ವಿಶ್ವ ಕನ್ನಡಿಗ ನ್ಯೂಸ್ ಗಡ ಹನ್ನೆರಡು ವರ್ಷ ತುಂಬಿದೆ. ಅನಿವಾಸಿ ಕನ್ನಡಿಗ ಯುವಕರ ತಂಡವೊಂದು ಅತ್ಯುತ್ಸಾಹದೊಂದಿಗೆ ಆರಂಭಿಸಿದ ಈ ಸಂಸ್ಥೆಯು ಹಲವಾರು ಏಳುಬೀಳುಗಳನ್ನೆಲ್ಲಾ ಅರಗಿಸಿಕೊಂಡು ಇದೀಗ ಲಕ್ಷಾಂತರ ಓದುಗರ ಮನಗೆದ್ದಿದೆ. “ಇದು ದಮನಿತರ ಧ್ವನಿ” ಎಂಬ ಧ್ಯೇಯ ವಾಕ್ಯವೇ ಇದನ್ನು ಇಷ್ಟೆತ್ತರಕ್ಕೆ ಬೆಳೆಸಿದೆ ಅನ್ನಬಹುದು.
ಮಾರಿಕೊಂಡ ಮಾಧ್ಯಮಗಳು, ಹರಾಜಿಗಿಟ್ಟ ಮಾಧ್ಯಮ ಧರ್ಮ, ಆಡಳಿತ ವರ್ಗದ ಪಾದಸೇವೆ ಮಾಡುತ್ತಾ ಸುಳ್ಳನ್ನೇ ಬಂಡವಾಳವಾಗಿಸಿದ ಕನ್ನಡದ ಸುದ್ದಿ ವಾಹಿನಿಗಳಿಂದ ಬೇಸತ್ತ ಕನ್ನಡ ಜನತೆಗೆ ವಿಶ್ವ ಕನ್ನಡಿಗ ನ್ಯೂಸ್ ನಂತಹ ಸತ್ಯ ಮತ್ತು ವಸ್ತುನಿಷ್ಠ ಸುದ್ದಿಗಳ ವೇದಿಕೆಯ ತುರ್ತು ಅಗತ್ಯವಿತ್ತು. ಅದನ್ನು ಉತ್ತಮವಾಗಿ ನಿಭಾಯಿಸುವಲ್ಲಿ ವಿಕೆನ್ಯೂಸ್ ತಂಡ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಸುದ್ದಿಗಳ ಜೊತೆ ಜೊತೆಯಲ್ಲೇ ನಾಡಿನ ಪ್ರತಿಭಾವಂತ ಬರಹಗಾರರ ಬರಹಗಳನ್ನೊಳಗೊಂಡ ಅಂಕಣಗಳು, ಕವನಗಳ ಸರಣಿಯಿಂದ ಓದುಗರನ್ನು ಮತ್ತಷ್ಟು ಆಕರ್ಷಿಸುತ್ತಿದೆ.
ಹನ್ನೆರಡು ವರ್ಷಗಳ ಸುದೀರ್ಘ ಪಯಣದಲ್ಲಿ ವಿಕೆ ನ್ಯೂಸ್ ಸಹಜವಾಗಿ ಬೆಳೆಯುತ್ತಿದ್ದರೂ ಕೂಡ ಸುದ್ದಿಗಳ ಪೂರೈಕೆಯಲ್ಲಿ ಕೆಲವು ಸಾರಿ ವಿಳಂಬವಾಗುತ್ತಿದೆ. ತಂಡದಲ್ಲಿರುವ ಪ್ರತಿಯೋರ್ವರೂ ಪೂರ್ಣಾವಧಿಯ ಪತ್ರಕರ್ತರಾಗಿರದೇ ಬೇರೆ ಉದ್ಯೋಗದಲ್ಲಿರುವ ಕಾರಣವಿರಬಹುದು. ಆದಾಗ್ಯೂ ಇಷ್ಟೊಂದು ದೊಡ್ಡ ಓದುಗ ಸಮೂಹವನ್ನು ತನ್ನದಾಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೀಮಿತ ಮಂದಿಯನ್ನು ಇದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಿಕೊಂಡಲ್ಲಿ ವಿಕೆನ್ಯೂಸ್ ಇಡೀ ಕರ್ನಾಟಕದ ಮನೆಮಾತಾಗುವುದರಲ್ಲಿ ಸಂಶಯವಿಲ್ಲ.
ನಾನು ಕಂಡಂತೆ ವಿಶ್ವ ಕನ್ನಡಿಗ ನ್ಯೂಸ್ ಇನ್ನಷ್ಟು ಬೆಳೆಯಬೇಕಿದೆ. ಕ್ರಮಿಸಬೇಕಾದ ದಾರಿ ಬಹಳ ದೂರವಿದೆ. ಉತ್ಸಾಹ ಇಮ್ಮಡಿಯಾಗಿ, ಪರಿಶ್ರಮ ಕೂಡ ಅಷ್ಟೇ ಪ್ರಮಾಣದಲ್ಲಿ ಜೊತೆಗೂಡಿಸಿದಲ್ಲಿ ಕನ್ನಡಿಗರ ದಿನಚರಿಯ ಮೊದಲ ಆದ್ಯತೆಯಾಗಿ ವಿಕೆನ್ಯೂಸ್ ಮಾರ್ಪಾಡುಗೊಳ್ಳಬಹುದು. ಬೂಟಾಟಿಕೆಯ ಶಕ್ತಿಗಳ ದಲ್ಲಾಳಿಗಳಾಗಿ ಕಾರ್ಯಾಚರಿಸುವ ಮಾಧ್ಯಮಗಳಿಗೆ ಪರ್ಯಾಯವಾಗಿ ಇಡೀ ಕರುನಾಡಿನ ಜನತೆ ನಿಷ್ಪಕ್ಷಪಾತ ಜನದನಿಯಾಗಿರುವ ವಿಶ್ವ ಕನ್ನಡಿಗ ನ್ಯೂಸ್ ನ್ನು ಆರಿಸಿಕೊಳ್ಳುವತ್ತ ಕಾರ್ಯವೈಖರಿಗಳು ಚುರುಕೊಳ್ಳಬೇಕು. ಯಾವುದೇ ಪಕ್ಷ, ಸಂಘಟನೆ ಅಥವಾ ವ್ಯಕ್ತಿಯ ಅಗತ್ಯತೆಯಂತೆ ಸುದ್ದಿಗಳು ತಿರುಚಲ್ಪಡದೇ ಸತ್ಯ ಮತ್ತು ಸತ್ಯವನ್ನೇ ಬಿತ್ತರಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಹಿಂದಿನಂತೇ ಇನ್ನೂ ಮುಂದುವರೆಸಿಕೊಳ್ಳುವುದರ ಜೊತೆಗೆ ಓದುಗರ ಜೊತೆಯಲ್ಲಿ ಸದಾ ಮನತೆರೆದುಕೊಂಡು ಅಭಿಪ್ರಾಯ ವಿನಿಮಯವಾಗಬೇಕು. ಹೀಗೇ ದಮನಿತರ ಧ್ವನಿಯಾಗಿ, ಸತ್ಯದ ಪ್ರತಿಬಿಂಬವಾಗಿ ವಿಕೆ ನ್ಯೂಸ್ ಸಾಗುತ್ತಿರಬೇಕು.
ಹನ್ನೆರಡರ ಸಂಭ್ರದಲ್ಲಿರುವ ವಿಕೆ ನ್ಯೂಸ್ ಗೆ ಶುಭಾಶಯಗಳು. ಖ್ಯಾತ ಬರಹಗಾರರ ನಡುವೆ ಸಣ್ಣಪುಟ್ಟ ಬರಹಗಳನ್ನು ಬರೆಯಲು ಅಂಕಣ ತೆರೆದುಕೊಟ್ಟದಕ್ಕೆ ಧನ್ಯವಾದಗಳು. ಮುಂದಿನ ದಾರಿಗಳು ಮತ್ತಷ್ಟು ಸುಗಮವಾಗಲಿ ಎಂದು ಹಾರೈಸುತ್ತಿದ್ದೇನೆ.
– ಹಕೀಂ ಪದಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.