(www.vknews.com) : ನಾನು ಎರಡೆರಡು ಬಾರಿ ಕೊರೋನಾ ಅಂಟಿಸಿಕೊಂಡವನು. ಮೊದಲ ಬಾರಿ ಗುಣಲಕ್ಷಣ ಇಲ್ಲದೆ. ಎರಡನೇ ಬಾರಿ ಗುಣಲಕ್ಷಣಗಳ ಕಾರಣಕ್ಕೆ. ಕೊರೋನಾದ ಎರಡನೇ ಕಂತಿನಲ್ಲಿ ಹೈರಾಣಾಗಿ ಹೋಗಿದ್ದೆ. ಎರಡನೇ ಸಲ ಆಸ್ಪತ್ರೆಯಲ್ಲಿ ಮೂರು ದಿನ, ಆ ಬಳಿಕ ಹೋಟೆಲ್ವೊಂದರಲ್ಲಿ. ಎರಡನೇ ಬಾರಿ ಕೊರೋನಾ ಅಟ್ಕಾಯಿಸಿಕೊಂಡಾಗ ಆಸ್ಪತ್ರೆಯಲ್ಲಿದ್ದ ಅಷ್ಟೂ ದಿನ ಭಯವಾಗಿದ್ದು ನಿಜ. ಆ ಬಳಿಕ ದಿನ ಕಳೆದಂತೆ ಧೈರ್ಯವಾಗಿದ್ದೆ. ಆದರಿವತ್ತು ಮತ್ತೆ ಆ ದಿನಗಳೊಮ್ಮೆ ಕಣ್ಣ ಮುಂದೆ ಬಂತು. ಅದಕ್ಕೆ ಕಾರಣವಿತ್ತು.
ಸರ್ಕಾರದ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ್ ಬಾಬು ಮೇ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಮಾತ್ರ 25 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ದಿನಂಪ್ರತಿ ಸಾವು ನೋವುಗಳ ನೋಡುವುದು ನನ್ನ ವೃತ್ತಿಯ ಭಾಗ. ಯಾವುದಕ್ಕೆ ಮರುಗುವುದು..? ಹೇಗೆ ಅರಗಿಸಿಕೊಳ್ಳುವುದು..? ನಾ ತಿಳಿಯಲಾರೆ. ದಿನಕ್ಕೆ ಹಾಸಿಗೆ ಹೊಂದಿಸಿಕೊಡಿ ಎಂದು ಸಾಕಷ್ಟು ಕರೆಗಳು ಬರ್ತಾವೆ. ನನ್ನ ಹಾಗೂ ನನ್ನಂಥಾ ಇತರೆ ವರದಿಗಾರರ ಸಹಾಯದಿಂದ ಸಾಧ್ಯವದಷ್ಟು ಸಹಾಯ ಮಾಡುತ್ತೇನೆ. ಅದರಿಂದಾಚೆಗೆ ಅಸಹಾಯಕ ಸ್ಥಿತಿ ನನ್ನದು. ಇವತ್ತೂ ಅಂಥದ್ದೇ ಒಂದು ಅಸಹಾಯಕ ಸ್ಥಿತಿಯಿಂದ ಒಳಗಿಂದ ಕಣ್ಣೀರಾಗಿ ಹೋದೆ.
ಅವರಿಗೆ ಹೆಚ್ಚು ಕಮ್ಮಿ 40 ವರ್ಷ ವಯಸ್ಸಿರಬಹುದು. ನಾನು ಕೆಸಿ ಜನರಲ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರನ್ನು ಭೇಟಿಯಾಗಲು ಹೋಗಿದ್ದೆ. ಮಾತು ಮುಗಿಸಿ ಹೊರ ಬಂದವನ ಕಣ್ಣಿಗೆ ಬಿದ್ದಿದ್ದು ಒಂದು ಆಟೋದಲ್ಲಿ ಉದ್ದಕ್ಕೆ ಉಸಿರು ಎಳೆಯುವ ಓರ್ವ ವ್ಯಕ್ತಿ. ಆಟೋ ನೇರವಾಗಿ ಆಸ್ಪತ್ರೆಯ Casualty ಬಾಗಿಲಿಗೆ ಬಂದು ನಿಂತುಕೊಂಡ್ತು. ಆಟೋದಿಂದ ಹೊರಗೆ ಕಾಲಿಟ್ಟ ಆ ವ್ಯಕ್ತಿ ನೇರ ನೆಲಕ್ಕೆ ಕುಸಿದು ಬಿದ್ದ. ಏನಾಗ್ತಿದೆ ಎಂದು ನೋಡುವಷ್ಟರಲ್ಲಿ ಆ ವ್ಯಕ್ತಿಯ ಪತ್ನಿ “ಸಾಆಆಅರ್ ನಮ್ಮ ಯಜಮಾನ್ರಿಗೆ ಕೊರೋನಾ ಸರ್. ಉಸಿರಾಡೋಕೆ ಆಗ್ತಿಲ್ವಂತೆ.. ಕಣ್ಣೆಲ್ಲಾ ಕೆಂಪಾಗಿದೆ ಸರ್.. ಹೇಗಾದರು ಮಾಡಿ ಕಾಪಾಡಿ ಡಾಕ್ಟ್ರೇ” ಅಂತ ಗೋಗರೆದು ಬಿಟ್ಟರು. ತಕ್ಷಣ ಒಡೋಡಿ ಬಂದ ಸಿಬ್ಬಂದಿಗಳು ಆ 40 ವರ್ಷದ ಸೋಂಕಿತನನ್ನು ಆಸ್ಪತ್ರೆ ಒಳಕ್ಕೆ ಕರೆದೊಯ್ದರು. ಒಳಹೊಯ್ದು ಸರಿಯಾಗಿ 5 ನಿಮಿಷ. ಅಲ್ಪ ಸ್ವಲ್ಪ ಜೀವದೊಂದಿಗೆ ಕೊರೋನಾದೊಂದಿಗೆ ಗುದ್ದಾಡುತ್ತಿದ ಆ ಸೋಂಕಿತ ಶವವಾಗಿ ವಾಪಾಸ್ ಬಂದು ಬಿಟ್ಟ.
ಅಲ್ಲಿ ನಿಂತಿದ್ದ ಬಹುತೇಕ ಮಂದಿ ಹೌಹಾರಿಯೇ ನೋಡಿತ್ತಿದ್ದರು. ಏನಿದು..? ಈಗ ತಾನೆ ಇವರನ್ನು ಒಳಕ್ಕೆ ಕೊಂಡೊಯ್ದಿದ್ದು.!! ಇಷ್ಟು ಬೇಗ ಸತ್ತು ಬಿಟ್ಟರೇ..!! ಎಂಬ ಭಾವ ಎಲ್ಲರಲ್ಲೂ ಇತ್ತು. ಹೊರ ಬಂದ ವೈದ್ಯರು ನಿಮ್ಮ ಯಜಮಾನರ ಸ್ಯಾಚುರೇಷನ್ ಲೆವೆಲ್ ಕಡಿಮೆ ಇತ್ತು ಎನ್ನುತ್ತಲೇ, ಶವವನ್ನು ಆ್ಯಂಬುಲೆನ್ಸ್ ಹತ್ತಿಸಲು ಹೇಳಿ ಬಿಟ್ಟರು. ಆ ವ್ಯಕ್ತಿಯ ಪತ್ನಿ ಅಲ್ಲೇ ನಿಂತು ಕಿರುಚಾಡಲು ಶುರುವಿಟ್ಟುಕೊಂಡರು. ಮೃತ ದೇಹವನ್ನು ಮುಟ್ಟಲಾಗದೆ ಗದ್ಗತ ಸ್ಥಿತಿಯಲ್ಲಿದ್ದರು. ಕೊನೆಗೊಂದು ಬಾರಿ ಪತಿಯ ಮುಖ ನೋಡಲೂ ಸಾಧ್ಯವಾಗದ ನನ್ನದೆಂಥಾ ಕರ್ಮ ಎಂಬ ಭಾವ ಅವರಲ್ಲಿತ್ತು.
ಇವೆಲ್ಲವನ್ನು ನೋಡುತ್ತಾ ನಿಂತಿದ್ದ ನಾನು ಮತ್ತು ನನ್ನ ಗೆಳಯ, ಇಬ್ಬರೂ ನಿಂತಲ್ಲೇ ನಿಂತು ಕೆಲ ಹೊತ್ತು ದಿಕ್ಕು ತೋಚದಂತಾಗಿ ಬಿಟ್ಟೆವು. ನಿಜ. ಕಣ್ಣ ಮುಂದೆ ನಡೆದ ಘಟನೆಗೆ ತಗುಲಿದ್ದು 5 ನಿಮಿಷ ಮಾತ್ರ. ಒಂದು ಜೀವವೇ ಕಣ್ಣೆದುರು ಹೋಗಿಬಿಡ್ತು. ನನ್ನ ಕೈಕಾಲು ನಡುಗಲು ಶುರುವಾಯ್ತು. ಗೆಳೆಯನ ತೋಳ ಮೇಲೆ ಕೈ ಎರಗಿ.. ಇಲ್ಲಿ ನಿಲ್ಲುವುದು ಬೇಡ ಎಂದೆ. ನನ್ನ ಕಣ್ಣು ಕಂಪಿಸಲು ಶುರುವಾಯ್ತು. ಅಂಗೈ ತೆರೆದು ಮತ್ತೊಂದು ಕೈಯ ಬೆರಳಿನಿಂದ ಅಂಗೈಗೆ ಚುಚ್ಚಿ ದುಃಖ ಅದುಮಿಟ್ಟುಕೊಂಡೆ.
ಏನನ್ನೂ ಮಾಡಲಾಗದ ಅಸಹಾಯ ಸ್ಥಿತಿಯಲ್ಲಿದ್ದ ನಾನೂ ಸೇರಿದಂತೆ ಅಲ್ಲಿನ ಜನ ಸ್ವಲ್ಪ ಹೊತ್ತು ಅಲ್ಲಿ ಅಯ್ಯೋ ಪಾಪ ಎಂದುಕೊಂಡು ಮುಂದಕ್ಕೆ ನಡೆದರು. ಆ ಸೋಂಕಿತನ ಪತ್ನಿ ಅಲ್ಲೇ ತಲೆ ಮೇಲೆ ಕೈ ಇಡುತ್ತಾ, ಎದೆ ಬಡಿಯುತ್ತಾ ಕೂತು ಬಿಟ್ಟಿದ್ದರು. ಏನೂ ಮಾಡಲು ಸಾಧ್ಯವಗದ ನನ್ನಂಥವರಿಗೆ ಅದೊಂದು ಸುದ್ದಿ. ಫುಲ್ ಬ್ರೇಕಿಂಗ್. ಜನರೇ ನೋಡಿ. ಎಚ್ಚರದಿಂದಿರಿ ಎನ್ನುತ್ತಾ ಅರ್ಧ ಬುಲೆಟಿನ್, ಒಂದು ಲೈವ್. ಆದರೆ ಆ ಘಟನೆ ನನ್ನ ಮತ್ತೆ, ಜೀವ ನೀರ ಮೇಲಿನ ಗುಳ್ಳೆ. ಜೀವನ ಹರಿಯುವ ನೀರು ಎಂಬುವುದು ಖಾತ್ರಿಯಾಗಿಸಿತು.
– ಆಶಿಕ್ ಮುಲ್ಕಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.