ಹನೂರು (www.vknews.in) : ವಿದ್ಯುತ್ ಗ್ರಾಹಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಉದ್ದೇಶದಿಂದ ಪಟ್ಟಣದ ಚೆಸ್ಕಾಂ ಕಚೇರಿ ಆವರಣದಲ್ಲಿ ಕಾರ್ಯಪಾಲಕ ಎಂಜಿನಿಯರ್ ಶಹಿದಾ ಸಿದ್ದೀಕ್ ರವರ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆಯನ್ನು ಆಯೋಜಿಸಿ ನಡೆಸಲಾಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ತಾಲ್ಲೂಕು ರೈತ ಮುಖಂಡ ಚಂಗಡಿ ಕರಿಯಪ್ಪ ಮಾತನಾಡಿ ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡಲು ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ. ಅಂತಹ ಕಡೆ ಸೋಲಾರ್ ದೀಪ ಅಲವ್ದಿಸಿದ್ದಾರೆ. ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ತುಂಬಾ ತೊಂದರೆಯಾಗಿದೆ. ಕಾಡಂಚಿನ ಗ್ರಾಮಗಳಿಗೆ ಸಮಸ್ಯೆಯಾಗಿದೆ.
ರೈತರ ಪಂಪ್ ಸೆಟ್ ಗಳಿಗೆ ಕನಿಷ್ಟ 7 ಗಂಟೆ ನೀಡುತ್ತೀರಿ. ಆದರೆ ಅದು ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ವಿದ್ಯುತ್ ಸಮಸ್ಯೆಗಳ ಬಗ್ಗೆ ದೂರವಾಣಿ ಕರೆ ಮೂಲಕ ತಿಳಿಸಿದರೆ ಇಲಾಖೆಯವರು ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ತಿಳಿಸಿದರು.
ಮತ್ತೊಬ್ಬ ರೈತ ಮುಖಂಡರಾದ ಬಸವರಾಜು ಮಾತನಾಡಿ, ಬಡವರಿಗೆ ನೀಡುವ ಉಚಿತ ವಿದ್ಯುತ್ ಯೋಜನೆಗಳಾದ ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಯ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಕಾಂಚಹಳ್ಳಿ ಅಜ್ಜಿಪುರ ಮತ್ತು ಬಸಪ್ಪನ ದೊಡ್ಡಿ ಗ್ರಾಮಗಳಲ್ಲಿ ಫಲಾನುಭವಿಗಳಿಂದ ಹಣ ವಸೂಲಿ ಮಾಡಿ ಮೀಟರ್ ಗಳನ್ನೂ ಅಳವಡಿಸುತ್ತಾರೆ. ರೈತರು ಹೊಸ ಟಿ.ಸಿ.ಗೆ ಅರ್ಜಿ ನೀಡಿದರೆ ತುಂಬಾ ವಿಳಂಬ ಮಾಡುತ್ತಿದ್ದಾರೆ. ಅತಿ ಶೀಘ್ರವಾಗಿ ಟಿಸಿ ಅಳವಡಿಸುವ ಕೆಲಸ ಆಗಬೇಕು ಎಂದು ತಿಳಿಸಿದರು. ರೈತರ ಪಂಪ್ಸೆಟ್ ಗಳಿಗೆ ರಾತ್ರಿ ಹೊತ್ತು ನೀಡುವ ವಿದ್ಯುತ್ ತಪ್ಪಿಸಿ ಸಾಧ್ಯವಾದಷ್ಟು ಹಗಲಿನ ವೇಳೆ ನೀಡಬೇಕು ಎಂದು ಮನವಿ ಮಾಡಿದರು.
25 ದಿನಗಳಿಂದ ವಿದ್ಯುತ್ ಇಲ್ಲದೆ ಬೆಳೆ ಒಣಗಿ ನಾಶವಾಗುತ್ತಿದೆ. ಈ ಬಗ್ಗೆ ಚೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರು ಸಹ ಅಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಅಜ್ಜಿಪುರ ಗ್ರಾಮದ ಸುಬ್ರಹ್ಮಣ್ಯ ಎಂಬುವರು ಆರೋಪಿಸಿದರು. ಸಮಸ್ಯೆಗಳನ್ನು ಆಲಿಸಿದ ಆಧಿಕಾರಿಗಳು ಇನ್ನೂ ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ . ರೈತರಿಗೆ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯ ಪಾಲಕ ಅಭಿಯಂತರ ಶಾಹಿದಾ ಸಿದ್ದೀಕ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶಂಕರ್, ರೈತ ಸಂಘದ ಅಧ್ಯಕ್ಷರಾದ ಚಂಗಡಿ ಕರಿಯಪ್ಪ, ಹಾಗೂ ಸಾರ್ವಜನಿಕರು ಮತ್ತು ರೈತರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.