ಮಂಗಳೂರು (www.vknews.com) ; ಆಯಾ ಧರ್ಮಗಳ ಆಚಾರ ವಿಚಾರಗಳನ್ನು ಪಾಲಿಸಿ ಇತರ ಧರ್ಮಗಳನ್ನು ಗೌರವಿಸುವುದರಿಂದ ಮಾತ್ರ ಧರ್ಮವನ್ನು ಉಳಿಸಲು ಸಾಧ್ಯ.ಅದೇ ಸಮಯ ಒಂದು ಧರ್ಮದ ಆಚಾರ, ವಿಚಾರಗಳನ್ನು ಇನ್ನೊಂದು ಧರ್ಮೀಯರ ಮೇಲೆ ಬಲವಂತವಾಗಿ ಹೇರುವುದು ಸಾಂವಿಧಾನಿಕ ನೀತಿಗೆ ವಿರುದ್ದವಾಗಿದೆ.
ಶಾಲಾ ಮಕ್ಕಳಿಗೆ ಮತೀಯತೆಯ ಹಂಗಿಲ್ಲದೇ ಶಾಂತಿ ಮತ್ತು ಭಾತೃತ್ವದ ವಾತಾವರಣದಲ್ಲಿ ಕಲಿಯುವ ವ್ಯವಸ್ಥೆ ಕಲ್ಪಿಸ ಬೇಕಾದ ಶಿಕ್ಷಣ ಇಲಾಖೆಯು ಸೂರ್ಯ ಪೂಜೆಯಂತಹ ಒಂದು ಧರ್ಮದ ಆಚಾರವನ್ನು ಬೇರೆ ಧರ್ಮದ ಮಕ್ಕಳ ಮೇಲೆ ಹೇರಿಕೆ ಮಾಡುವುದು ಖಂಡನೀಯ ಎಂದು ಜಿಲ್ಲಾ ಸುನ್ನಿ ಯುವ ಜನ ಸಂಘ ಅಭಿಪ್ರಾಯ ಪಟ್ಟಿದೆ.ಅದೇ ರೀತಿ ಶಿರೋವಸ್ತ್ರ ಧರಿಸಿ ಶಾಲೆಗೆ ಹಾಜರಾಗುವ ಹೆಣ್ಣು ಮಕ್ಕಳೊಂದಿಗೆ ವಿವೇಚನೆ ತೋರಿಸುವ ಪವೃತ್ತಿ ಕೂಡಾ ಸಂವಿಧಾನ ವಿರೋಧಿಯಾಗಿದೆ.
ಶಾಲೆಯಲ್ಲಿ ಸಿಖ್ ಸಮುದಾಯ ಪೇಟ ಹಾಗೂ ಕ್ರೈಸ್ತ ಭಗಿನಿಯರು ಶಿರೋವಸ್ತ್ರ ಧರಿಸ ಬಹುದಾದರೆ ಮುಸ್ಲಿಂ ವಿದ್ಯಾರ್ಥಿಗಳು ಅವರ ಧರ್ಮದ ಆಚಾರದಂತೆ ಇನ್ನೊಬ್ಬರಿಗೆ ತೊಂದರೆ ಆಗದ ರೀತಿಯಲ್ಲಿ ಹಿಜಾಬ್ ಧರಿಸಿದರೆ ತಪ್ಪೇನು ? ಎಂದು ಪ್ರಶ್ನಿಸಿದ ಎಸ್ ವೈ ಎಸ್ ನಾಗರಿಕರ ಮಧ್ಯೆ ಧರ್ಮದ ಹೆಸರಲ್ಲಿ ಕಂದಕ ಸೃಷ್ಟಿಸುವುದು ದೇಶ ದ್ರೋಹದ ಕೆಲಸ ಎಂದು ಅಭಿಪ್ರಾಯ ಪಟ್ಟಿದೆ.ಭಾರತ ದೇಶದಲ್ಲಿ ಹಲವಾರು ಜಾತಿ ಧರ್ಮ ಭಾಷೆ ಸಂಸ್ಕೃತಿಗಳ ಪ್ರಭಾವದಿಂದಾಗಿ ಅಲ್ಲಲ್ಲಿ ಸಣ್ಣ ಪುಟ್ಟ ತಕರಾರುಗಳು ನಡೆಯುವುದು ಸಹಜ.
ಒಂದು ಮನೆಯಲ್ಲಿ ಒಂದೇ ತಂದೆ ತಾಯಿಯ ಮಕ್ಕಳೆಡೆಯಲ್ಲಿ ಕಲಹ ಗಲಾಟೆಗಳು ಏರ್ಪಡುತ್ತಿರುವಾಗ ಕೋಟ್ಯಾಂತರ ಜನರಿರುವ ದೇಶದಲ್ಲಿ ಕೆಲವೊಮ್ಮೆ ಅಪರಾಧ ಪ್ರಕರಣಗಳು ನಡೆಯುವುದು ಸಹಜ.ಏನೇ ಸಣ್ಣ ಪುಟ್ಟ ಕಹಿ ಘಟನೆಗಳು ನಡೆದರೂ ಸ್ಥಳೀಯವಾಗಿ ಅದನ್ನು ನಾಡಿನ ಹಿರಿಯರು ಸೇರಿ ಪ್ರತಿಷ್ಟೆಯನ್ನು ಬದಿಗಿಟ್ಟು ಮಾತುಕತೆಯ ಮೂಲಕ ಪರಿಹಾರ ಕಂಡು ಕೊಳ್ಳ ಬೇಕಾಗಿದೆ.
ದೇಶದ ಅವಿಭಾಜ್ಯ ಸಮುದಾಯಗಳಾದ ಹಿಂದೂ – ಮುಸ್ಲಿಮರ ಸಂಘ ಸಂಸ್ಥೆಗಳು ತಮ್ಮ ಯುವಕರಿಗೆ ಸಂಯಮದ ನ್ಯಾಯದ ನೀತಿ ಪಾಠಗಳನ್ನು ಕಲಿಸ ಬೇಕೇ ಹೊರತು ಅವರನ್ನು ಜೈಲಲ್ಲಿ ಕೊಳೆಯುವಂತೆ ಪ್ರಚೋದನೆಗೆ ಒಳಪಡಿಸಿ ದೇಶದ ಅಭಿವೃದ್ದಿಯನ್ನು ಕುಂಠಿತ ಗೊಳಿಸುವ ಕಾರ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸುನ್ನಿ ಯುವ ಜನ ಸಂಘದ ಕಾರ್ಯಕಾರಿ ಸಮಿತಿ ಅಭಿಪ್ರಾಯ ಪಟ್ಟಿದೆ.
ಮೌಲನಾ ಅಬ್ದುಲ್ ಅಝೀಝ್ ದಾರಿಮಿಯವರು ಅದ್ಯಕ್ಷತೆ ವಹಿಸಿದರು. ಎಸ್ ಬಿ ದಾರಿಮಿ ಉಪ್ಪಿನಂಗಡಿ ಉದ್ಘಾಟಿಸಿದರು. ಅಬ್ದುಲ್ ರಹಿಮಾನ್ ದಾರಿಮಿ ತಬೂಕ್,ರಪೀಕ್ ಹಾಜಿ ಕೊಡಾಜೆ,ಹಕೀಂ ಹಾಜಿ ಪರ್ತಿಪಾಡಿ, ರಿಯಾಝ್ ಹಾಜಿ ಬಂದರ್, ಮುಸ್ತಫ ಪೈಝಿ ಕಿನ್ಯ,ಶರೀಪ್ ಹಾಜಿ ಮಿತ್ತಬೈಲ್ ಮೊದಲಾದವರು ಉಪಸ್ಥಿತರಿದ್ದರು.ಕೆ ಎಲ್ ದಾರಿಮಿ ಸ್ವಾಗತಿಸಿ ವರದಿ ಮಂಡಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.