ಧಾರವಾಡ (www.vknews.com) : ಶಿವನ ಮಾನಸಪುತ್ರನೆಂದು ಕರೆಯಲ್ಪಡುವ, ಶಿವನ ಅಂಶವೇ ಆದ ಆರಾಧ್ಯದೈವ, ರಂಭಾಪುರಿ ಜಗದ್ಗುರು ಪೀಠದ ಗೋತ್ರಪುರುಷನಾಗಿರುವ ಶ್ರೀವೀರಭದ್ರಸ್ವಾಮಿಯ ಜಯಂತಿ ಮಹೋತ್ಸವವನ್ನು ಭಾದ್ರಪದ ತಿಂಗಳ ಮೊದಲ ಮಂಗಳವಾರದ ದಿನ (ಆಗಷ್ಟ-೨೫ ರಂದು) ದೇಶದೆಲ್ಲೆಡೆ ಆಚರಿಸಲು ಅಖಿಲ ಭಾರತ ವೀರಶೈವ-ಲಿಂಗಾಯತ ಸಂಘಟನೆ ಕರೆ ನೀಡಿದೆ.
ಭೂಮಿಯ ಮೇಲೆ ಶ್ರೀವೀರಭದ್ರಸ್ವಾಮಿಯ ಮೊದಲ ಅವತಾರವೆಂದೇ ಖ್ಯಾತಿ ಪಡೆದಿರುವ ಆಂದ್ರಪ್ರದೇಶ ರಾಜ್ಯದ ಕಡಪಾ ಜಿಲ್ಲೆಯ ರಾಯಚೋಟಿಯ ಶ್ರೀವೀರಭದ್ರಸ್ವಾಮಿ ಸನ್ನಿಧಿಯ ಕ್ಷೇತ್ರದಲ್ಲಿ ಆಗಷ್ಟ-೨೫ ರಂದು ಶ್ರೀವೀರಭದ್ರಸ್ವಾಮಿಯ ಜಯಂತಿ ಮಹೋತ್ಸವವನ್ನು ಅತ್ಯಂತ ಶೃದ್ಧಾ ಭಕ್ತಿಗಳಿಂದ ವಿದ್ಯುಕ್ತವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಪ್ರತಿವರ್ಷ ಭಾದ್ರಪದ ಮಾಸದ ಮೊದಲ ಮಂಗಳವಾರದ ದಿನ ರಾಷ್ಟ್ರದಾದ್ಯಂತ ಆಚರಿಸಲು ನಿರ್ಧಾರಕೈಕೊಂಡಿರುವುದು ಅತ್ಯಂತ ಸಂತಸದ ವಿಷಯ. ಶ್ರೀವೀರಭದ್ರ ಸ್ವಾಮಿ ಅಖಿಲ ಭಾರತ ಅಷ್ಟೇ ಅಲ್ಲ ಭಾರತದ ಆಚೆಗೂ ಪೂಜೆಗೊಳ್ಳುತ್ತಿರುವ ದೇವರಾಗಿದ್ದು, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ವೀರಭದ್ರನ ದೇವಸ್ಥಾನಗಳಿವೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ವೀರಭದ್ರನ ಭಕ್ತರಿದ್ದಾರೆ. ಅಸಂಖ್ಯಾತ ಭಕ್ತರ ಮನೆದೇವರಾಗಿ, ವೀರಭದ್ರ ಶೋಭಿಸಿದ್ದಾನೆ. ಶಿವ ದೇವಾಲಯಗಳು ಇದ್ದಲ್ಲೆಲ್ಲ ಶ್ರೀವೀರಭದ್ರಸ್ವಾಮಿಯೂ ಸಹ ನೆಲೆಸಿರುವುದು ವಾಡಿಕೆ.
ಮುಖ್ಯವಾಗಿ ಶ್ರೀವೀರಭದ್ರನು ಶಿವಧರ್ಮ ರಕ್ಷಕನಾದ ಪ್ರಾಗೈತಿಹಾಸಿಕ ದ್ರಾವಿಡ ವೀರದೇವತೆ. ಹಿಮಾಲಯದ ಹರಿದ್ವಾರ ಬಳಿಯ ಗಂಗೋತ್ರಿ ಪರ್ವತ ಶ್ರೇಣಿಯಲ್ಲಿ ಶಿವ ಮತ್ತು ವೀರಭದ್ರರ ಐತಿಹಾಸಿಕ ಸ್ಥಾನಗಳನ್ನು ಈಗಲೂ ಕಾಣಬಹುದಾಗಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಶ್ರೀವೀರಭದ್ರನ ಆರಾಧನೆ, ಆಚರಣೆಗಳು ವೈವಿಧ್ಯ ಮತ್ತು ವೈಶಿಷ್ಟ್ಯಪೂರ್ಣವಾಗಿವೆ. ಶಿವಧರ್ಮ ರಕ್ಷಕನೆಂದು ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಉರಿಲಿಂಗಪೆದ್ದಿ, ಅಕ್ಕಮಹಾದೇವಿ, ಸತ್ಯಕ್ಕ ಮುಂತಾದ ೧೨ನೇ ಶತಮಾನದ ಹಲವಾರು ಶಿವಶರಣರು ಶ್ರೀವೀರಭದ್ರನನ್ನು ಸ್ಮರಿಸಿದ್ದಾರೆ. ವೀರಭದ್ರನನ್ನು ಕುರಿತ ವಿಪುಲ ಸಾಹಿತ್ಯ ಬಹುಭಾಷೆಗಳಲ್ಲಿ ಸೃಷ್ಟಿಯಾಗಿದೆ. ವಿಶೇಷವಾಗಿ ಶ್ರೀವೀರಭದ್ರನ ವೀರಗುಣವನ್ನು ಪ್ರತಿಬಿಂಬಿಸುವ ಆರಾಧನೆಯ ಕಟ್ಟುನಿಟ್ಟಿನ ಆಚರಣೆಗಳು ಬಹು ಪ್ರಾಚೀನ ಕಾಲದಿಂದಲೇ ಹಳ್ಳಿಯಿಂದ ನಗರ ಪಟ್ಟಣಗಳಲ್ಲಿ ಜರುಗುತ್ತ, ವೀರಭದ್ರನಲ್ಲಿ ಜನರ ಗಾಢಭಕ್ತಿ ಅಚಲ ವಿಶ್ವಾಸ ಆನೂಚಾನವಾಗಿ ಇಂದಿಗೂ ನಡೆದುಕೊಂಡು ಬಂದಿದೆ.
ದೀಪೋತ್ಸವ : ಶ್ರೀವೀರಭದ್ರೇಶ್ವರನನ್ನು ಮನೆದೇವರು ಉಳ್ಳ ಎಲ್ಲಾ ವೀರಶೈವ -ಲಿಂಗಾಯತ ಬಾಂಧವರು ಮತ್ತು ವೀರಭದ್ರನ ಬಗ್ಗೆ ಭಕ್ತಿ-ಶ್ರದ್ಧೆಯುಳ್ಳ ಎಲ್ಲರೂ ಆಗಷ್ಟ-೨೫ ರಂದು (ಮಂಗಳವಾರ) ತಮ್ಮ ಮನೆಗಳಲ್ಲಿ ಶ್ರೀವೀರಭದ್ರಸ್ವಾಮಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಬೇಕು. ದೇವರ ಮನೆಯಲ್ಲಿ ಹಾಗೂ ಮನೆಯ ಬಾಗಿಲ ಬಳಿ ಜ್ಯೋತಿಗಳನ್ನು ಮುಡಿಸಿ ದೀಪೋತ್ಸವ ಆಚರಿಸಬೇಕು. ಶ್ರೀವೀರಭದ್ರಸ್ವಾಮಿಯ ನೂರೆಂಟು ನಾಮಾವಳಿಯ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಬೇಕೆಂದು ಶ್ರೀವೀರಭದ್ರಸ್ವಾಮಿ ಪ್ರಸಾರ ಸಮಿತಿ ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಸಂಘಟನೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.