ಲಖಿಂಪುರ (www.vknews.in): 1983ರ ಅಸ್ಸಾಂ ಗಲಭೆಯ ಬಳಿಕ ಸರ್ಕಾರಿ ಭೂಮಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದ 132 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ಅಸ್ಸಾಂನ ಲಖಿಂಪುರ ಜಿಲ್ಲೆಯ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಶುಕ್ರವಾರ ಬೋಗಿ ನದಿ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆದಿದ್ದು, ಮುಸ್ಲಿಂ ಕುಟುಂಬಗಳ ಮನೆಗಳನ್ನು ಮಾತ್ರ ಗುರಿಯಾಗಿಸಲಾಗಿದೆ ಎಂದು ಸ್ಥಳೀಯರು ಹಾಗೂ ರಾಜಕೀಯ ನಾಯಕರು ಆರೋಪಿಸಿದ್ದಾರೆ.
ಲಖಿಂಪುರ ಜಿಲ್ಲೆಯ ಕದಮ್ ಕಂದಾಯ ವೃತ್ತದ ವ್ಯಾಪ್ತಿಯಲ್ಲಿರುವ 622.4 ಎಕರೆ ಮೇವು ಜಮೀನಿನ ಭಾಗವಾದ ಸುಮಾರು 9.9 ಎಕರೆ ಪ್ರದೇಶದಲ್ಲಿದ್ದ ಮನೆಗಳನ್ನು ತೆರವುಗೊಳಿಸಲಾಗಿದೆ ಎಂದು ರೈಜೋರ್ ದಳದ ನಾಯಕ ಅಜೀಜುರ್ ರೆಹಮಾನ್ ತಿಳಿಸಿದ್ದಾರೆ.
1983ರ ಗಲಭೆಯ ಸಂದರ್ಭದಲ್ಲಿ ಸ್ಥಳಾಂತರಗೊಂಡ ಬಂಗಾಳಿ ಮುಸ್ಲಿಂ ಕುಟುಂಬಗಳನ್ನು ಅಸ್ಸಾಂ ಸರ್ಕಾರವೇ ಈ ಪ್ರದೇಶದಲ್ಲಿ ನೆಲೆಸುವಂತೆ ಮಾಡಿತ್ತು. ಬಳಿಕ ಅಲ್ಲಿ ರಸ್ತೆಗಳು, ಶಾಲೆಗಳನ್ನು ನಿರ್ಮಿಸಲಾಗಿದ್ದು, ಮನೆಗಳಿಗೆ ವಿದ್ಯುತ್ ಸಂಪರ್ಕವನ್ನೂ ಒದಗಿಸಲಾಗಿತ್ತು. ಹೀಗಾಗಿ ಕುಟುಂಬಗಳು ತಾವು ನೆಲೆಸಿರುವ ಭೂಮಿಯ ಮೇಲೆ ಹಕ್ಕಿದೆ ಎಂಬ ನಂಬಿಕೆಯಿಂದ ವಾಸಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಅದೇ ಮೇವು ಜಮೀನಿನ ಭಾಗವಾಗಿರುವ ಸುಮಾರು 595 ಎಕರೆ ಪ್ರದೇಶದಲ್ಲಿ ವಾಸಿಸುತ್ತಿರುವ ಹಿಂದೂ ಕುಟುಂಬಗಳ ಮನೆಗಳನ್ನು ತೆರವುಗೊಳಿಸದೆ, ಮುಸ್ಲಿಂ ಕುಟುಂಬಗಳ ಮನೆಗಳನ್ನು ಮಾತ್ರ ಕೆಡವಲಾಗಿದೆ ಎಂದು ಅಜೀಜುರ್ ರೆಹಮಾನ್ ಆರೋಪಿಸಿದ್ದಾರೆ. ಇದು ಪಕ್ಷಪಾತದ ಕ್ರಮವಾಗಿದ್ದು, ಸಂವಿಧಾನದ 14ನೇ ವಿಧಿಯಡಿ ಖಾತರಿಪಡಿಸಿರುವ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.
50 ವರ್ಷದ ಮೊಹಮ್ಮದ್ ತುಶನ್ ಅಲಿ ಅವರ ಪ್ರಕಾರ, ಶುಕ್ರವಾರ ಅವರ ಕುಟುಂಬದ ಎರಡು ಮನೆಗಳನ್ನು ನೆಲಸಮಗೊಳಿಸಲಾಗಿದೆ. ಆದರೆ ಸಮೀಪದಲ್ಲಿರುವ ಹಿಂದೂ ನೆರೆಹೊರೆಯವರ ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ. 1985ರಿಂದ ಕುಟುಂಬದೊಂದಿಗೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಅವರು, ಇದೀಗ ನದಿಯ ದಡದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಈ ಕುರಿತು ಪ್ರತಿಕ್ರಿಯೆ ಕೋರಿ ಲಖಿಂಪುರ ಜಿಲ್ಲಾಧಿಕಾರಿಗೆ ‘ಸ್ಕ್ರಾಲ್’ ಸುದ್ದಿ ಸಂಸ್ಥೆ ಪತ್ರ ಕಳುಹಿಸಿದ್ದು, ವರದಿ ಪ್ರಕಟವಾಗುವವರೆಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
1979ರಲ್ಲಿ ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಆರಂಭವಾದ ಅಸ್ಸಾಂ ಆಂದೋಲನದ ಸಂದರ್ಭದಲ್ಲಿ 1983ರಲ್ಲಿ ರಾಜ್ಯದಲ್ಲಿ ವ್ಯಾಪಕ ಗಲಭೆಗಳು ನಡೆದಿದ್ದವು. ದಾಖಲೆರಹಿತ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡಬೇಕೆಂಬುದು ಆಂದೋಲನದ ಪ್ರಮುಖ ಬೇಡಿಕೆಯಾಗಿತ್ತು.
ಈ ಆಂದೋಲನದ ಸಂದರ್ಭದಲ್ಲಿ ಬಂಗಾಳಿ ಮಾತನಾಡುವ ಹಿಂದೂಗಳು ಮತ್ತು ಮುಸ್ಲಿಮರನ್ನು ಬಾಂಗ್ಲಾದೇಶೀಯರೆಂದು ಆರೋಪಿಸಿ ಗುರಿಯಾಗಿಸಲಾಗಿತ್ತು ಎಂದು ವರದಿ ವಿವರಿಸಿದೆ. ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘ ಹಾಗೂ ಅಖಿಲ ಅಸ್ಸಾಂ ಗಣ ಸಂಗ್ರಾಮ ಪರಿಷತ್ತಿನ ವಿರೋಧದ ನಡುವೆಯೂ ಕೇಂದ್ರ ಸರ್ಕಾರ 1983ರ ಫೆಬ್ರವರಿಯಲ್ಲಿ ವಿಧಾನಸಭಾ ಚುನಾವಣೆ ಘೋಷಿಸಿದ್ದರಿಂದ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿತ್ತು. ಬಳಿಕ ನಡೆದ ಗಲಭೆಗಳಿಂದ ಬ್ರಹ್ಮಪುತ್ರ ಕಣಿವೆಯಾದ್ಯಂತ ಸಾವಿರಾರು ಜನರು ನಿರಾಶ್ರಿತರಾಗಿದ್ದರು.
ಕಳೆದ ಒಂದು ತಿಂಗಳ ಅವಧಿಯಲ್ಲಿ ಅಸ್ಸಾಂ ಸರ್ಕಾರ 1,900ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳನ್ನು ಅವರ ವಾಸಸ್ಥಳಗಳಿಂದ ತೆರವುಗೊಳಿಸಿದೆ ಎಂದು ವರದಿ ತಿಳಿಸಿದೆ.
ರಾಜ್ಯದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಹಾಗೂ ಜಿಲ್ಲಾ ಅಧಿಕಾರಿಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಅಸ್ಸಾಂನಲ್ಲಿ ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಸುಮಾರು 19,000 ಕುಟುಂಬಗಳನ್ನು ತೆರವುಗೊಳಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಮುಸ್ಲಿಂ ಕುಟುಂಬಗಳಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.