ಬಳ್ಳಾರಿ (www.vknews.in): ‘ಲಕ್ಷ್ಮಿ ಪೂಜೆ’ ನಡೆಸಿದರೆ ಹಣದ ಮಳೆ ಸುರಿಯುತ್ತದೆ ಎಂಬ ಆಮಿಷವೊಡ್ಡಿ ಬಡ ಕುಟುಂಬಗಳ ಯುವತಿಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸಿ, ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದ ಅಂತಾರಾಜ್ಯ ಜಾಲವೊಂದನ್ನು ಬಳ್ಳಾರಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಯುವತಿಯರನ್ನು ರಕ್ಷಿಸಲಾಗಿದ್ದು, 11 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ತಿಳಿಸಿದ್ದಾರೆ.
ಈ ಜಾಲವು ಯುವತಿಯರನ್ನು ಆಯ್ಕೆ ಮಾಡುವಾಗ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸುತ್ತಿತ್ತು ಎನ್ನಲಾಗಿದೆ. ಸುಮಾರು 5 ಅಡಿ 6 ಇಂಚು ಎತ್ತರವಿರುವ, ಅವಿವಾಹಿತ ಹಾಗೂ ದೇಹದ ಮೇಲೆ ಯಾವುದೇ ಗುರುತು ಅಥವಾ ಕಲೆಗಳಿಲ್ಲದ ಯುವತಿಯರ ಫೋಟೋಗಳನ್ನು ಆರೋಪಿಗಳು ಕೇಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾನ್ಯ ಫೋಟೋಗಳ ಜತೆಗೆ ಬಲಗೈ ಮತ್ತು ಬಲಗಾಲಿನ ಪ್ರತ್ಯೇಕ ಫೋಟೋಗಳನ್ನು ಕೂಡ ಕಳುಹಿಸುವಂತೆ ಒತ್ತಾಯಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇಂತಹ ವಿಶೇಷ ಲಕ್ಷಣಗಳನ್ನು ಹೊಂದಿರುವ ಯುವತಿಯರು ಲಕ್ಷ್ಮಿ ಪೂಜೆ ನಡೆಸಿದರೆ ಅಪಾರ ಹಣ ಲಭಿಸುತ್ತದೆ ಎಂದು ಸುಳ್ಳು ನಂಬಿಕೆ ಮೂಡಿಸಿ ಅವರನ್ನು ಜಾಲಕ್ಕೆ ಸೆಳೆಯಲಾಗುತ್ತಿತ್ತು ಎಂದು ಎಸ್ಪಿ ಸುಮನ್ ಡಿ. ಪನ್ನೇಕರ್ ಮಾಹಿತಿ ನೀಡಿದ್ದಾರೆ. ಪೂಜೆಯಿಂದ ಬರುವ ಹಣದಲ್ಲಿ ಯುವತಿಗೆ ಒಂದು ಪಾಲು, ಪೂಜೆ ನಡೆಸುವ ಸ್ವಾಮೀಜಿಗೆ ಒಂದು ಪಾಲು ಹಾಗೂ ಯುವತಿಯನ್ನು ಕರೆತಂದ ಏಜೆಂಟ್ಗೆ ಮತ್ತೊಂದು ಪಾಲು ಸಿಗುತ್ತದೆ ಎಂದು ನಂಬಿಸಲಾಗುತ್ತಿತ್ತು ಎನ್ನಲಾಗಿದೆ.
ಆರಂಭದಲ್ಲಿ ಯುವತಿಯರ ಫೋಟೋ ಮತ್ತು ವೈಯಕ್ತಿಕ ವಿವರಗಳನ್ನು ಸಂಗ್ರಹಿಸುತ್ತಿದ್ದ ಆರೋಪಿಗಳು, ಬಳಿಕ ಪೂಜೆಗೆ ಆಯ್ಕೆಯಾಗಿದ್ದೀರಿ ಎಂದು ಹೇಳಿ ಅವರನ್ನು ಕರೆಸಿಕೊಳ್ಳುತ್ತಿದ್ದರು. ನಂತರ ಲೈಂಗಿಕ ಶೋಷಣೆಗೆ ಒಳಪಡಿಸಿ, ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಇದೊಂದು ವ್ಯವಸ್ಥಿತ ವೇಶ್ಯಾವಾಟಿಕೆ ಜಾಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ದಂಧೆಯನ್ನು ಬಯಲಿಗೆಳೆಯಲು ಬಳ್ಳಾರಿ ಪೊಲೀಸರ ‘ಅಕ್ಕ ಪಡೆ’ಯ ಮಹಿಳಾ ಸಿಬ್ಬಂದಿ ಬಡ ಮಹಿಳೆಯರ ವೇಷದಲ್ಲಿ ಜಾಲದೊಳಗೆ ಪ್ರವೇಶಿಸಿ ಸುಮಾರು ಎರಡು ತಿಂಗಳ ಕಾಲ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ. ಈ ಕಾರ್ಯಾಚರಣೆಯ ಬಳಿಕ ನಾಲ್ವರು ಯುವತಿಯರನ್ನು ರಕ್ಷಿಸಲಾಗಿದ್ದು, ಜಾಲದೊಂದಿಗೆ ಸಂಪರ್ಕ ಹೊಂದಿದ್ದರೆನ್ನಲಾದ 11 ಆರೋಪಿಗಳನ್ನು ಬಂಧಿಸಲಾಗಿದೆ.
ಈ ದಂಧೆ ಬಳ್ಳಾರಿಗೆ ಮಾತ್ರ ಸೀಮಿತವಾಗಿರದೆ, ಚಿಕ್ಕಮಗಳೂರು, ಮೈಸೂರು ಹಾಗೂ ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲೂ ಸಕ್ರಿಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಡತನ ಮತ್ತು ಹಣದ ಆಸೆಯನ್ನು ದುರುಪಯೋಗಪಡಿಸಿಕೊಂಡು ಯುವತಿಯರನ್ನು ಶೋಷಣೆಗೆ ಒಳಪಡಿಸುತ್ತಿದ್ದ ಜಾಲದ ವಿರುದ್ಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.