ಮುದ್ದೇಬಿಹಾಳ (www.vknews.com) : ಕಳೆದ ಹದಿನೈದು ದಿನಗಳಿಂದ ಅನಾಥನಾಗಿ ರಸ್ತೆ ಬದಿಯಲ್ಲಿಯೇ ಬಿದ್ದಿದ್ದ ವೃದ್ಧನನ್ನು ರಕ್ಷಿಸಿ, ಚಿಕಿತ್ಸೆ ನೀಡಿದ ಘಟನೆ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಶುಕ್ರವಾರ ನಡೆಯಿತು. ಆಂಧ್ರ ಪ್ರದೇಶದ (ಮಾತೇ ಬಾರದ ಭಿಕ್ಷುಕ) ವೃದ್ಧನನ್ನು ಈಗ್ಗೆ ಹದಿನೈದು ದಿನಗಳ ಹಿಂದೆ ತಂಗಡಗಿ ಗ್ರಾಮದ ಹೊರಗಡೆ ಯಾರೋ ಇಳಿಸಿ ಹೋಗಿದ್ದರೆನ್ನಲಾಗಿದೆ. ಎಡಕಾಲಿನಲ್ಲಿ ಸಂಪೂರ್ಣ ಗಾಯವಾಗಿ ಅದರಲ್ಲಿ ಸಂಪೂರ್ಣ ಹುಳು ತುಂಬಿದ್ದವು. ರಸ್ತೆಯಂಚಿನಲ್ಲಿಯೇ ಕಾಲ ಕಳೆಯುತ್ತಿದ್ದ ಈ ವ್ಯಕ್ತಿಗೆ ಕೆಲವು ಯುವಕರು ದೂರದಿಂದಲೇ ಬ್ರೆಡ್, ಬಿಸ್ಕಿಟ್, ಹಣ್ಣು, ಆಹಾರ, ನೀರು ಕೊಟ್ಟಿದ್ದರು. ಬಟ್ಟೆಯಿಲ್ಲದೇ ಹಾಗೇ ಬಿದ್ದಿದ್ದ ವ್ಯಕ್ತಿಯ ಬಗ್ಗೆ ಗ್ರಾಮದ ಕೆಲವು ಯುವಕರು ಮುದ್ದೇಬಿಹಾಳದ “ಸಲಾಂ ಭಾರತ” ಸೇವಾ ಸಂಘದ ಸದಸ್ಯರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸಂಘದ ಸದಸ್ಯರು ತಂಗಡಗಿ ಗ್ರಾಮಕ್ಕೆ ತೆರಳಿ ಅಂಬುಲೆನ್ಸನಲ್ಲಿ ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಯಿತು. ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐ ಆನಂದ ವಾಗಮೋಡೆ, ವೃದ್ಧನಿಗೆ ಕಾಲಿನ ಗ್ಯಾಂಗರಿನ್ ಆಗಿದೆ, ಪೊಲೀಸ್ ಸಿಬ್ಬಂದಿಯ ರಕ್ಷಣೆಯೊಂದಿಗೆ ವಿಜಯಪುರದ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಗುವುದು. ಶಸ್ತ್ರ ಚಿಕಿತ್ಸೆ ಮಾಡಿದ ನಂತರ ವಿಜಯಪುರದ ಕ್ಷೇಮಪಾಲನಾ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು. ಮಾನವೀಯ ಕಾರ್ಯದಲ್ಲಿ ಸಲಾಂ ಭಾರತ ಸೇವಾ ಸಂಘದ ಸದಸ್ಯರಾದ ವಾಜೀದ ಹಡಲಗೇರಿ, ಜಲಾನಿ ಮಕಾನದಾರ, ಚೇತನ ಪೂಜಾರಿ, ಮಹಾಂತೇಶ ಬೂದಿಹಾಳಮಠ, ತಂಗಡಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚರಲಿಂಗಪ್ಪ ತಾಳಿಕೋಟಿ, ಮಾಜಿ ಅಧ್ಯಕ್ಷ ಶಿವಾನಂದ ಮಂಕಣಿ, ರಾಜುಗೌಡ ಪೊಲೀಸಪಾಟೀಲ, ಅಶೋಕ ನಿಡಗುಂದಿ ಮತ್ತಿತರರು ಇದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.