(www.vknews.com) ; ಒಂದಾನೊಂದು ಊರಿನಲ್ಲಿ ಅಪ್ಪಟ ಶ್ರೀಮಂತ ರಾಜವಂಶದಿಂದ ಬಂದ ರಾಜನಿದ್ದನು. ಆತನ ಸುಂದರ ಮಡದಿಯು ಅನಾರೋಗ್ಯದಿಂದ ತೀರಿಹೋಗಿದ್ದಳು. ಆ ರಾಜನಿಗೆ ಒಬ್ಬಳೇ ಮಗಳು ಇದ್ದಳು. ರಾಜನ ಆಸ್ಥಾನದ ಎಲ್ಲಾ ಆಸ್ತಿ ಹಕ್ಕು ಪತ್ರಗಳನ್ನು ಆ ಕುಮಾರಿಯ ಹೆಸರಿನಲ್ಲಿಯೇ ಬರೆಯಲಾಗಿತ್ತು, ಅರಮನೆಯ ಎಲ್ಲಾ ಸೇವಕರು ರಾಜನಷ್ಟೇ ಗೌರವವನ್ನೂ ಕುಮಾರಿಗೂ ಕೊಡಬೇಕೆಂದು ರಾಜನು ಆಜ್ಞೆಯಿತ್ತಿದ್ದನು. ಇದರಿಂದ ಆಸ್ಥಾನದ ಅನೇಕ ಸದಸ್ಯರಿಗೆ ಇರಿಸುಮುರಿಸು ಆಗುತ್ತಿತ್ತು. ಕೆಲವೊಮ್ಮೆ ರಾಜಕುಮಾರಿಯ ನಿರ್ಧಾರಗಳಿಗೆ ಸಭೆಯಲ್ಲಿರುವ ಪಂಡಿತರು, ಸರ್ದಾರರು ತಲೆಬಾಗಲೇ ಬೇಕಿತ್ತು.ರಾಜಕುಮಾರಿ, ತನ್ನ ಸೌಂದರ್ಯದಂತೆ ಉತ್ತಮ ನಡತೆ, ಕಷ್ಟಕಾರ್ಪಣ್ಯ ಗಳಿಗೆ ಮಿಡಿಯುವ ಹೃದಯವಂತಿಕೆ ಯುಳ್ಳವಳಾಗಿದ್ದಳು. ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದಳು. ಇದು ಕೆಲವು ಆಸ್ಥಾನದ ಸದಸ್ಯರನ್ನು ಸಂತೋಷವೂ, ಕೆಲವರನ್ನು ಅಸೂಯೆಗೂ ಕೊಂಡೊಯ್ಯಿದಿತು. ಈ ನಡುವೆ ರಾಜನ ಬಳಿ ರಾಜಕುಮಾರಿಯ ಚತುರತೆಯನ್ನು ಗುಣಗಾನ ಮಾಡತೊಡಗಿದ್ದರು. ಆಗ, ರಾಜನು ರಾಜಕುಮಾರಿಯನ್ನು ಹತ್ತಿರ ಕರೆದು ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ “ಹಿರಿಯರ ಉಪದೇಶ ಕೇಳಬೇಕೆಂದು” ಸಲಹೆಯಿತ್ತಿದ್ದರು.
ಸಮಯ ಕಾಯುತ್ತಿದ್ದ ದುಷ್ಟರು ಹೇಗಾದರೂ ರಾಜನ ಆಸ್ಥಾನವನ್ನು ಕೊಳ್ಳೆ ಹೊಡೆಯಬೇಕು, ರಾಜಕುಮಾರಿಯ ಆಸ್ತಿಯನ್ನು ಕಬಳಿಸ ಬೇಕೆಂದು ಸಂಚನ್ನು ರೂಪಿಸಿ ರಾಜಕುಮಾರಿ ಯನ್ನು ಪಗಡೆಯಾಟಕ್ಕೆ ಕರೆದು,“ನೀನು ಬಲು ಚತುರಳಿದ್ದೀಯ, ಈ ಆಟದಲ್ಲಿ ನೀನೇ ವಿಜಯಶಾಲಿ ಯಾಗುವೆ ಎಂದು ಹುರಿದುಂಬಿಸಿ, ಕೊನೆಗೆ ಒಂದು ವೇಳೆ ಈ ಆಟದಲ್ಲಿ ಸೋತು ಹೋದರೆ ಸಾಮ್ರಾಜ್ಯದ ಎಲ್ಲಾ ಸೊತ್ತುಗಳನ್ನು ನಮ್ಮ ಹೆಸರಿಗೆ ಬರೆಯ ಬೇಕೆಂದು ಭಾಷೆ ತೆಗೆದು ಆಟವನ್ನು ಆರಂಭಿಸುತ್ತಾರೆ.ಆಟ ಪ್ರಾರಂಭಕ್ಕಿಂತ ಮೊದಲು ರಾಜಕುಮಾರಿ ತನ್ನ ಅಪ್ಪ ರಾಜನ ಬಳಿ ಹೋಗಿ ಸಲಹೆಯನ್ನು ಕೇಳುತ್ತಾಳೆ. ಆ ಮಾತನ್ನು ಕೇಳಿ ರಾಜ ಒಮ್ಮೆ ಜೋರಾಗಿ ನಕ್ಕು,“ಮಗಳೇ.. ನೀನು ಬುದ್ಧಿವಂತೆ ಯಾದ್ದರಿಂದ ಸಲಹೆ ಕೇಳಲು ಬಂದಿರುವೆ, ಇಲ್ಲಿ ನೀನು ವಿವೇಕದಿಂದ ಆಟವನ್ನು ಆಡದಿದ್ದರೆ ನಮಗೆ ಅಹಿತವಿದೆ ಎಂಬುವುದನ್ನು ಮರೆಯಬೇಡ” ಎಂದು ಹೇಳಿ ಆಟಕ್ಕೆ ಕಳುಹಿಸುತ್ತಾನೆ.ಆಟದ ಪ್ರಥಮ ಸುತ್ತಿನಲ್ಲಿ ರಾಜಕುಮಾರಿವಿಜಯಶಾಲಿ ಯಾಗುತ್ತಾಳೆ. ಎರಡನೇಯ ಸುತ್ತಿನ ಕೊನೆಯಲ್ಲಿ ಮೋಸದಾಟ ನಡೆಸಿ ರಾಜಕುಮಾರಿಯನ್ನು ಸೋಲುವಂತೆ ಮಾಡುತ್ತಾರೆ. ಮತ್ತೊಮ್ಮೆ ಮೂರನೇ ಸುತ್ತಿನ ಆಟವು ನಡೆಯುತ್ತದೆ. ಆಗ ರಾಜಕುಮಾರಿ ಎಚ್ಚೆತ್ತು ಅತಿ ಸೂಕ್ಷ್ಮತೆಯಿಂದ ವಿವೇಕಯುತವಾಗಿ ಆಟವಾಡುತ್ತಾಳೆ ಮತ್ತು ವಿಜಯಶಾಲಿ ಯಾಗುತ್ತಾಳೆ. ಶತ್ರುಗಳು ರಾಜಕುಮಾರಿಯನ್ನು ಸೋಲಿಸಲು ಬೇರೆ ದಾರಿ ಕಾಣದೆ ತಲೆಪರಚಿಕೊಳ್ಳುತ್ತಾ ಹೊರನಡೆಯುತ್ತಾರೆ.
ನೀತಿ: ಕಿರಿಯರು ಎಷ್ಟೇ ವಿದ್ಯಾಸಂಪನ್ನರಾಗಿದ್ದರೂ, “ಅನುಭವಿಗಳ” ಮಾತನ್ನು ಕೇಳಿದರೆ ಎಲ್ಲವೂ ಹಿತವಾಗುತ್ತದೆ.
-ರಮೀಝ.ಯಂ.ಬಿಕುಕ್ಕಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.