“ತಪ್ಪು ಮಾಡಿದ್ದು ನಾನಲ್ವಾ..?” : ಅಂಧಾಲೋಕ

(www.vknews.com) : ಪ್ರಥಮ ಪಿಯುಸಿ ಕಲಿಯುತ್ತಿರುವ ಸಮಯ. ಕೆಲವರ ಒತ್ತಾಯಕ್ಕೆ ಮಣಿದು ಆಸಕ್ತಿಯಿಲ್ಲದ ವಿಷಯ ಆಯ್ದುಕೊಂಡಿದ್ದರಿಂದಲೋ ಏನೋ ಕಲಿಕೆಯಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳುವ ಮನಸ್ಸಿರಲಿಲ್ಲ. ತರಗತಿಯಲ್ಲಿ ಕೂರುವುದೇ ಒಂದು ಸಾಹಸ ಅಂದುಕೊಂಡಿದ್ದರಿಂದ ಹೆಚ್ಚಾಗಿ ಗೈರಾಗುತ್ತಿದ್ದೆ. ಹೀಗೆ ಯಾವುದೋ ಕಾರಣಕ್ಕೆ ಪ್ರಿನ್ಸಿಪಲ್ ಬಳಿ ನನ್ನ ಮೇಲೆ ಆರೋಪ ಬಂದಾಗ ನನ್ನನ್ನು ಕರೆಸಿ ಮರುದಿನ ಮನೆಯವರನ್ನು ಕರೆಸಿದ ಬಳಿಕವಷ್ಟೇ ತರಗತಿ ಹಾಜರಾದರಾಯ್ತು ಎಂಬ ಕಟ್ಟಪ್ಪಣೆಯಿಡಲಾಯ್ತು. ಆದರೆ, ಮಾರನೇದಿನ ಎಂದಿನಂತೆಯೇ ತರಗತಿಯಲ್ಲಿ ಕುಳಿತಿರಬೇಕಾದರೆ ಮತ್ತೆ ಬಂದ ಪ್ರಿನ್ಸಿಪಲ್ ನಿನ್ನೆಯ ಅದೇ ಮಾತನ್ನು ಮತ್ತೆ ನೆನಪಿಸಿ, ಗದರಿಸುತ್ತಾರೆ. ಹೆತ್ತವರೋ, ಪೋಷಕರೋ ಯಾರನ್ನೂ ಕರೆಸದೇ ಅದೆಷ್ಟು ಜಂಭದಿಂದ ತರಗತಿಯಲ್ಲಿ ಕೂತಿದ್ದೀಯಲ್ಲಾ ಎನ್ನುತ್ತಾ ಜಾಡಿಸುತ್ತಿರಬೇಕಾದರೆ, ನಾನು ಹೀಗಂದೆ, “ಸರ್, ತಪ್ಪು ನಾನು ಮಾಡಿದ್ದರೆ ನನಗೆ ಶಿಕ್ಷೆ ಕೊಡಿ. ಅದು ಬಿಟ್ಟು ನನ್ನ ಮನೆಯವರನ್ನ ಕರೆಸಿ ಅವರಿಗ್ಯಾಕೆ ತೊಂದರೆ ಕೊಡ್ತೀರಿ?” ಈ ಮಾತು ವೈಚಾರಿಕವೇನೂ ಆಗಿರಲಿಲ್ಲ. ಹೇಗಿದ್ದೂ ಅಲ್ಲಿಂದ ತಪ್ಪಿಸಿಕೊಳ್ಳಬೇಕೆನ್ನುವ ಬುದ್ಧಿವಂತಿಕೆಯಿಂದ ಹೇಳಿದೆ. ಅದೇರೀತಿ ಹೆತ್ತವರು ಉಪದೇಶ ನೀಡಿದಾಗ ಅದರಂತೆ ಕೈಕಟ್ಟಿ ನಿಲ್ಲುವ ವಿಶಾಲ ಹೃದಯವಂತಿಕೆ ಕೂಡ ನನಗಿಲ್ಲ ಎಂಬ ವಾಸ್ತವ ಅವರಿಗೆ ಗೊತ್ತಾಗಿರಬೇಕು. ಅದಕ್ಕೆ ನನ್ನ ಮಾತಿನಲ್ಲಿ ನ್ಯಾಯವಿದೆಯೆನ್ನುತ್ತಲೇ ನಾನು ಮಾಡಿದ ತಪ್ಪುಗೆ ಅರ್ಹವಾದ ಶಿಕ್ಷೆಯನ್ನೂ ವಿಧಿಸಿ ಮತ್ತೆ ತರಗತಿಗೆ ಸೇರಿಸಿಕೊಂಡರು.

ಇದು ಈಗ ಯಾಕೆ ನೆನಪಿಗೆ ಬಂತು ಅಂತ ಕೇಳಿದರೆ, ಈಗೀಗ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ವಿಕೃತ ಚಟುವಟಿಕೆಗಳು ನನ್ನೊಳಗೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ನನ್ನ ತಪ್ಪಿಗೆ ಶಿಕ್ಷೆಯಾಗಿ ನನ್ನ ಮನೆಯವರಿಗೆ ತೊಂದರೆಕೊಡುವುದು, ನನ್ನ ಕುಟುಂಬವನ್ನು ಸಂಕಷ್ಟಕ್ಕೆ ಎಳೆತರುವುದು, ನನ್ನ ಗೆಳೆಯರನ್ನು ಉಪದ್ರವಿಸುವುದು ಇದ್ಯಾವುದನ್ನೂ ನನ್ನಿಂದ ಒಪ್ಪಿಕೊಳ್ಳಲಾಗದು. ಯಾವುದೇ ವಿಚಾರವಾಗಿದ್ದರೂ ಕೂಡ ಎಷ್ಟೇ ಸಣ್ಣದಾಗಿರಲಿ, ದೊಡ್ಡದಾಗಿರಲಿ ಇಲ್ಲಿ ತಪ್ಪು ಮಾಡಿದವನಿಗಷ್ಟೇ ಶಿಕ್ಷೆಯಾಗಬೇಕು. ಆ ತಪ್ಪಿನ ಕಾರಣ ಹೇಳಿ ಅವನ ಜೊತೆಗಾರರನ್ನೂ ಕಟ್ಟಿಹಾಕುವುದಂತೂ ಸಮರ್ಥಿಸಲೊಲ್ಲದ ವಿಚಾರ.

ಇವತ್ತು ನಮ್ಮ ನಡುವೆ ನಡೆಯುತ್ತಿರುವುದೇ ಬೇರೆ. ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಪರಿವಾರವನ್ನೇ ಅಪರಾಧಿಗಳಾಗಿ ಚಿತ್ರೀಕರಿಸುವುದು, ಒಂದು ಧರ್ಮಕ್ಕೆ ಸಂಬಂಧಪಟ್ಟವನೊಬ್ಬ ತಪ್ಪು ಮಾಡಿದಲ್ಲಿ ಇಡೀ ಧರ್ಮವನ್ನು ಕೆಟ್ಟದಾಗಿ ಕಾಣುವುದು, ಒಂದು ಸಂಘಟನೆಯ ಕಾರ್ಯಕರ್ತನೆನಿಸಿದವನು ತಪ್ಪು ಮಾಡಿದಲ್ಲಿ ಇಡೀ ಸಂಘಟನೆಯನ್ನು ಆರೋಪಿಸುವುದು ಇವೆಲ್ಲಾ ಈಗ ಸಾಮಾನ್ಯವಾಗಿ ಹೋಗಿದೆ. ಅದರಲ್ಲೂ ಪ್ರತಿಯೊಂದು ವಿಚಾರದ ನಡುವೆಯೂ ಧರ್ಮವನ್ನು ಎಳೆತಂದು ಇಡೀ ಧರ್ಮವನ್ನು ತಪ್ಪಿತಸ್ಥರ ಸಾಲಿನಲ್ಲಿ ಕಾಣುವ ರೀತಿಯಂತೂ ಈಗ ವ್ಯಾಪಕವಾಗುತ್ತಿದೆ. ಏನಾದರೊಂದು ಆರೋಪ ಪಟ್ಟಿಯಲ್ಲಿ ಮುಸ್ಲಿಂ ಹೆಸರೊಂದು ಕಂಡರೆ ಮುಸ್ಲಿಂ ಸಮುದಾಯವನ್ನೇ ಬೊಟ್ಟು ಮಾಡಿ ಧರ್ಮವನ್ನು ಅಶ್ಲೀಲವಾಗಿ ವಿಕೃತಿಗೊಳಿಸುವ ಮನಸ್ಸುಗಳು, ಅದಕ್ಕೆ ಪೂರಕವೆಂಬಂತೆ ಇತರ ಧರ್ಮಗಳನ್ನೂ ಇದೇ ರೀತಿ ಚಿತ್ರೀಕರಿಸುವ ನಿಷ್ಠುರ ಮನೋಭಾವಗಳಿಂದಾಗಿ ಸಮಾಜ ಮುಜುಗರಕ್ಕೀಡಾಗುತ್ತಿದೆ.

ಒಬ್ಬ ವ್ಯಕ್ತಿಯ ತಪ್ಪನ್ನು ಆತನ ಧರ್ಮ ಅಥವಾ ಸಮಾಜ ಅಥವಾ ಪರಿವಾರದ ತಪ್ಪು ಎಂದು ಬಿಂಬಿಸುವುದು ಎಷ್ಟೊಂದು ಸರಿಯಲ್ಲವೋ ಅದೇರೀರಿ ಒಬ್ಬ ವ್ಯಕ್ತಿಯ ಒಳ್ಳೆತನವನ್ನು ಅಥವಾ ಸಾಧನೆಯನ್ನೂ ಸಮುದಾಯದ ಸಾಧನೆಯೆಂದು ಗುರುತಿಸುವುದೂ ಕೂಡ ಅಷ್ಟೇ ದೊಡ್ಡ ತಪ್ಪು. ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ, NEET ಪರೀಕ್ಷೆಯಲ್ಲಿ ಒಡಿಶಾದ ಶೊಯೆಬ್ ಎಂಬ ಯುವಕ 100% ಅಂಕಗಳೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದ ಸೋಜಿಗವನ್ನು ನಮ್ಮಲ್ಲಿ ಹೆಚ್ಚಿನವರು ಸಾಮಾಜಿಕ ತಾಣಗಳಲ್ಲಿ ಈ ಹಿಂದೆ ವಿಷವನ್ನೇ ಕಾರುವ ತಿರುಬೋಕಿಯೊಬ್ಬ ನಿರ್ದಿಷ್ಟ ಸಮುದಾಯವನ್ನು ‘ಎದೆಯಲ್ಲಿ ನಾಲ್ಕಕ್ಷರ ಇಲ್ಲದವರು’ ಎಂದು ಸಂಬೋಧಿಸಿದನ್ನು ಎತ್ತಿಹಿಡಿದು ಶೊಯೆಬ್ ನ ಸಾಧನೆಯ ಮುಂದೆ ತೂಗು ಹಾಕಿ ಸವಾಲೆಸೆಯುತ್ತಿರುವ ರೀತಿಯಂತೂ ನನಗೆ ತಮಾಷೆಯಂತೆ ಕಂಡಿದೆ. ಶೊಯೆಬ್ ಎಂಬ ವ್ಯಕ್ತಿ ಸ್ವತಃ ಕಷ್ಟಪಟ್ಟು ಮಾಡಿದ ಸಾಧನೆ ನಮಗೆಲ್ಲಾ ಸ್ಪೂರ್ತಿಯಾಗಬೇಕೇ ಹೊರತು ನಮ್ಮ ಸಮುದಾಯದ ಸಾಧನೆ ಎಂಬಂತೆ ಬಿಂಬಿಸುವುದಂತೂ ಒಂಥರಾ ವಿಕಾರವಾಗಿ ಕಾಣಿಸುತ್ತಿದೆ.

ಇಲ್ಲಿ ತಪ್ಪುಗಳು ಮತ್ತು ಒಳ್ಳೆತನಗಳೆಲ್ಲವೂ ವೈಯಕ್ತಿಕವಾಗಿ ಕಾಣಬೇಕು. ಅಲ್ಲದೇ ಒಬ್ಬನ ಸಾಧನೆಗಳನ್ನು, ಒಳಿತನ್ನೆಲ್ಲಾ ಸಮುದಾಯದ್ದು ಎಂದು ಹೇಳುವಾಗ ನಮ್ಮೊಳಗಿನವರ ತಪ್ಪುಗಳ ಹೊಣೆಯೂ ಸಮುದಾಯಕ್ಕಿದೆ ಎಂದು ಒಪ್ಪಿಕೊಳ್ಳದೇ ಒಪ್ಪಿಕೊಂಡಂತೆ. ಯಾರಾದರೂ ಸಮುದಾಯಕ್ಕೋ, ಸಮಾಜಕ್ಕೋ ತೋರು ಬೆರಳು ತೋರಿಸುವಾಗ ಅದನ್ನು ನಮ್ಮ ಆಶಯ ಮತ್ತು ಪ್ರವೃತ್ತಿಯೊಂದಿಗೆ ಅಲ್ಲಗಳೆಯಬೇಕೇ ವಿನಃ ನಮ್ಮಲ್ಲಿ ಯಾವೊಬ್ಬನ ವೈಶಿಷ್ಟ್ಯತೆಯೊಂದಿಗೆ ತಾಳೆ ಹಾಕುವುದಲ್ಲ. ಒಬ್ಬನ ಸಾಧನೆ ಸಮುದಾಯದ ಸಾಧನೆಯೆಂದಾದರೆ, ನನ್ನ ತಪ್ಪುಗಳನ್ನೂ ಸಮುದಾಯ ಹೊರುತ್ತವೆಯೇ..?

– ಹಕೀಂ ಪದಡ್ಕ

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...