ವಾಷಿಂಗ್ಟನ್ (www.vknews.in): ತರಗತಿಯಲ್ಲಿ ‘ಭಯೋತ್ಪಾದಕ’ ಎಂದು ನಿಂದಿಸಲಾಗಿದೆ ಹಾಗೂ ಧಾರ್ಮಿಕ ಮತ್ತು ಜನಾಂಗೀಯ ಗುರುತಿನ ಆಧಾರದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ 16 ವರ್ಷದ ಪ್ಯಾಲೆಸ್ತೀನಿಯನ್ ಮೂಲದ ಮುಸ್ಲಿಂ ವಿದ್ಯಾರ್ಥಿಯೊಬ್ಬ ಅಮೆರಿಕದಲ್ಲಿ ಶಿಕ್ಷಕಿ ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧ ಮೊಕದ್ದಮೆ ಹೂಡಿದ್ದಾನೆ. ತನ್ನ ಪ್ಯಾಲೆಸ್ತೀನಿಯನ್ ಮತ್ತು ಮುಸ್ಲಿಂ ಗುರುತನ್ನು ಇತರರಿಂದ ಮರೆಮಾಚುವ ಪರಿಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಕ್ಯಾಲಿಫೋರ್ನಿಯಾದ ಅನಾಹೈಮ್ ಯೂನಿಯನ್ ಹೈಸ್ಕೂಲ್ ಡಿಸ್ಟ್ರಿಕ್ಟ್ ವಿರುದ್ಧ ಯೂಸೆಫ್ ಅಬ್ದುಲ್ಲಾ ಎಂಬ ವಿದ್ಯಾರ್ಥಿ ಈ ಮೊಕದ್ದಮೆ ದಾಖಲಿಸಿದ್ದಾನೆ. ಶಿಕ್ಷಕಿಯ ಹೇಳಿಕೆಗಳು ಅವಮಾನಕರ ಹಾಗೂ ತಾರತಮ್ಯದಿಂದ ಕೂಡಿದ್ದವು ಎಂದು ಆತನ ಪರ ವಕೀಲರು ಆರೋಪಿಸಿದ್ದಾರೆ.
ಈ ಘಟನೆ 2025ರ ಫೆಬ್ರವರಿಯಲ್ಲಿ ನಡೆದಿತ್ತು ಎನ್ನಲಾಗಿದೆ. ಆಗ 14 ವರ್ಷದವನಾಗಿದ್ದ ಯೂಸೆಫ್, ಸೈಪ್ರೆಸ್ ಪ್ರೌಢಶಾಲೆಯಲ್ಲಿ ಅಡ್ವಾನ್ಸ್ಡ್ ಪ್ಲೇಸ್ಮೆಂಟ್ ಇಂಗ್ಲಿಷ್ ಕಾರ್ಯಕ್ರಮಕ್ಕೆ ಪ್ರವೇಶ ನಿರಾಕರಿಸಿದ್ದನ್ನು ಪ್ರಶ್ನಿಸಲು ತನ್ನ ಇಂಗ್ಲಿಷ್ ಶಿಕ್ಷಕರನ್ನು ಸಂಪರ್ಕಿಸಿದ್ದನು.
ಈ ಸಂದರ್ಭದಲ್ಲಿ ಇತರ ವಿದ್ಯಾರ್ಥಿಗಳ ಎದುರೇ ಶಿಕ್ಷಕರು, “ನಾನು ಭಯೋತ್ಪಾದಕರೊಂದಿಗೆ ಮಾತುಕತೆ ನಡೆಸುವುದಿಲ್ಲ, ಅವರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೂ” ಎಂದು ಹೇಳಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಶಾಲೆಯ ಕೌನ್ಸೆಲರ್ ಕೂಡ ಶಿಕ್ಷಕರ ಈ ಹೇಳಿಕೆಯನ್ನು ಹಲವು ಬಾರಿ ಪುನರಾವರ್ತಿಸಿದ್ದರು ಎಂದು ವಿದ್ಯಾರ್ಥಿಯ ವಕೀಲರು ತಿಳಿಸಿದ್ದಾರೆ. ಘಟನೆಯ ಕುರಿತು ದೂರು ನೀಡಿದಾಗ ಸಹಾಯಕ ಪ್ರಾಂಶುಪಾಲರು ಅದನ್ನು ತಮಾಷೆ ಎಂದು ಹೇಳಿ, ಚಲನಚಿತ್ರದ ಸಂಭಾಷಣೆಗೆ ಹೋಲಿಸಿ ಗಂಭೀರತೆಯನ್ನು ಕಡಿಮೆ ಮಾಡಿದ್ದರು ಎಂಬ ಆರೋಪವೂ ಇದೆ.
ವಿದ್ಯಾರ್ಥಿಯ ಪೋಷಕರು ಶಾಲಾ ಆಡಳಿತಕ್ಕೆ ದೂರು ನೀಡಿದ ಬಳಿಕ ತನಿಖೆ ಆರಂಭಿಸಲಾಗಿತ್ತು. ವಿದ್ಯಾರ್ಥಿಗಳ ವಿರುದ್ಧ ಅವಹೇಳನಕಾರಿ ಭಾಷೆ ಬಳಸದಂತೆ ಇರುವ ಶಾಲಾ ಮಂಡಳಿಯ ನೀತಿಯನ್ನು ಉಲ್ಲಂಘಿಸಿ ಹೇಳಿಕೆ ನೀಡಲಾಗಿದೆ ಎಂದು ತನಿಖೆಯಲ್ಲಿ ಕಂಡುಬಂದಿತ್ತು ಎಂದು ವರದಿ ತಿಳಿಸಿದೆ.
2025ರ ಮಾರ್ಚ್ನಲ್ಲಿ ಶಾಲೆಯ ಮಾನವ ಸಂಪನ್ಮೂಲ ನಿರ್ದೇಶಕಿ ಅಮಿ ಮಾಯಾ ಕಳುಹಿಸಿದ್ದ ಪತ್ರದಲ್ಲೂ ಈ ಅಂಶ ಉಲ್ಲೇಖವಾಗಿತ್ತು ಎನ್ನಲಾಗಿದೆ. ಆದರೆ, ಘಟನೆಯಲ್ಲಿ ಭಾಗಿಯಾಗಿದ್ದ ಶಿಕ್ಷಕರ ವಿರುದ್ಧ ಯಾವುದೇ ಗಮನಾರ್ಹ ಶಿಸ್ತು ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಿದ್ಯಾರ್ಥಿಯ ವಕೀಲ ಸಮರ್ ಹಬ್ಬಾಸ್ ಆರೋಪಿಸಿದ್ದಾರೆ. ವಿದ್ಯಾರ್ಥಿ ಪ್ಯಾಲೆಸ್ತೀನಿಯನ್ ಮೂಲದ ಮುಸ್ಲಿಂ ಆಗಿರುವ ಕಾರಣ ಆತನ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ ಎಂಬುದು ವಕೀಲರ ಮತ್ತೊಂದು ಆರೋಪವಾಗಿದೆ.
2026ರ ಜನವರಿಯಲ್ಲಿ ಯೂಸೆಫ್ ಶಾಲಾ ಜಿಲ್ಲೆಯ ವಿರುದ್ಧ ಮೊಕದ್ದಮೆ ದಾಖಲಿಸಿದ್ದನು. ಪ್ರಕರಣವನ್ನು ವಜಾಗೊಳಿಸುವಂತೆ ಶಾಲಾ ಆಡಳಿತ ಸಲ್ಲಿಸಿದ್ದ ಮನವಿಯನ್ನು ಆರೆಂಜ್ ಕೌಂಟಿ ಸುಪೀರಿಯರ್ ಕೋರ್ಟ್ನ ನ್ಯಾಯಾಧೀಶೆ ಕಿಂಪರ್ಲಿ ಎ. ನೀಲ್ ಇತ್ತೀಚೆಗೆ ತಿರಸ್ಕರಿಸಿದ್ದಾರೆ. ಆದರೆ, ಶಾಲಾ ಜಿಲ್ಲೆಯು ಈವರೆಗೆ ಮೊಕದ್ದಮೆಗೆ ಪ್ರತಿಕ್ರಿಯಿಸಿಲ್ಲ ಎಂದು ವರದಿಗಳು ತಿಳಿಸಿವೆ. ಶಿಕ್ಷಕರ ಅವಹೇಳನಕಾರಿ ಹೇಳಿಕೆಗಳ ಜೊತೆಗೆ, ವಿದ್ಯಾರ್ಥಿಯ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಹಪಾಠಿಗಳಿಗೆ ಬಹಿರಂಗಪಡಿಸಲಾಗಿದೆ ಎಂಬ ಆರೋಪವೂ ದೂರಿನಲ್ಲಿದೆ.
ಈ ಘಟನೆಗಳಿಂದ ಯೂಸೆಫ್ ಮಾನಸಿಕ ಒತ್ತಡ, ಅವಮಾನ ಮತ್ತು ಸಾಮಾಜಿಕ ಪ್ರತ್ಯೇಕತೆಯನ್ನು ಎದುರಿಸಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ತನ್ನ ಪ್ಯಾಲೆಸ್ತೀನಿಯನ್ ಮತ್ತು ಮುಸ್ಲಿಂ ಗುರುತನ್ನು ಇತರರಿಂದ ಮರೆಮಾಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.
ಪ್ರಸ್ತುತ ಬೇರೆ ಪ್ರೌಢಶಾಲೆಗೆ ವರ್ಗಾವಣೆಯಾಗಿರುವ ಯೂಸೆಫ್, ತನ್ನ ಧಾರ್ಮಿಕ ಮತ್ತು ಜನಾಂಗೀಯ ಗುರುತನ್ನು ಇತರರು ಗುರುತಿಸದಂತೆ ‘ಜೋಸೆಫ್’ ಎಂಬ ಹೆಸರನ್ನು ಬಳಸುವ ಬಗ್ಗೆಯೂ ಯೋಚಿಸಿದ್ದಾನೆ ಎಂದು ಆತನ ವಕೀಲರು ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.