ಉಳ್ಳಾಲ (www.vknews.in) : ಕುಂಪಲ ಚಿತ್ರಾಂಜಲಿ ಬಳಿ ಮಹಿಳೆಯೋರ್ವರು ಡೆತ್ ನೋಟು ಬರೆದಿಟ್ಟು ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ಮೂಲತಃ ಫರಂಗಿಪೇಟೆ ನಿವಾಸಿ ಸದ್ಯ ಕುಂಪಲ ಚಿತ್ರಾಂಜಲಿ ನಗರದಲ್ಲಿ ವಾಸಿಸುತ್ತಿದ್ದ ಅಶ್ವಿನಿ ಬಂಗೇರ(25) ಎಂದು ಗುರುತಿಸಲಾಗಿದೆ.
ವಿದೇಶದಲ್ಲಿ ಕೆಲಸದಲ್ಲಿದ್ದ ಅಶ್ವಿನಿ ಕುಂಪಲದಲ್ಲಿ ನೂತನ ಮನೆ ಖರೀದಿಸಿದ್ದರು. ಐದು ದಿನದ ಮೊದಲು ಅಶ್ವಿನಿ ಅದ್ಧೂರಿ ಗೃಹ ಪ್ರವೇಶಗೈದಿದ್ದರು. ಇದೀಗ ಗೃಹ ಪ್ರವೇಶ ನಡೆದ ಐದೇ ದಿನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, 24 ಪುಟಗಳ ಡೆತ್ ನೋಟು ಪತ್ತೆಯಾಗಿದೆ ಎನ್ನಲಾಗಿದೆ.
ಅಶ್ವಿನಿ ಕಳೆದ ದಿನ ರಾತ್ರಿ ತನ್ನ ಸ್ನೇಹಿತೆ ಜೊತೆ ಚಾಟ್ ಮಾಡಿದ್ದು, ಬೆಳಿಗ್ಗೆ ಸ್ನೇಹಿತೆ ಬಂದು ಕೋಣೆಯ ಬಾಗಿಲು ಒಡೆದು ನೋಡಿದಾಗ ಅಶ್ವಿನಿ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿರುವುದು ಕಂಡುಬಂದಿದೆ. ಅಶ್ವಿನಿ ಬರೆದ 24 ಪುಟಗಳ ಡೆತ್ ನೋಟ್ ಪೊಲೀಸರಿಗೆ ದೊರೆತಿದೆ. ಡೆತ್ ನೋಟಲ್ಲಿ ತಾನು ಮನೆ ಖರೀದಿಸಿ ಮೋಸ ಹೋಗಿದ್ದು ಬ್ಯಾಂಕ್ ಅಧಿಕಾರಿಗಳು ಬಂದು ಪೀಡಿಸುತ್ತಿರುವ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಜೂನ್ 3 ರಂದು ಗೃಹ ಪ್ರವೇಶ ಮಾಡಿದ್ದ ಅಶ್ವಿನಿ, ತಾಯಿ ದೇವಕಿ, ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಮಗಳನ್ನು ಕಳೆದುಕೊಂಡ ತಾಯಿಯ ರೋಧನ ಮುಗಿಲು ಮುಟ್ಟಿದೆ. ಅಶ್ವಿನಿ ಖಿನ್ನತೆಗೊಳಗಾಗಿ ಆತ್ಮಹತ್ಯೆಗೈದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.