ಫುಜೈರಾ (www.vknews.in): ಯುಎಇಯ ಫುಜೈರಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕುಟುಂಬದ ಮೂವರು ಸದಸ್ಯರನ್ನು ಕಳೆದುಕೊಂಡ ಮಲಯಾಳಿ ವಲಸಿಗ ಸಿದ್ದಿಕ್ ತುಪ್ಪಿಕ್ಕತ್ ಮೊಯ್ದೀನ್ ಅವರ ಕುಟುಂಬವನ್ನು ಫುಜೈರಾದ ಯುವರಾಜ ಶೇಖ್ ಮೊಹಮ್ಮದ್ ಬಿನ್ ಹಮದ್ ಅಲ್ ಶರ್ಕಿ ಭೇಟಿ ಮಾಡಿ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಸಿದ್ದಿಕ್ ಅವರ ಅವಳಿ ಮಕ್ಕಳು ಹಾಗೂ ಮೊಮ್ಮಗ ಮೃತಪಟ್ಟಿದ್ದು, ಕುಟುಂಬದ ದುಃಖದಲ್ಲಿ ಭಾಗಿಯಾದ ಯುವರಾಜರು ತೀವ್ರ ಸಂತಾಪ ವ್ಯಕ್ತಪಡಿಸಿದರು.
14 ಮಂದಿಯನ್ನು ಬಲಿಪಡೆದ ಭೀಕರ ಅಪಘಾತ
ಫುಜೈರಾದ ಶೇಖ್ ಖಲೀಫಾ ಬಿನ್ ಜಾಯೆದ್ ರಸ್ತೆಯಲ್ಲಿ ಗುರುವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದರು. ಇತ್ತೀಚಿನ ದಿನಗಳಲ್ಲಿ ಯುಎಇಯಲ್ಲಿ ಸಂಭವಿಸಿದ ದೊಡ್ಡ ರಸ್ತೆ ಅಪಘಾತಗಳಲ್ಲಿ ಇದೂ ಒಂದಾಗಿದೆ. ಮೃತರ ಗುರುತು ಪತ್ತೆ ಪ್ರಕ್ರಿಯೆ ಪೂರ್ಣಗೊಂಡಿರುವುದಾಗಿ ಯುಎಇ ಆಂತರಿಕ ಸಚಿವಾಲಯ ಶನಿವಾರ ದೃಢಪಡಿಸಿದೆ. ಮೃತಪಟ್ಟವರಲ್ಲಿ 10 ಮಂದಿ ಯುಎಇ ಪ್ರಜೆಗಳಾಗಿದ್ದು, ನಾಲ್ವರು ಭಾರತೀಯರಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆ ವೇಳೆ ಮತ್ತೊಂದು ಅಪಘಾತ
ಮೊದಲ ಅಪಘಾತದ ಬಳಿಕ ರಕ್ಷಣಾ ಕಾರ್ಯಾಚರಣೆಗಾಗಿ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಹಿಂದಿನಿಂದ ಬಂದ ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಎರಡನೇ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಮೃತ ಭಾರತೀಯರನ್ನು ಮಲಪ್ಪುರಂ ಮೂಲದ ಮೊಹಮ್ಮದ್ ಅಸ್ಮಿಲ್, ಮಿಸ್ನಾ ಜುಬಿನ್ ಮತ್ತು ಮೊಹಮ್ಮದ್ ಫೈಜ್ ಎಂದು ಗುರುತಿಸಲಾಗಿದೆ.
ಇದೇ ವೇಳೆ, ಪ್ರಯಾಣ ಮುಗಿಸಿ ಹಿಂದಿರುಗುತ್ತಿದ್ದ ಗುಜರಾತಿ ಕುಟುಂಬವೊಂದೂ ಅಪಘಾತಕ್ಕೆ ಸಿಲುಕಿತ್ತು. ಈ ಘಟನೆಯಲ್ಲಿ ಗುಜರಾತ್ ಮೂಲದ 13 ವರ್ಷದ ಬಾಲಕನೂ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಅಪಘಾತದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ದುಃಖದಲ್ಲಿ ಭಾಗಿಯಾದ ಫುಜೈರಾದ ಯುವರಾಜರ ಭೇಟಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ನೀಡುವ ಪ್ರಯತ್ನವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.