(www.vknews.com) : ಕೆಳಗಿನ ಫೋಟೋದಲ್ಲಿ ಪುಟ್ಟ ಗುಡಿಸಲಿನ ಮುಂದೆ ಕಾಣುತ್ತಿರುವ ಹುಡುಗನ ಹೆಸರು ಮತೀನ್ ಜಾಮದಾರ್. *ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಈತ ಪಡೆದ ಅಂಕ 600/600. ಗುಲ್ಬರ್ಗ ಜಿಲ್ಲೆಯ ಬಡ ಮೇಸ್ತ್ರಿಯ ಮಗ. ಅವನ ಮನೆಯ ಪರಿಸ್ಥಿತಿ ಹೇಗಿದೆ ಎಂದು ಒಮ್ಮೆ ಕಣ್ಣು ಬಿಟ್ಟು ನೋಡಿ. ಇಂತಹ ಪುಟ್ಟ ಗುಡಿಸಲಿನಲ್ಲಿ ಅದ್ಬುತ ಪ್ರತಿಭೆ ಒಂದು ರೂಪುಗೊಂಡಿದೆ ಎಂದರೆ ನಂಬಲಾದೀತೆ?. ಅದಕ್ಕೇ ಒಂದು ಮಾತಿದೆ. ಪ್ರತಿ ಗುಡಿಸಲಿನಲ್ಲಿ ಒಂದು ಅದ್ಭುತ ಪ್ರತಿಭೆಯಿದೆ. ಪ್ರತಿಭೆಗೆ ಜಾತಿ, ಮತ, ಧರ್ಮ ,ಬಣ್ಣ ಅಂತಸ್ತು ಯಾವುದೂ ಇಲ್ಲ. ಸರ್ವಶಕ್ತನು ಕೊಟ್ಟ ಮೆದುಳೆಂಬ ಅದ್ಭುತ ಕೊಡುಗೆಯನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಗುಡಿಸಲಲ್ಲಾದರು ಸರಿ, ಬೀದಿ ದೀಪದ ಅಡಿಯಲ್ಲಾದರೂ ಸರಿ, ಓದಿ ಸಾಧನೆ ಮಾಡಲು ಸಾಧ್ಯ ಅದನ್ನೇ ಈ ಬಾಲಕ ನಿರೂಪಿಸಿದ್ದಾರೆ. ಈ ಬಾಲಕ ಮುಂದೆ ಜಗತ್ತಿಗೆ ಶ್ರೇಷ್ಠ ಆಗಬೇಕು. ಅವರ ಸಾಧನೆಗೆ ಬೇಕಾದ ಸಹಕಾರಗಳು ಹರಿದು ಬರಲಿ ಎಂದು ಸರ್ವಶಕ್ತನಲ್ಲಿ ಪ್ರಾರ್ಥಿಸುತ್ತೇನೆ.
ಮೊನ್ನೆ ಪುತ್ತೂರು ಕಮ್ಯುನಿಟಿ ಸೆಂಟರ್ ನಲ್ಲಿ ಓರ್ವ ಪ್ರತಿಭಾವಂತ ಸಾಧಕ ಬಾಲಕನಿಗೆ ಸನ್ಮಾನಿಸಲಾಯಿತು. ಮಹಮ್ಮದ್ ಆಶಿಕ್ ಸತ್ತಿಕಲ್ಲು ಈ ಬಾರಿಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಪಡೆದ ಅಂಕ 600/600. ಸತ್ತಿಕಲ್ಲಿನ ಉದ್ಯಮಿ ಅಬ್ದುಲ್ ಶುಕೂರ್ ಮತ್ತು ಅಂಗನವಾಡಿ ಶಿಕ್ಷಕಿ ನಸೀಮಾ ಬಾನು ದಂಪತಿಯ ಸುಪುತ್ರ. ಪುತ್ತೂರಿನ ಅಂಬಿಕಾ ಕಾಲೇಜಿನ ವಿದ್ಯಾರ್ಥಿ. ಮೆಡಿಕಲ್ ಓದಬೇಕೆಂಬ ಅಭಿಲಾಷೆಯೊಂದಿಗೆ ನೀಟ್ ಪರೀಕ್ಷೆಗೆ ಪೂರ್ಣ ತಯಾರಿಯಲ್ಲಿದ್ದಾರೆ. ಸರ್ವಶಕ್ತನು ಅನುಗ್ರಹಿಸಲಿ ಮತ್ತು ಅವರಿಗೆ ಉಜ್ವಲ ಭವಿಷ್ಯವನ್ನು ನೀಡಲಿ.
ನಮ್ಮ ಮಕ್ಕಳಿಗೆ ಅವರ ಇಷ್ಟದಂತೆ ಕೇಳಿದ್ದನ್ನೆಲ್ಲಾ ಕೊಡುತ್ತೇವೆ. ಎಷ್ಟು ಕಷ್ಟವಾದರೂ ಯಾವುದಕ್ಕೂ ಕಡಿಮೆ ಮಾಡುವುದಿಲ್ಲ. ಮೊಬೈಲು,ಬೈಕು, ಪಾಕೆಟ್ ಮನಿ, ಒಳ್ಳೆಯ ಆಹಾರ, ಬಟ್ಟೆ, ಹೀಗೆ ಅವರ ಎಲ್ಲ ಬೇಕುಗಳಿಗೆ ನಾವು ಸ್ಪಂದಿಸುತ್ತೇವೆ. ಆದರೂ ನಮ್ಮ ಮಕ್ಕಳಿಂದ ದೊಡ್ಡ ಸಾಧನೆಗಳು ಸಾಧ್ಯವಾಗುತ್ತಿಲ್ಲ. ಆ ಬಗ್ಗೆ ಹೆತ್ತವರಿಗೂ ಕೂಡ ಕೊರಗು ಇದೆ. ಮಕ್ಕಳಿಗೆ ಎಲ್ಲವನ್ನೂ ಕೊಡುವ ನಾವು ಅವರನ್ನು ಸಾಧಕರಾಗಿ ರೂಪಿಸುವುದರಲ್ಲಿ ಎಲ್ಲೋ ಎಡವಿದ್ದೇವೆ.
ಪ್ರೀತಿ ಅಂದರೆ ಅವರು ಕೇಳಿದ್ದನ್ನೆಲ್ಲಾ ಕೊಡುವುದು ಎಂದು ನಾವು ಭಾವಿಸಿದ್ದೇವೆ. ಮಕ್ಕಳನ್ನು ಪ್ರೀತಿಸುವುದೆಂದರೆ ಅವರನ್ನು ಸ್ವಂತ ಕಾಲಲ್ಲಿ ನಿಲ್ಲುವಂತೆ ಮಾಡುವುದು. ಅವರ ಪ್ರತಿಭೆಯ ವಿಕಾಸಕ್ಕೆ ಬೇಕಾದ ವಾತಾವರಣವನ್ನು ಕಲ್ಪಿಸುವುದು. ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ ಜಗತ್ತಿಗೇ ಶ್ರೇಷ್ಠರಾಗುವಂತೆ ಮಾಡುವುದು. ಅವರಿಗೆ ಬೇಕಾದ ಮಾರ್ಗದರ್ಶನ ಮತ್ತು ಸ್ಪೂರ್ತಿಯನ್ನು ತುಂಬುವುದು.
ಹಬ್ಬಕ್ಕೆ ಬಟ್ಟೆ ತೆಗೆಯುವಾಗ ಮಕ್ಕಳನ್ನು ಅಂಗಡಿಯಿಂದ ಅಂಗಡಿಗೆ ಕರೆದುಕೊಂಡು ಹೋಗಿ ಅಲ್ಲಿರುವ ಎಲ್ಲಾ ಬಟ್ಟೆಗಳನ್ನು ತೋರಿಸಿ, ಟ್ರಯಲ್ ರೂಮ್ ನಲ್ಲಿ ಹಾಕಿಸಿ, ಮನೆಗೆ ಬಂದು ಇಷ್ಟವಾಗದಿದ್ದರೆ ಮತ್ತೆ exchange ಮಾಡಿಸಿ, ಅವರನ್ನು ಖುಷಿಪಡಿಸುವ ಹೆತ್ತವರಾದ ನಾವು, ಅವರ ಶಿಕ್ಷಣ, ಅವರ ಮುಂದಿನ ಭವಿಷ್ಯದ ಬಗ್ಗೆ, ಅವರ ಇಷ್ಟದ ಬಗ್ಗೆ, ಅವರ ಕನಸಿನ ಬಗ್ಗೆ ಅವರೊಂದಿಗೆ ಯಾವತ್ತಾದರೂ ಮುಕ್ತವಾಗಿ ಮಾತನಾಡಿದ್ದೇವಾ?
ನಮ್ಮ ಮನೆ ಕಟ್ಟುವ ಸಂದರ್ಭದಲ್ಲಿ ನಾವು ಪ್ಲಾನ್ ಮಾಡುತ್ತೇವೆ. ಬೆಡ್ ರೂಮ್ ಹೇಗಿರಬೇಕು? ಕಿಚನ್ ರೂಮಿನಲ್ಲಿ ಯಾವ ರೀತಿಯ ವ್ಯವಸ್ಥೆ ಇರಬೇಕು? ನೆಲಕ್ಕೆ ಹಾಕುವ ಗ್ರ್ಯಾನೈಟ್ ಯಾವ ಬಣ್ಣದ್ದಾಗಿರಬೇಕು? ಮನೆಯ ಇಂಟೀರಿಯರ್ ಹೇಗಿರಬೇಕು? ಇದಕ್ಕೆಲ್ಲಾ ನಾವು ವಿಶೇಷವಾಗಿ ಗಮನ ಕೊಡುತ್ತೇವೆ. ಮನೆಯವರೆಲ್ಲ ಕೂತು ಚರ್ಚಿಸುತ್ತೇವೆ. ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತೇವೆ. ಆರ್ಕಿಟೆಕ್ಟ್ ಮತ್ತು ಇಂಜಿನಿಯರೊಂದಿಗೆ ಬಹಳಷ್ಟು ಚರ್ಚಿಸುತ್ತೇವೆ. ನಮ್ಮ ಮನೆಗಿಂತಲೂ ಶ್ರೇಷ್ಠರಾದವರು ನಮ್ಮ ಮಕ್ಕಳು. ಅವರು ಭವಿಷ್ಯದಲ್ಲಿ ಎಲ್ಲಿಗೆ ತಲುಪಬೇಕು? ಅವರು ಯಾವ ಕೋರ್ಸನ್ನು ತೆಗೀಬೇಕು? ಯಾವ ಕಾಲೇಜಿನಲ್ಲಿ ಓದಬೇಕು? ಅವರ ಆಸಕ್ತಿಯ ಕ್ಷೇತ್ರ ಯಾವುದು? ಅವರ ಒಳಗಿರುವ ಪ್ರತಿಭೆಗಳಿಗೇನು?
ಇದರ ಬಗ್ಗೆ ಮಕ್ಕಳೊಂದಿಗೆ ಯಾವತ್ತಾದರೂ ಸಮಾಲೋಚನೆ ಮಾಡಿದ್ದೇವಾ? ತಜ್ಞರೊಂದಿಗೆ ಚರ್ಚಿಸಿದ್ದೇವಾ? ಕೆರಿಯರ್ ಕೌನ್ಸೆಲಿಂಗ್, ಎಜುಕೇಶನಲ್ ಗೈಡೆನ್ಸ್ ಪಡೆದಿದ್ದೇವಾ?
ನಮ್ಮ ಮಕ್ಕಳು ನಮ್ಮ ಭವಿಷ್ಯ. ಅವರು ಜಗತ್ತಿಗೆ ಆಸ್ತಿಯಾಗಬೇಕು. ದೇಶಕ್ಕೆ ಶಕ್ತಿಯಾಗಬೇಕು. ಮನೆಗೆ ಮುತ್ತಾಗಬೇಕು. ಅದಕ್ಕೆ ಅವರಿಗೆ ಸೂಕ್ತ ಮಾರ್ಗದರ್ಶನ, ಸ್ಫೂರ್ತಿ ಮತ್ತು ಕನಸುಗಳನ್ನು ನೀಡಬೇಕು. ಮಕ್ಕಳ ಕನಸುಗಳಿಗೆ ಹೆತ್ತವರಾದ ನಾವು ರೆಕ್ಕೆ ಪುಕ್ಕಗಳಾಗಬೇಕು.
ನಮ್ಮ ಮನೆ ಸಣ್ಣದಾದರೂ ಪರವಾಗಿಲ್ಲ. ನಮ್ಮ ಮಕ್ಕಳ ಸಾಧನೆ ದೊಡ್ಡದಾಗಬೇಕು.
ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿ ಮಾಡೋಣ.
✒️ ರಫೀಕ್ ಮಾಸ್ಟರ್ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.