ಮಂಗಳೂರು (www.vknews.in) : ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರಿಗೆ ಸಂಸ್ಕಾರದ ಪಾಠ ಕಲಿಸುವ ಅಗತ್ಯವಿದ್ದು ಬಿಜೆಪಿ ವಕ್ತಾರರು ನಡೆಸಿದ ಪ್ರವಾದಿ ನಿಂದನೆಯಿಂದಾಗಿ ಇಡೀ ಜಗತ್ತಿನಲ್ಲಿ ಭಾರತವನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಿದೆ ಎಂದು ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಹೇಳಿದ್ದಾರೆ. ಭಾರತ ದೇಶ ಜಗತ್ತಿನ ಇತರ ದೇಶಗಳ ಮುಂದೆ ವಿಶಿಷ್ಟ ಸ್ಥಾನ ಪಡೆದಿರುವುದು ಭಾರತದ ಜಾತ್ಯತೀತ ಮತ್ತು ಬಹುತ್ವದ ಕಾರಣದಿಂದಾಗಿದೆ.
ಇತರ ಕಡೆ ಎಲ್ಲೂ ಕಾಣದ ವೈವಿಧ್ಯತೆ ಭಾರತದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೇರಿಸುವಂತೆ ಮಾಡಿದೆ. ಈ ನಡುವೆ ಕೆಲವು ನೀಚ ಮನಸ್ಥಿತಿ ಯವರ ಕೃತ್ಯಗಳಿಂದಾಗಿ ಇಡೀ ದೇಶಕ್ಕೆ ಕೆಟ್ಟ ಹೆಸರು ಬರುತ್ತಿದೆ. ಜಗತ್ತಿನ ಇನ್ನೂರು ಕೋಟಿಯಷ್ಟು ಜನರು ಅದ್ವಿತೀಯ ವಿಶ್ವ ನಾಯಕರಾಗಿ ಅಂಗೀಕರಿಸುವ ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಂ ತಂಙಳ್ ರವರನ್ನು ನಿಂದಿಸುವ ಯಾವುದೇ ಪ್ರವೃತ್ತಿಯನ್ನು ಜಾಗತಿಕ ಮುಸ್ಲಿಂ ಸಮುದಾಯ ಸಹಿಸದು.
ಪ್ರವಾದಿ ಯವರನ್ನು ಸಾಮಾನ್ಯ ಮನುಷ್ಯರಾಗಿ ಕಾಣುವ ಮುಸ್ಲಿಮರ ನಡುವಿನ ದಾರಿ ತಪ್ಪಿದ ಪಂಥಗಳನ್ನು ಕೂಡ ಮುಸ್ಲಿಂ ಸಮುದಾಯ ಕಠಿಣವಾಗಿ ವಿರೋಧಿಸುತ್ತಿದೆ. ಆಧುನಿಕ ಜಗತ್ತಿಗೆ ವೈಜ್ಞಾನಿಕ ಕೊಡುಗೆಗಳನ್ನು ನೀಡಿದ ವಿಶ್ವ ಪ್ರವಾದಿಯವರ ಬಗ್ಗೆ ಬಿಜೆಪಿ ವಕ್ತಾರರಿಬ್ಬರು ನಡೆಸಿದ ನಿಂದನೆ ಅವರು ಪ್ರತಿನಿಧಿಸುವ ಪಕ್ಷವನ್ನೇ ಕಟಕಟೆಯಲ್ಲಿ ನಿಲ್ಲಿಸುವಂತಾಗಿದೆ.
ಆದ್ದರಿಂದ ರಾಜಕೀಯ ಪಕ್ಷಗಳ ಸಹಿತ ಭಾರತದ ಎಲ್ಲಾ ಸಂಘಟನೆ ಗಳು ಇನ್ನೊಂದು ಸಮುದಾಯದ ಮನಸ್ಸಿಗೆ ನೋವುಂಟು ಮಾಡುವ ಹೀನ ಪ್ರವೃತ್ತಿ ಯನ್ನು ಕೊನೆಗೊಳಿಸಿ ಭಾರತದ ಮಾನವನ್ನು ಕಾಪಾಡಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.