(www.vknews.in) : ನನ್ನ ಸ್ನೇಹಿತನ ತಂದೆ ತೀರಿಹೋದರು. ಅವರ ಸಾವಿಗೆ ನಾನು ಹೋಗಿದ್ದೆ. ಅವರ ಸಾವು ಕೋವಿಡ್ ನಿಂದ ಆಗಲಿಲ್ಲ. ಆದರೂ ಕಾನೂನಿನ ಪ್ರಕಾರ ಕೆಲವೇ ಜನರು ಸೇರಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸಾವಿನ ಮನೆಯ ದುಃಖ ಹೇಗಿರುತ್ತೆ ಎಂದು ಹೇಳಬೇಕಾಗಿಲ್ಲ. ಹೆಂಡತಿ-ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ನೇಹಿತನಿಗೆ ಸಮಾಧಾನ ಹೇಳಿ ನಾನು ಮನೆಗೆ ಬಂದು ಬಿಟ್ಟೆ. ನಾಲ್ಕು ದಿನ ಕಳೆಯಿತು ನನ್ನ ಸ್ನೇಹಿತ ಫೋನ್ ಮಾಡಿದ. ನನ್ನ ಹೆಂಡತಿಗೆ ಕೋವಿಡ್ ಲಕ್ಷಣಗಳು ಕಾಣುತ್ತಿವೆ, ಉಸಿರಾಡಲು ಕಷ್ಟ ಆಗುತ್ತಿದೆ, ಬೇಕಾ ಆಕ್ಸಿಜನ್ ಸಿಲಿಂಡರ್ ಎಲ್ಲಾದರೂ ಸಿಗುತ್ತಾ ವಿಚಾರಿಸು ಎಂದ. ಎಲ್ಲಿ ವಿಚಾರಿಸಿದರು ಸಿಲಿಂಡರ್ ಸಿಗಲಿಲ್ಲ. ಸುಮಾರು 200 ನಂಬರುಗಳಿಗೆ ಆತ ಸಹ ಪ್ರಯತ್ನಿಸಿದ. ಎಲ್ಲರ ಉತ್ತರ ಒಂದೇ “ಸ್ಟಾಕ್ ಇಲ್ಲ”. ಆ ಘಳಿಗೆಗಳ ಸಂಕಟ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಲೋಕಲ್ ಕ್ಲೀನಿಕಿಗೆ ಕರೆದುಕೊಂಡು ಹೋದರು. ಅವರು ಸಿ.ಟಿ. ಸ್ಕ್ಯಾನ್ ಮಾಡಿಸಲು ಹೇಳಿದರು.
ಶ್ವಾಸಕೋಶಗಳ ತೊಂದರೆ ಪ್ರತಿ ಘಳಿಗೆ ಹೆಚ್ಚಾಗುತ್ತಾ ಹೋಯಿತು. ಅಲ್ಲಿ ನೂರಾರು ಜನರ ಕ್ಯೂ. 5 – 6 ಗಂಟೆಗಳು ಅಲ್ಲಿಯೇ ಹೊರಟು ಹೋಯಿತು. ವೈದ್ಯರ ಬಳಿ ಬಂದು ಸ್ಕ್ಯಾನ್ ತೋರಿಸಿದಾಗ, ನೀವು ಆಸ್ಪತ್ರೆಗೆ ಹೋಗಿ ಅಡ್ಮಿಟ್ ಮಾಡಲೇ ಬೇಕು ಎಂದರು. ಐಸಿಯು ಬೆಡ್ಡಿಗೆ ಹುಡುಕಾಟ ಪ್ರಾರಂಭವಾಯಿತು. ಬೆಂಗಳೂರು ನಗರ ಆದಿನ ನರಕಕ್ಕಿಂತ ಕೆಟ್ಟದ್ದು ಎನಿಸಿತು. ಎಲ್ಲೂ ಬೆಡ್ ಗಳೇ ಇಲ್ಲ. ಸಾವು-ಬದುಕಿನ ಹೋರಾಟದಲ್ಲಿ ದುಃಖದ ಕರಿ ಮೋಡಗಳಿಂದ ಮನಸ್ಸು ತತ್ತರಿಸಿ ಹೋಗಿತ್ತು. ಒಂದು ಸಣ್ಣ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿತ್ತು. ವೈದ್ಯರು ಸ್ಕ್ಯಾನ್ ರಿಪೋರ್ಟ್ ನೋಡಿ, 98 ಭಾಗ ಶ್ವಾಸಕೋಶಗಳು ಹಾಳಾಗಿವೆ, ಬದುಕುವುದು ಕಷ್ಟ ಎಂದರು. ವೈದ್ಯರನ್ನು ಕಾಡಿಬೇಡಿ ದಯವಿಟ್ಟು ಭರ್ತಿಮಾಡಿಕೊಳ್ಳಿ ಉಳಿದದ್ದು ದೇವರ ಮೇಲೆ ಎಂದಾಗ, ಹೇಗೋ ಅವರು ಒಪ್ಪಿಕೊಂಡರು. ಪ್ರತಿ ಘಳಿಗೆ ಪ್ರತಿ ನಿಮಿಷ ಪ್ರಳಯಕ್ಕಿಂತ ಕಡಿಮೆ ಇರಲಿಲ್ಲ. ಚಿಕಿತ್ಸೆ ಪ್ರಾರಂಭವಾಯಿತು. ಅಲ್ಲಿಂದ ಇನ್ನೊಂದು ಸಂಕಟಗಳ ಲೋಕ ಪ್ರಾರಂಭವಾಯಿತು. ರೆಮ್ಡಿಸಿವಿರ್ ಚುಚ್ಚುಮದ್ದಿಗೆ ಹುಡುಕಾಟ. ರಾತ್ರಿಯಲ್ಲ ಓಡಾಡಿ ಗೋಳಾಡಿ ಅದನ್ನು ತಂದು ವೈದ್ಯರಿಗೆ ತಲುಪಿಸಲಾಯಿತು.
ಊಟ ಇಲ್ಲ ನಿದ್ದೆ ಇಲ್ಲ. ಮುಖ್ಯವಾಗಿ ಬೇಕಾಗುವಷ್ಟು ಹಣ ಇರಲಿಲ್ಲ. ಅದನ್ನು ಸಂಗ್ರಹಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವೈದ್ಯರು ಪ್ಲಾಸ್ಮಾ ಬೇಕೆಂದರು. ಕೋವಿಡ್ ನಿಂದ ಗುಣಮುಖರಾದವರು ಮಾತ್ರ ಕೊಡಬೇಕು. ಯಾವ ನಂಬರಿಗೆ ಫೋನ್ ಮಾಡಿದರು ಪ್ಲಾಸ್ಮ ಕೊಡಲು ಯಾರೂ ಸಿದ್ಧರಿಲ್ಲ. ಅವರದೇ ಒಂದು ಕಥೆ ಹೇಳುತ್ತಾರೆ. ಅಷ್ಟರಲ್ಲಿ ರಾಜಸ್ಥಾನದ ಆಗ್ರಾದಿಂದ ಅಪರಿಚಿತ ಒಂದು ಫೋನ್ ಕಾಲ್ ಬಂತು. ಬೆಂಗಳೂರಿನಲ್ಲಿ ಈ ನಂಬರಿಗೆ ಫೋನ್ ಮಾಡಿ ನಿಮಗೆ ಪ್ಲಾಸ್ಮಾ ಸಿಗುತ್ತೆ ಅಂತ. ನಿಜವಾಗಲು ಕಷ್ಟದ ಕಾಲದಲ್ಲಿ ದೇವರು ಯಾರಿಗಾದರೂ ಸಹಾಯಕ್ಕೆ ಕಳುಹಿಸುತ್ತಾನೆ ಎಂದು ಕೇಳಿದ್ದು ಸತ್ಯವಾಗಿ ಹೋಯಿತು. ಮರುಭೂಮಿಯಲ್ಲಿ ನೀರು ಸಿಕ್ಕಂತೆ ಪ್ಲಾಸ್ಮಾ ಸಿಕ್ಕಿತು. ವೈದ್ಯರು ಐದು ದಿನ ನಾವು ಏನು ಹೇಳಲು ಸಾಧ್ಯವಿಲ್ಲ, ದೇವರಲ್ಲಿ ನಂಬಿಕೆ ಇಡಿ, ನೋಡೋಣ ಎಂದರು.
ತಂದೆಯ ಸಾವಿನ ಜೊತೆಗೆ ಈ ದುಃಖ ಬೇರೆ ಬೇಕಿತ್ತಾ… ದೇವರೇ… ಯಾಕೆ ನನಗೆ ಈ ಅಗ್ನಿ ಪರೀಕ್ಷೆ… ದುಃಖದ ಮಡುವಿನಲ್ಲಿ ಅನೇಕ ಪ್ರಶ್ನೆಗಳ ಸುಳಿಗಳು ಸುತ್ತಲಾರಂಭಿಸಿದವು. ಐದು ದಿನಗಳ ನಂತರ ಸ್ವಲ್ಪ ಚೇತರಿಕೆ ಕಾಣತೊಡಗಿತು. ಆದರೆ ಇನ್ನು ಸಂಪೂರ್ಣ ನಂಬಿಕೆ ಇರಲಿಲ್ಲ. ಅಷ್ಟರಲ್ಲಿ ಇನ್ನೊಂದು ಸುದ್ದಿ – ಭಾವನಿಗೂ ಸಹ ಕರೋನ ವಕ್ಕರಿಸಿತು. ಅದೇ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಯಿತು. ಆತ ಸಹ ನನ್ನ ಸ್ನೇಹಿತ. ಸ್ವಭಾವದಲ್ಲಿ ಮುತ್ತಿನಂಥ ಮನುಷ್ಯ. ವೈದ್ಯರು ಬಹಳ ಪ್ರಯತ್ನಪಟ್ಟರು. ಆದರೆ ಪ್ರಾಣದ ಗಿಳಿ ಹಾರಿಹೋಯಿತು. ನನ್ನ ಸ್ನೇಹಿತನಿಗೆ ತನ್ನ ತಂಗಿಯ ಗಂಡ ತೀರಿ ಹೋದ ನಂತರ ಸಿಡಿಲು ಬಡಿದಂತಾಗಿಹೋಯಿತು. ಅವರ ಅಂತ್ಯಕ್ರಿಯೆ ಮಾಡಿಬಂದೆವು. ಆದರೆ ಈ ವಿಷಯ ನನ್ನ ಸ್ನೇಹಿತನ ಹೆಂಡತಿಗೆ ತಿಳಿಸಲಿಲ್ಲ. ಆಕೆ ಸ್ವಲ್ಪ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಳು. ಯಾರ ಪ್ರಾರ್ಥನೆಗಳ ಫಲವೋ 20 ದಿನಗಳ ನಂತರ ಗುಣಮುಖಳಾದಳು. ಆದರೆ ಮನಸ್ಸಿನಲ್ಲಿ ಭಾವನನ್ನು ಕಳೆದುಕೊಂಡ ದುಃಖದ ಬಾರದ ಜೊತೆಗೆ ಆಸ್ಪತ್ರೆಯ ಲಕ್ಷಗಟ್ಟಲೆ ಬಿಲ್ ಕಟ್ಟಿದ ಸಾಲದ ಭಾರ ಇನ್ನೂ ಇದೆ. ಬಹುಶಃ ಕೊರೋನಾ ಭೂಮಿಯಿಂದ ಮಾಯವಾದರು ಆಗಬಹುದು. ಆದರೆ ಮನಸ್ಸುಗಳಿಗೆ ಕೊರೊನ ಕೊಟ್ಟ ಆರದ ಗಾಯಗಳ ಛಾಪು ಹಾಗೆ ಉಳಿಯುತ್ತದೆ.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.