(www.vknews.in) ; ಪರರ ಹಿತಕ್ಕಾಗಿ ನಮ್ಮ ಜೀವನವನ್ನು ಮುಡಿಪಾಗಿಡುವದು ಎಷ್ಟು ಸರಿ..? ಈ ಆಧುನಿಕತೆಯಲ್ಲಿ ಅಷ್ಟೊಂದು ನಿಸ್ವಾರ್ಥ ಸೇವೆ ಮಾಡುವ ಮನಸ್ಥಿತಿಯವರು ಸಿಗುವದು ಅತಿ ವಿರಳ. ಜಗತ್ತನ್ನು ಶ್ರೀಮಂತ ವರ್ಗ ಆಳುತ್ತಿದೆ ಎಂಬ ಭ್ರಮೆ ಸಬೂಬು.., ಅಗಾದ ಜ್ಞಾನ ಈ ಜಗತ್ತನ್ನು ಆಳ್ವಿಕೆ ಮಾಡುತ್ತಿದೆ ಎಂಬುದನ್ನು ನಾವು ಮನನ ಮಾಡಿಕೊಳ್ಳಬೇಕಿದೆ. ಇಡಿ ಜಗತ್ತಿಗೆ ಅಂತಹದೊಂದು ಜ್ಞಾನದ ಬುತ್ತಿ, ಜ್ಞಾನದ ದೀಪವನ್ನು ಹಚ್ಠಿದ ವಿವೇಕಿ ಸ್ವಾಮಿ ವಿವೇಕಾನಂದರು.
ಇಂದು ಅವರನ್ನು ನೆನಪಿಸುವ ದಿನ. ನಮ್ಮ ದೇಶವು ಸೇರಿದಂತೆ ಜಗತ್ತಿನಾದ್ಯಂತ ಜ್ಞಾನದ ಬುತ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಇತರರಿಗೆ ಆ ಹಸಿವಿನ ಭಾರವನ್ನು ಇಳಿಸಿದ ಮಹಾನ್ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ. ವಿಶೇಷವಾಗಿ ಯುವಕರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದ್ದ ಅವರು, ನವ ನಾಗರಿಕ ಸಮಾಜವನ್ನು ಕಟ್ಟಲು ಶತಾಯ ಗತಾಯ ಪ್ರಾಯಶಃ ಹಗಲಿರಳು ಶ್ರಮ ಮತ್ತು ಶ್ರದ್ಧೆಯಿಂದ ಸೇವಾ ಕಾಯಕದಲ್ಲಿ ನಿರತರಾಗುತ್ತಿದ್ದರು. ಒಮ್ಮೆ “ತಾಯಿ” ಎನ್ನುವ ಪುಸ್ತಕವನ್ನು ಓದುತ್ತಿರುವಾಗ ಅವರ ಹಿಂದಿನ ಕುಟುಂಬದ ನೆನಪಾಯಿತಂತೆ, ಈ ಬದುಕು ಬಂಡೆಗಲ್ಲಿನಂತೆ ಇದ್ದರು ಕೂಡ ಅದನ್ನು ಹೊಡೆದೊಡೆದು ಸಣ್ಣ ಮಾಡುತ್ತಲೇ ಅದರ ಪೂರ್ಣ ಪ್ರಮಾಣದ ಅರ್ಥವನ್ನು ಹೆಕ್ಕುತ್ತಿದ್ದರಂತೆ, ಹಾಗಾಗಿ ಇರುವುದರೊಳಗಾಗಿಯೇ ಎಲ್ಲರನ್ನು ಪ್ರೀತಿಯಿಂದಲೇ ಪ್ರೀತಿಸಿ, ಸಂತಸವನ್ನು ಹಂಚಿ ಮರೆಯಾಗಿಬಿಡಬೇಕು ಎಂಬ ಸಾರವನ್ನು ಸಾರಿ ಸಾರಿ ಹೇಳುತ್ತಿದ್ದರು.
ವಿವೇಕಾನಂದರ ಪರಮ ಗುರುಗಳಾದ ರಾಮಕೃಷ್ಣ ಪರಮಹಂಸರು ಕೂಡ ಈ ಸಮಾಜವನ್ನು ತಿದ್ದಲು ವಿವೇಕಾನಂದರಿಗೆ ತನು, ಮನವಿನ ಪಾಠವನ್ನು ಬೋಧಿಸುತ್ತಿದ್ದರು. ಈ ಬದುಕಿನ ಅರ್ಥವನ್ನು ಸ್ವಚ್ಛವಾಗಿ ತಿಳಿ ನೀರಿನಂತೆ ತಿಳಿಯಬೇಕಾದರೆ “ವೈರಾಗ್ಯ”ಧಾರಿಯಾಗಬೇಕು ಎನ್ನುವ ಮಾತನ್ನು ಹೇಳುತ್ತಿದ್ದರು. ವೈರಾಗ್ಯ ಜೀವನವೆಂದರೆ ಮುಳ್ಳಿನ ಹಾಸಾಗೆಯ ಮೇಲೆ ನಡೆದಂತೆ, ಅದು ಸಾಮಾನ್ಯವಾದ ಕಾಯಕವಲ್ಲ, ಅಂದು ಕೊಳ್ಳುವುದೊಂದು ಮಾಡುವುದು ಇನ್ನೊಂದಲ್ಲ. ಇಡೀ ಜೀವನವನ್ನೇ ಸಮಾಜ ಸೇವೆಗೆ ಅರ್ಪಿಸುವುದು ಎಂದರೆ ದೇಹವನ್ನು ಆಂತರ್ ಮುಖಿಯಾಗಿ ಸುಕ್ಕುಸುವುದು.
ನೀವು ತ್ಯಾಗದ ಜೀವನವನ್ನು ಆರಿಸಿಕೊಳ್ಳುವುದಾದರೆ, ಸೌಂದರ್ಯ, ಹಣ ಅಧಿಕಾರದ ದಾಹದ ಕಡೆ ತಿರುಗಿಯೂ ನೋಡಬಾರದು. ಎಂತಹ ಅದ್ಬುತ ಸಂದೇಶವಲ್ಲವೇ..?! ಇಂತಹ ಸಂದೇಶವನ್ನು ನಿಜವಾಗಿ ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದೆನೇ ಇರಲಿ.., ಇಂದಿನ ಯುವ ಜನತೆ ಇದನ್ನು ಎಷ್ಟು ಪಾಲಿಸುವರು..? ಇವರ ಆದರ್ಶಗಳನ್ನು ಬೆರಳಣಿಯಷ್ಷಟ್ಟು ಮಂದಿ ಮಾತ್ರ ಬರೀ ಭಾಷಣದ ಮೂಲಕ ಅವರವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರೆ ಸಾಲದು, ಅವರ ಆದರ್ಶಗಳು ಯುವಜನತೆಯಲ್ಲಿ ಬೆಳೆಸಿಕೊಳ್ಳಬೇಕು. ವಿಶ್ವವೇ ನಮ್ಮತ್ತ ಸೆಳೆಯುವಂತೆ ಮಾಡಿದ ಮಾಹನೀಯರಲ್ಲಿ ಯುವ ಜನತೆಗೆ ಸ್ಪೂರ್ತಿಯಾಗಿ ನಿಲ್ಲುವಂತೆ ಎಂದೆಂದಿಗೂ ಸ್ವಾಮಿ ವಿವೇಕಾನಂದರು ಪ್ರಸ್ತುತರಾಗಿದ್ದಾರೆ.
ಪ್ರೀಯ ಓದುಗರೇ… ಎಲ್ಲರಿಗೂ ಬಾಲ್ಯದ ಜೀವನ ತಿಳಿದಿದೆ ನಿಜ, ಆದರೂ ಕೆಲವು ಸಂಗತಿಗಳನ್ನು ಬರೆದಿರುವೆ. ಎಲ್ಲರಿಗೂ ತಿಳಿದಿರುವ ಹಾಗೆ ಪೂರ್ವಾಶ್ರಮದ ದಿನಗಳಲ್ಲಿ ನರೇನ್ ಎಂದು ಕರೆಯಲ್ಪಡುತ್ತಿದ್ದ ಸ್ವಾಮಿ ವಿವೇಕಾನಂದರು ಅಥವಾ ನರೇಂದ್ರನಾಥದತ್ತ ೧೮೬೩ ನೆಯ ಇಸವಿಯ ಜನವರಿ ೧೨ರ ಸೋಮವಾರದಂದು ವಿಶ್ವನಾಥದತ್ತ ಮತ್ತು ಭುವನೇಶ್ವರಿದೇವಿ ದಂಪತಿಗಳಿಗೆ ಕಲ್ಕತ್ತಾದಲ್ಲಿ ಜನಿಸಿದರು. ದತ್ತ ಕುಟುಂಬವು ಶ್ರೀಮಂತಿಕೆ ಮತ್ತು ಗೌರವ, ಪ್ರತಿಷ್ಠೆಗಳನ್ನುಗಳಿಸಿದ್ದು ಔದಾರ್ಯ, ಪಾಂಡಿತ್ಯ ಮತ್ತು ತೀವ್ರ ಸ್ವಾತಂತ್ರ್ಯ ಪ್ರಿಯತೆಗೆ ಹೆಸರುವಾಸಿಯಾಗಿದ್ದಿತು. ನರೇಂದ್ರನ ತಾತನವರಾದ ದುರ್ಗಾಚರಣದತ್ತರು ಪರ್ಶಿಯನ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಹಾಗೂ ಕಾನೂನಿನಲ್ಲೂ ಪರಿಣತ ಹೊಂದಿದ್ದರು .ನರೇಂದ್ರ ಹುಟ್ಟುವ ಮುನ್ನ ಹೆಣ್ಣು ಮಕ್ಕಳಾಗಿದ್ದರೂ, ಅವರು ಗಂಡುಮಗುವಿಗಾಗಿ ಹಾತೊರೆಯುತ್ತಿದ್ದರು. ಅದಕ್ಕಾಗಿ ವಾರಣಾಸಿಯಲ್ಲಿದ್ದ ತಮ್ಮ ಬಂಧುವೊಬ್ಬರಿಗೆ ವೀರೇಶ್ವರ ಶಿವನಿಗೆ ಪೂಜೆಯನ್ನು ಸಲ್ಲಿಸುವಂತೆ ಕೇಳಿಕೊಂಡರು. ಕೆಲದಿನಗಳ ತರುವಾಯ ಶಿವ ಅವರ ಕನಸಿನಲ್ಲಿ ಕಾಣಿಸಿಕೊಂಡು ತಾನು ಅವರ ಮಗನಾಗಿ ಜನಿಸುವೆನೆಂದು ವಚನವಿತ್ತ ಆನಂತರವೇ ನರೇಂದ್ರನಾಥನ ಜನನವಾಯಿತು.
ನಂತರ ತಮ್ಮ ಮಗ ವಿಶ್ವನಾಥದತ್ತರು ಜನಿಸಿದ ನಂತರ ಲೌಕಿಕ ಜಗತ್ತನ್ನು ಪರಿತ್ಯಜಿಸಿ ಸಂನ್ಯಾಸಿಯಾದಾಗ ಕೇವಲ ಇಪ್ಪತ್ತೈದು ವರ್ಷವಾಗಿತ್ತು ಬಹಳ ಶ್ರೀಮಂತಿಕೆಯನ್ನು ಹೊಂದಿದ್ದರೂ ಸಹ ಆಡಂಭರದ ಜೀವನ ನಡೆಸದೆ ಬಡಜನರಲ್ಲಿ ಅಪಾರ ಸಹಾನುಭೂತಿಯನ್ನು ಹೊಂದಿದ್ದರು ಅಲ್ಲದೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ತೀವ್ರವಾದ ಆಸಕ್ತಿಯೂ ಇತ್ತು. ರಾಮ-ಸೀತೆ ಮತ್ತು ಶಿವನ ಪ್ರತಿಮೆಗಳನ್ನು ಪೂಜಿಸುವುದಾಗಲೀ, ಧ್ಯಾನಿಸುವುದಾಗಲೀ ಇವರಿಗೆ ಆಟವಾಗಿತ್ತು. ಇವನ ತಾಯಿ ಹೇಳುತ್ತಿದ್ದ ರಾಮಾಯಣ, ಮಹಾಭಾರತಗಳ ಕಥೆಗಳು ಇವನ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದವು. ಧೈರ್ಯ, ಬಡವರ ಬಗ್ಗೆ ಕನಿಕರ, ಪರಿವ್ರಾಜಕ ಸಂನ್ಯಾಸಿಗಳನ್ನು ಕಂಡರೆ ಅಪಾರ ಆಕರ್ಷಣೆ ಈ ವಿಶೇಷ ಲಕ್ಷಣಗಳು ಅವರಲ್ಲಿ ಇತ್ತು
“ ದೇವರನ್ನು ನೋಡಿದ್ದೀರಾ..?”
ಒಮ್ಮೆ ಕಲ್ಕತ್ತಾದ ಹೊರವಲಯದ ದಕ್ಷಿಣೇಶ್ವರದಲ್ಲಿರುವ ಸಾಧು ಒಬ್ಬರ ಬಗ್ಗೆ, ತಮ್ಮ ಪ್ರಾಧ್ಯಾಪಕ ಹೇಸ್ಟಿಯವರು ಹೇಳಿದ್ದ ಮಾತುಗಳನ್ನು ನೆನಪಿಸಿಕೊಂಡನು. ಆ ಸಾಧುವನ್ನು ಒಮ್ಮೆ ಸಂದರ್ಶಿಸಬೇಕೆಂದು ಅವನ ಸಂಬಂಧಿಕನಾದ ರಾಮಚಂದ್ರದತ್ತನು ಸಹ ಇವರಿಗೆ ಪ್ರೋತ್ಸಾಹಿಸಿದನು. ಹೀಗೆ ೧೮೮೧ ರಲ್ಲಿ ಆಧುನಿಕ ಭಾರತದ ಪ್ರವಾದಿ ಮತ್ತು ಅವರ ಸಂದೇಶವಾಹಕ ಅನುಚರ ಈ ಎರಡು ಮಹಾಚೇತನಗಳ ಐತಿಹಾಸಿಕ ಮಿಲನ ಜರುಗಿತು. ಶ್ರೀ ರಾಮಕೃಷ್ಣರನ್ನು ಕುರಿತು ನರೇಂದ್ರನಾಥನು, “ಮಹಾಶಯ ನೀವು ದೇವರನ್ನು ನೋಡಿದ್ದೀರಾ..?” ಎಂದು ಪ್ರಶ್ನೆ ಹಾಕಿದನು…?? ರಾಮಕೃಷ್ಣರು “ಹೌದು ನಿನ್ನನ್ನು ಈಗ ಇಲ್ಲಿ ನೋಡುತ್ತಿರುವುದಕ್ಕಿಂತಲೂ ಗಾಢವಾಗಿ ಅವನನ್ನು ನೋಡಿದ್ದೇನೆ” ಎಂದು ಉತ್ತರಿಸಿದಾಗ ಅಲ್ಲಿಗೆ ದೇವರ ಅಸ್ತಿತ್ವದ ಬಗ್ಗೆ ಅನುಭವದಿಂದ ನುಡಿಯುವ ಒಬ್ಬ ವ್ಯಕ್ತಿ ದೊರೆತು, ಅವರ ಸಂದೇಹ ಪರಿಹಾರವಾಗಿ ಅಲ್ಲಿಂದ ಶಿಷ್ಯವೃತ್ತಿ ಪ್ರಾರಂಭವಾಯಿತು.
೧೮೮೪ ರಲ್ಲಿ, ತನ್ನ ತಂದೆಯ ಮರಣದ ನಂತರ ನರೇಂದ್ರನ ಕುಟುಂಬವು ಬಹಳ ಕಷ್ಟ-ಕೋಟಲೆಗಳು, ಕುಂದು-ಕೊರತೆಗಳಿಗೊಳಗಾದಾಗ ಗುರುಗಳ ಸೂಚನೆಯ ಪ್ರಕಾರ ತನ್ನ ಸಂಸಾರದ ಕಷ್ಟಗಳ ನಿವಾರಣೆಗಾಗಿ, ದಕ್ಷಿಣೇಶ್ವರದ ಮಹಾಮಾತೆ ಯಾದ ಕಾಳಿಯನ್ನು ಪ್ರಾರ್ಥಿಸಲು ಪ್ರಯತ್ನಿಸಿದನು. ಆದರೆ, ಅವನಿಗೆ ಹಣದ ಅಗತ್ಯವಿದ್ದರೂ ಜ್ಞಾನ ಮತ್ತು ಭಕ್ತಿಗಾಗಿ ಮಾತ್ರ ಪ್ರಾರ್ಥಿಸಲು ಸಾಧ್ಯವಾಯಿತು.ಶ್ರೀರಾಮಕೃಷ್ಣರು ಅಪಾರವಾದ ತಾಳ್ಮೆಯಿಂದ, ತಮ್ಮ ತರುಣ ಶಿಷ್ಯನ ಹೋರಾಟದ ಮನೋಭಾವವನ್ನು ಶಾಂತಗೊಳಿಸಿ, ಸಂದೇಹದಿಂದ ನಿರ್ಧಾರದ ಕಡೆಗೆ, ಬೇಗುದಿಯಿಂದ ಆಧ್ಯಾತ್ಮಿಕ ಅನಂದದೆಡೆಗೆ ಕರೆದೊಯ್ದುರು.
ಆದರೆ ಶ್ರೀರಾಮಕೃಷ್ಣರ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಬೆಂಬಲಕ್ಕಿಂತ ಹೆಚ್ಚಾಗಿ ಅವರ ಪ್ರೀತಿಯು ನರೇಂದ್ರನಾಥನನ್ನು ಗೆದ್ದಿತು ಶ್ರೀರಾಮಕೃಷ್ಣರು ಮಹಾಸಮಾಧಿಸ್ಥರಾಗುವ ಮೂರು-ನಾಲ್ಕು ದಿನಗಳ ಮುಂಚೆ ತಮ್ಮ ಶಕ್ತಿಯನ್ನೆಲ್ಲಾ ನರೇಂದ್ರನಿಗೆ ಧಾರೆ ಎರೆದು”ನಾನು ನಿನಗೆ ಧಾರೆ ಎರೆದ ಶಕ್ತಿಯ ಫಲದಿಂದ ಅನೇಕ ಮಹತ್ತಾದ ಕಾರ್ಯವನ್ನೆಸಗುವೆ. ಅನಂತರವೇ ನೀನು ಎಲ್ಲಿಂದ ಬಂದಿರುವೆಯೋ ಅಲ್ಲಿಗೆ ಮರಳುವೆ” ಎಂದು ತಿಳಿಸಿದರು. ನಂತರ ಅವರ ಪರ್ಯಟನವು ಅವರನ್ನು ಉತ್ತರ ಪ್ರದೇಶ, ರಾಜಸ್ಥಾನ,ಗುಜರಾತ್, ಮಹಾರಾಷ್ಟ್ರ, ಮೈಸೂರು, ಕೇರಳ, ಮದ್ರಾಸ್, ಹೈದರಾಬಾದ್ ಪ್ರದೇಶಗಳಲ್ಲಿನ ಚಾರಿತ್ರಿಕ ಮತ್ತು ಯಾತ್ರಾಸ್ಥಳಗಳಿಗೆ ಕರೆದೊಯ್ದಿತು.
ಮೈಸೂರಿನ ಮಹಾರಾಜರಿಂದ ಸಹಾಯ
ಸ್ವಾಮಿ ವಿವೇಕಾನಂದರು ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿ ಸನಾತನ ಧರ್ಮವನ್ನು ಬೋಧಿಸಿ ಅವರಿಂದ ಭಾರತಕ್ಕೆ ಸಹಾಯವನ್ನು ಕೋರಬೇಕೆಂಬ ಉದ್ದೇಶ ಹೊಂದಿದ್ದನ್ನು ತಿಳಿದ ಮೈಸೂರಿನ ಮಹಾರಾಜರು ಇವರ ವಿದೇಶ ಪ್ರಯಾಣಕ್ಕೆ ಆರ್ಥಿಕ ಸಹಾಯ ನೀಡುವುದಾಗಿ ಭರವಸೆಯನ್ನಿತ್ತರು ಪ್ರವಾಸದ ಕೊನೆಯ ಕುರುಹಾಗಿ ಕನ್ಯಾಕುಮಾರಿಯ ಮಾತೆ ಕುಮಾರಿಯ ವಿಗ್ರಹದ ಮುಂದೆ ಭಾವಾನ್ವಿತರಾಗಿ ಸಾಷ್ಟಾಂಗ ಪ್ರಣಾಮ ಮಾಡಿ ಬಳಿಕ ಈಜುತ್ತಾ ಸಮುದ್ರದ ದಕ್ಷಿಣ ಬಂಡೆಯೊಂದರ ಮೇಲೆ ಕುಳಿತು ಇಡೀ ರಾತ್ರಿ ಧ್ಯಾನದಲ್ಲಿ ಮಗ್ನರಾಗಿದ್ದರು ಮುಂದೆ
ಭಾರತದ ಧರ್ಮ ಶ್ರೇಷ್ಟತೆಯ ಬಗ್ಗೆ ವಿದೇಶದಲ್ಲಿ ಸಾರಿದ ಕೀರ್ತಿ
ಭಾರತ ದೇಶದ ಭೂತ, ವರ್ತಮಾನ ಹಾಗೂ ಭವಿಷ್ಯವನ್ನು ಕುರಿತು ಚಿಂತಿಸಿ ತಮ್ಮ ಜೀವನದ ಧ್ಯೇಯಕ್ಕೆ ಸರಿಯಾದ ರೂಪ ಕೊಡಲು ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿ ಭಾರತೀಯ ದಾರಿದ್ರ್ಯ ನಿರ್ಮೂಲನಕ್ಕೆ ಸಹಾಯವನ್ನು ಕೋರಬೇಕೆಂಬ ದೃಢನಿರ್ಧಾರವನ್ನು ಕೈಗೊಂಡು ಅದಕ್ಕಾಗಿ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಯಾಣಕ್ಕಾಗಿ ಅವರ ತರುಣ ಶಿಷ್ಯವೃಂದವು ಚಂದಾ ಸಂಗ್ರಹಿಸುವ ಮೂಲಕ ಅಲ್ಲಿಗೆ ತರಳಿ ಧರ್ಮದ ಬಗ್ಗೆ” ಬಾನಿನಷ್ಟು ವಿಸ್ತಾರ, ಸಮುದ್ರದಷ್ಟು ಆಳವಾದುದು ಎಂದು ಹೇಳುವ ಮೂಲಕ ಭಿಕ್ಷೆಯ ಪಾತ್ರೆ ಹಿಡಿದಿದ್ದ ಓರ್ವ ಸಾಮಾನ್ಯ ಸಂನ್ಯಾಸಿ ಕ್ಷಣಾರ್ಧದಲ್ಲಿಯೇ ಶ್ರೇಷ್ಠ ವ್ಯಕ್ತಿ ಆದರು.
ಕೊನೆಯ ಕ್ಷಣ
“ಪ್ರತಿಯೊಂದು ನಿಜವಾಯಿತು, ಪ್ರತಿಯೊಂದು ಪದವೂ ಸಹ ಮತ್ತು ಅದನ್ನು ನಾನು ಸಾಧಿಸಿ ತೋರಿಸಿದ್ದೇನೆ. ಮೃತ್ಯುವಿನ ಆಕಾರವನ್ನು ನಾನು ಆಲಂಗಿಸಿದ್ದೇನೆ.” ಎಂದು ಹೇಳುತ್ತಾ ಜುಲೈ ೪, ೧೯೦೨ ರಂದು ಸಂಜೆಯ ವೇಳೆಯಲ್ಲಿ ಒಂದು ಗಂಟೆಕಾಲ ಧ್ಯಾನಸ್ಥರಾಗಿಯೇ ತಮ್ಮ ಕೊಠಡಿಯಲ್ಲಿ ಕಳೆದು, ಮಲಗಿ ಎರಡು ಬಾರಿ ನೀಡಿದಾದ ಉಸಿರನ್ನು ಎಳೆದು ಚಿರಶಾಂತಿಯನ್ನು ಪಡೆದರು.ಇಂತಹ ಉತ್ತಮ ಚಿಂತನೆಗಳು ಇಂದಿನ ಯುವಪೀಳಿಗೆಯಲ್ಲಿ ಕಾಣುವುದೇ ವಿರಳ. ಕೇವಲ ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಪಡೆದರೆ ಸಾಲದು, ಅವರಂತೆ ಕೆಲಸಗಳನ್ನು ಮಾಡಬೇಕು.ಇನ್ನಾದರೂ ವಿವೇಕಾನಂದರ ಆದರ್ಶಗಳನ್ನು ಪಾಲಿಸುವರೇ ಇಲ್ಲವೇ ಮತ್ತೊಂದು ಬಾರಿ ವಿವೇಕನಂದರೇ ಹುಟ್ಟಿ ಬರಬೇಕು ಎಂಬುದು ನಮ್ಮ ನಿಮ್ಮೆಲ್ಲರ ಆಶಯ.
– ಜ್ಯೋತಿ ಜಿ, ಮೈಸೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.