(www.vknews.com) : 2020 ರಿಂದ 2021 ರವರೆಗಿನ ವರ್ಷಗಳೊಳಗೆ ನಾವು ಕಂಡ ಆಘಾತ, ನಮ್ಮನ್ನು ಬೆಚ್ಚಿ ಬೀಳಿಸಿದ ನಿಮಿಷಗಳು, ನಾವು ಅನುಭವಿಸಿದ ನೋವುಗಳೆಲ್ಲವೂ ನಮ್ಮ ನಿಮ್ಮ ಮನದಲ್ಲಿ ಮಾತ್ರವಲ್ಲ, ಇತಿಹಾಸದ ಪುಟಗಳಲ್ಲೂ ಅಚ್ಚಳಿಯದೆ ಉಳಿದ ವರ್ಷಗಳಾಗಿವೆ. ಪ್ರಪಂಚದಲ್ಲಿ ಅನ್ಯಾಯ ಅತ್ಯಾಚಾರ ಸ್ವೇಚ್ಚೆಯಿಂದ ನಡೆಯುತ್ತಿರುವಾಗ 2020 /2021ನೇ ವರ್ಷವು ಅನಿರೀಕ್ಷಿತವಾಗಿ ಮನುಕುಲಕ್ಕೊಂದು ಬೆಚ್ಚಿಬೀಳಿಸುವಂತಹ ತಿರುವು ನೀಡಿದೆ. ಆ ತಿರುವು ಹಲವು ಪಾಠಗಳನ್ನು ಕಲಿಸಿ ನಮ್ಮೊಳಗೊಂದು ಕೊನೆ ಕಾಣದ ಭೀತಿಯನ್ನು ನೆಟ್ಟು ಬಿಟ್ಟಿತ್ತು.
ಅಂದಿನ ಲಾಕ್ಡೌನ್ ಮಕ್ಕಳ ಶಿಕ್ಷಣಕ್ಕೆ ಅಡಚಣೆ, ಹಸಿವು,ಸಾಕಷ್ಟು ಜನರಿಗೆ ಕೆಲಸ ಇಲ್ಲವಾಗಿಸಿ, ವ್ಯಾಪಾರ ನಷ್ಟ, ತಮ್ಮವರ ಸಾವು- ನೋವು , ಹೀಗೇ ಕಾಲ ನೀಡಿದ ಹೊಡೆತವು ಹಲವರನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಸಂತೋಷ ಎಂಬ ಪದ ವರ್ಷದ ಆರಂಭದಿಂದಲೇ ನಷ್ಟವಾಗಿ, ಆತಂಕದಿಂದಲೇ ದಿನದೂಡುವಂತಾಗಿತ್ತು. ನಷ್ಟ ಹೊಂದಿರುವುದ್ಯಾವುದು ಮತ್ತೆ ಹಿಂತಿರುಗಿ ಬರಲೇ ಇಲ್ಲ ಅನಿಸತೊಡಗಿತ್ತು. ಈ ಕಳೆದ 2021ರ ನನ್ನ ಪಯಣದಲ್ಲಿ ನಾನು ಪ್ರಪಂಚವು ರೋಗ ಮುಕ್ತವಾಗಲೆಂದು ಪ್ರಾರ್ಥಿಸುತ್ತಲೇ ಇದ್ದೆ.
ಎರಡು ವರ್ಷದಷ್ಟು ಧೀರ್ಘಕಾಲ ಕೊರೊನಾ ಕಾಲವು ತನ್ನ ಕೆನ್ನಾಲಿಗೆಯನ್ನು ವಿಶ್ವದೆಲ್ಲೆಡೆ ಚಾಚಿತ್ತಾದರೂ, ಹೇಗೋ ಸೃಷ್ಟಿಕರ್ತನಿಗೆ ಎಲ್ಲರು ಸಲ್ಲಿಸಿದ ಪ್ರಾರ್ಥನೆ, ವೈಜ್ಞಾನಿಕ ಪ್ರಭಾವದಿಂದ ಮನುಕುಲದ ಅವಸ್ಥೆ ಯಥಾ ಸ್ಥಿತಿಯಲ್ಲಿ ನೆಲೆಯೂರಲಾರಂಬಿಸಿತು.
ಆದರೀಗ 2021 ರಿಂದ 2022 ಕ್ಕೆ ನಾವಿಡಬೇಕಾದ ಹೆಜ್ಜೆ ಅಂಕಿ ಸಂಖ್ಯೆಯಲ್ಲಿ ಆಗಬೇಕಾದ ಬದಲಾವಣೆ ಮಾತ್ರವಾಗಿರದೆ ಜೀವನದ ಯಶಸ್ಸಿನೆಡೆಗೆ ಹೆಜ್ಜೆ ಮುಂದಕ್ಕಿಡಲು ನಮ್ಮನ್ನು ನಾವೇಬದಲಾಯಿಸಿಕೊಳ್ಳಬೇಕು. ಯೋಚನೆಗೆ ನಿಲುಕದಷ್ಟು ವೇಗದಲ್ಲಿ ಸಮಯಗಳು ಸರಿಯುತ್ತಾ ಸಾಗುವಾಗ ಸಮಯಕ್ಕೂ ಮುಂಚೆ ಅಥವಾ ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯಗಳನ್ನು ನಡೆಸಬೇಕು. ಆದರೆ ಸಮಯ ಮೀರಿದ ಮೇಲೆ ಎಚ್ಚೆತ್ತು ಆಮೇಲೆ ನಿರಾಶೆಯಿಂದ ಕೈಚೆಲ್ಲಿ ಕೂರದೆ, ಉತ್ತಮ ಕೆಲಸಗಳಿಗಾಗಿ ನಮಗೆ ದೊರೆತಿರುವ ಪ್ರತಿ ಕ್ಷಣಗಳೆಂಬ “ಅಮೂಲ್ಯ ಸಮಯಗಳನ್ನು ” ಬಳಸಿಕೊಂಡು ಯಶಸ್ಸಿನ ಮೆಟ್ಟಿಲೇರಬೇಕಾಗಿದೆ.
~ ಸಾರಾ ಅಲಿ ಪರ್ಲಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.