(www.vknews.com) ; ಕಿತ್ತು ತಿನ್ನುವ ಬಡತನದ ಮಧ್ಯೆ ಹುಟ್ಟಿ, ಕಿತ್ತಳೆ ಹಣ್ಣಿನಿಂದ ಬದುಕಿನ ದಾರಿ ಕಂಡುಕೊಂಡು, ಅದರಲಿ ದೊರೆತ ಸಂಪಾದನೆಯ ಜತೆಗೆ ದಾನಿಗಳ ಸಹಕಾರದ ಕದವನ್ನು ತಟ್ಟಿ ಪಡೆದ ನೆರವಿನ ಮೂಲಕ ಹಲವು ಮಕ್ಕಳ ಬದುಕಿಗೆ ಬೆಳಕಾಗಬಲ್ಲ ಶಾಲೆಯೊಂದನ್ನು ತೆರೆದ ಹರೇಕಳ ಹಾಜಬ್ಬ ಎಂಬ ಅಕ್ಷರ ಸಂತನ ಸಾಧನೆಯ ಶಿಖರಕ್ಕೆ ಈಗ ದೇಶದ ಅತ್ಯುನ್ನತ ಗೌರವ ಪ್ರಶಸ್ತಿಯಾಗಿರುವ “ಪದ್ಮಶ್ರೀ”ಯ ಮೆರಗು.
“ಅನಕ್ಷರಸ್ಥನೆಂಬ ಕಾರಣಕ್ಕೆ ತಾನು ಪಟ್ಟಿರುವ ಪಾಡು ತನ್ನವರು, ತನ್ನೂರಿನವರು ಅನುಭವಿಸದಿರಲಿ” ಎಂಬ ಹಾಜಬ್ಬರ ದೃಷ್ಟಿಕೋನ ಶಾಲೆಯೊಂದನ್ನು ತೆರೆಯುವಷ್ಟು ವಿಶಾಲತೆಯನ್ನು ತೋರಿ, ಅದನ್ನು ಸಾಧಿಸಿದಾಗ ಉಂಟಾದ ಅಚ್ಚರಿಗಳು ಅಪಾರವಾದದ್ದು.
”ಒಬ್ಬ ಅವಿದ್ಯಾವಂತ ಈ ಮಟ್ಟದಲ್ಲಿ ಯೋಚಿಸಬಲ್ಲನೆ?” ”ಕಿತ್ತಳೆ ಹಣ್ಣು ಮಾರಟದ ಆದಾಯದಿಂದ ಅಬ್ಬಬ್ಬ ಎಂದರೆ ತನ್ನ ದಿನನಿತ್ಯದ ವೆಚ್ಚ ಭರಿಸಬಹುದು. ಅಂಥಹುದರಲ್ಲಿ ಒಂದು ಶಾಲೆಯನ್ನೇ ನಿರ್ಮಿಸಲು ಸಾಧ್ಯವೇ?” ಈ ಎರಡೂ ಪ್ರಶ್ನೆಗಳಿಗೆ “ಸಾಧ್ಯ” ಎಂಬ ಉತ್ತರದ ಮುಗ್ಧ ಮುಗುಳುನಗೆಯೊಂದಿಗಿನ ಹಾಜಬ್ಬರ ಸಾಧನೆ ಇಂದಿಗೂ ನಮ್ಮನ್ನು ಬೆರಗುಗೊಳಿಸುತ್ತಿದೆ. ಈ ಕಾರಣಕ್ಕಾಗಿ ಹಾಜಬ್ಬರು ಸಮಾಜದ ಮುಂದೆ ಅಳಿಸಲಾಗದ ಪಾಠವಾಗಿ ಪರಿವರ್ತಿತವಾದರು.
ಬಹುಶಃ ಪದ್ಮಶ್ರೀ ಎಂಬ ಹೂವು ಹಾಜಬ್ಬರಂಥಹ ಸಾಧಕರ ಮುಡಿಗೇರಿದಾಗ ತಾನು ಸರಿಯಾದ ಸ್ಥಳವನ್ನು ಸೇರಿದೆ ಎಂದು ಸಮಧಾನಪಟ್ಟುಕೊಳ್ಳಬಹುದು. ಈ ಸಾಧನೆಯ ಹೃದಯಕ್ಕೆ ಪದವಿಪೂರ್ವ ಕಾಲೇಜೊಂದನ್ನು ನಿರ್ಮಿಸಬೇಕೆಂಬ ಕನಸು ಇದೆಯಂತೆ. ಆ ಕನಸೂ ಬಹುಬೇಗನೆ ಕೈಗೂಡಲಿ ಎಂಬ ಹಾರೈಕೆ ನಮ್ಮದು.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹಾಜಬ್ಬರಿಗೆ ಗೌರವ ಡಾಕ್ಟರೇಟ್ ನೀಡಬೇಕೆಂಬ ಬೇಡಿಕೆಯೂ ಅಭಿಮಾನಿಗಳಿಗಿದೆ. ಅದು ಸಿಗಲಿ,ಸಿಗದೇ ಇರಲಿ ಹಾಜಬ್ಬರಂತು ಅಕ್ಷರಲೋಕದ ಧ್ರುವತಾರೆಯಾಗಿಯೇ ಸದಾ ವಿದ್ಯಾಭಿಮಾನಿಗಳ ನೆನಪಿನಲ್ಲಿ ಉಳಿಯುತ್ತಾರೆ.
ಕಳೆದ ವರುಷ ಕೇಂದ್ರ ಸರಕಾರದಿಂದ ಘೋಷಣೆಯಾದ ಪದ್ಮಶ್ರೀ ಪ್ರಶಸ್ತಿಯನ್ನು ಇಂದು (ನವಂಬರ್ 8ರಂದು) ರಾಷ್ಟ್ರಪತಿಯವರಿಂದ ಪಡೆದರು. ತಾನು ಬಿಸಿಲ ಬೇಗೆಯಲಿ ಬಸವಳಿದರೂ ಇತರರಿಗೆ ನೆರಳಾಗಿ, ಇದೀಗ “ಪದ್ಮಶ್ರೀ”ಗೆ ಭಾಜನರಾದ ಹರೇಕಳ ಹಾಜಬ್ಬರವರ ಆ ದೊಡ್ಡ ಮನಸ್ಸಿಗೊಂದು ದೊಡ್ಡ ಸಲಾಂ…..
✍ ರಫೀಕ್ ಐವತ್ತೊಕ್ಲು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.