ನವದೆಹಲಿ (www.vknews.in): ಯುಪಿಐ ಮೂಲಕ ಹಣ ಪಾವತಿಸುವ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಸದ್ಯಕ್ಕೆ ಯಾವುದೇ ಹೆಚ್ಚುವರಿ ಶುಲ್ಕದ ಹೊರೆ ಇರುವುದಿಲ್ಲ. ಯುಪಿಐ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ವಿಧಿಸುವ ಯಾವುದೇ ಯೋಜನೆ ಸದ್ಯಕ್ಕೆ ಇಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸ್ಪಷ್ಟಪಡಿಸಿದೆ.
ದೀಪಾವಳಿ ಹಬ್ಬದ ಬಳಿಕ ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸುವ ಸಾಧ್ಯತೆ ಕುರಿತು ಚರ್ಚೆಗಳು ನಡೆದಿದ್ದವು. ಆರಂಭದಲ್ಲಿ ಹೊಸ ಶುಲ್ಕದ ನಿಯಮವನ್ನು ದೀಪಾವಳಿಗೂ ಮುನ್ನ ಜಾರಿಗೆ ತರಲು ಎನ್ಪಿಸಿಐ ಯೋಜಿಸಿತ್ತು ಎನ್ನಲಾಗಿದೆ. ಆದರೆ, ಹಬ್ಬದ ಸಂದರ್ಭದಲ್ಲಿ ವ್ಯಾಪಾರ ಮತ್ತು ವಹಿವಾಟುಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು ಎಂದು ವರದಿ ತಿಳಿಸಿದೆ.
ದೀಪಾವಳಿ ಹಬ್ಬ ಮುಗಿದ ಬಳಿಕ MDR ಶುಲ್ಕ ಯಾವಾಗ ಜಾರಿಗೆ ಬರಬಹುದು ಎಂಬ ಕುತೂಹಲ ಉಂಟಾಗಿತ್ತು. ಆದರೆ, ಈವರೆಗೆ ಶುಲ್ಕ ಜಾರಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದಿನಾಂಕವನ್ನು ಎನ್ಪಿಸಿಐ ಪ್ರಕಟಿಸಿಲ್ಲ. ಅಲ್ಲದೆ, ಸದ್ಯಕ್ಕೆ ಯುಪಿಐ ವಹಿವಾಟುಗಳ ಮೇಲೆ MDR ಶುಲ್ಕ ವಿಧಿಸುವ ಯಾವುದೇ ಯೋಜನೆ ಇಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿರುವುದರಿಂದ ಡಿಜಿಟಲ್ ಪಾವತಿ ಬಳಕೆದಾರರು ಹಾಗೂ ವ್ಯಾಪಾರಿಗಳಿಗೆ ತಾತ್ಕಾಲಿಕ ನಿರಾಳತೆ ಸಿಕ್ಕಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.