಸ್ತ್ರ ಕಾಯ್ದೆಯಡಿ ವಿಧಿಸಲಾಗಿದ್ದ ಶಿಕ್ಷೆಯನ್ನು ನ್ಯಾಯಾಲಯ ಎತ್ತಿಹಿಡಿದಿತ್ತು. ಬಳಿಕ ಶರೀಫ್ ಬರೇಲಿ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ನವೆಂಬರ್ನಲ್ಲಿ ತಮ್ಮ ಊರಿಗೆ ಮರಳಿದ್ದರು. ಜೈಲಿನಿಂದ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಪೊಲೀಸ್ ಠಾಣೆಯ ಸಮೀಪವೇ ಅವರು ಹತ್ಯೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕುಟುಂಬಸ್ಥರು ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಹತ್ಯೆಯ ಹಿಂದಿನ ಸಂಚು ಹಾಗೂ ಆರೋಪಿಗಳ ಪಾತ್ರವನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.