(www.vknews.in) : ತುಳುನಾಡಿನಲ್ಲಿ ಸೌಹಾರ್ದ ಅಂದರೆ ಮೂರು ಧರ್ಮಗಳ ಧರ್ಮಗುರುಗಳನ್ನು ಸಮಾರಂಭಕ್ಕೆ ಕರೆಯೋದು. ಚೌತಿ ಹಬ್ಬದಲ್ಲಿ, ದೀಪಾವಳಿಯಲ್ಲಿ ಸಾರ್ವಜನಿಕ ಸಮಾರಂಭ ಮಾಡಿ ಮೂರು ಧರ್ಮದ ಗುರುಗಳ ಭಾಷಣ ಮಾಡಿಸುವುದು ಸೌಹಾರ್ದ ಪಠಿಸುವುದು. ಅದೂ ಅಲ್ಲದೆ ಕರಾವಳಿಯಲ್ಲಿ ಜೀವನಾಡಿಯಾಗಿದ್ದ ಬಸ್ಗಳಲ್ಲಿ ಚಾಲಕನ ಸೀಟಿನ ಮೇಲ್ಭಾಗದಲ್ಲಿ ಮೂರು ಧರ್ಮಗಳ ಸಂಕೇತವನ್ನು, ಚಿತ್ರಗಳನ್ನು ಹಾಕುವುದು ಸೌಹಾರ್ದ ದ್ಯೋತಕ !
ಮಾನ್ಯ ಸ್ಪೀಕರ್ ಖಾದರ್ ಅವರು ಇಂತಹುದನ್ನೇ ನೋಡಿ ಜನರ ಜತೆಯಲ್ಲಿಯೇ ಬೆಳೆದವರು. ಬಹುಷಃ ಅವರ ತಲೆಯಲ್ಲಿಯೂ ಸರ್ವ ಜನರ ಹಿತ, ಸಮಾಜದ ಸೌಹಾರ್ದ ಪ್ರತೀಕ ಎಂದು ಇದ್ದಿರಬಹುದು. ಈಗ ಅನಿವಾರ್ಯವಾಗಿ ವಿಧಾನಸಭಾಧ್ಯಕ್ಷ ಸ್ಥಾನ ಸಿಕ್ಕಿದೆ. ಇದನ್ನು ಅಭೂತಪೂರ್ವವಾಗಿಸಲು ಮಾದರಿ ಕಾರ್ಯಕ್ರಮ ಮಾಡುವ ಉಮೇದಿನಲ್ಲಿ ಮೂರು ಧರ್ಮಗಳ ಗುರುಗಳನ್ನು ಕರೆದು ಒಂದು ಮಾದರಿ ತರಬೇತಿಗೆ ಸಿದ್ಧತೆ ಮಾಡಿರಬಹುದು. ಖಾದರ್ ವ್ಯಕ್ತಿತ್ವವೇ ಹಾಗೆ..
ಎಲ್ಲರ ಜತೆಯೂ ಬೆರೆಯುವ ಖಾದರ್ ಗೆ ವಿರೋಧಿಗಳು ಕಡಿಮೆ. ಇವರ ವಿರುದ್ಧವಾಗಿ ಕಲ್ಲಡ್ಕ ಭಟ್ಟರಂತಹ ಕಡು ಹಿಂದುತ್ವವಾದಿಗಳು ಟೀಕಿಸುತ್ತಾರೆ ವಿನಃ ಸಾಮಾನ್ಯ ಹಿಂದುತ್ವ ಮುಖಂಡರು, ಹಿಂದುಗಳು ದೂಷಿಸುವುದು ವಿರಳ. ವಿಶೇಷ ಎಂದರೆ ಖಾದರ್ ವಿರುದ್ಧವಾಗಿ ಈಗ ಅವರದೇ ಸಮುದಾಯದ ರಾಜಕೀಯ ಪಾರ್ಟಿ (ಎಸ್ಡಿಪಿಐ) ಇತ್ತೀಚೆಗೆ ಕಟುವಾಗಿ ಟೀಕಿಸಲು ಆರಂಭಿಸಿದೆ. ಅದು ಒಂದು ಸೈಡಿಗೆ ಇರಲಿ..
ಈಗ ಶಾಸಕರಿಗೆ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳ ಪಟ್ಟಿಯಲ್ಲಿ ಹಿಂದೂ ಧಾರ್ಮಿಕ ಮುಖಂಡರುಗಳು ಇರುವುದು ಕಮ್ಯುನಿಷ್ಟ್ ಮತ್ತು ಪ್ರಗತಿಪರರ ಆಕ್ರೋಶಕ್ಕೆ ಕಾರಣವಾಗಿದೆ. (ಈಗ ಮುಸ್ಲಿಂ ಸಹಿತ ಯಾವ ಧರ್ಮಗುರುಗಳು ಬೇಡ ಎನ್ನಲು ಶುರು ಮಾಡಿದ್ದಾರೆ) ಪ್ರಗತಿಪರರು ಕೊಟ್ಟಿರುವ ಪಟ್ಟಿಯಲ್ಲಿ ಬಹುತೇಕ ಎಲ್ಲರೂ ಕಮ್ಯುನಿಷ್ಟ್ ಮೈಂಡ್ ಸೆಟ್ ನವರೇ ಇದ್ದಾರೆ. ಇವರು ನೇರವಾಗಿ ಕಾಂಗ್ರೆಸ್ ಪ್ರಚಾರಕರು, ಬಿಜೆಪಿಗೆ ಸೂಲಿಬೆಲೆ ಪ್ರಚಾರಕರಾಗಿರುವಂತೆ ! (ಒಂದು ವೇಳೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಬಿಜೆಪಿ ಕರೆಸಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಯೋಚಿಸಿ) ಹಾಗಂತ ಬುದ್ಧಿಜೀವಿ ಸಾಹಿತಿಗಳು ಹೇಳಿದ್ದೆಲ್ಲ ಮಾಡುತ್ತಾ ಹೋದರೆ ಮುಂದಿನ ಬಾರಿ ಎಲ್ಲ ಉಚಿತ ಕೊಡುತ್ತೇನೆ ಎಂದರೂ ಅಧಿಕಾರ ಸಿಗೋದು ಡೌಟು.
ಈಗ ಖಾದರ್ ಬೆನ್ನ ಹಿಂದೆ ಬಿದ್ದಿರುವವ ಪ್ರಗತಿ ಪರರಲ್ಲಿ ದಕ್ಷಿಣ ಕನ್ನಡದವರೇ ಆಗಿರುವುದು ವಿಶೇಷ. ಕಾರ್ಪೊರೇಟ್ ಗುರೂಜಿ ರವಿಶಂಕರ್ ಅಧ್ಯಾತ್ಮವನ್ನು ಸಾಫ್ಟ್ವೇರ್ ಇಂಜಿನಿಯರ್ಗಳಿಗೆ EMI ರೀತಿಯಲ್ಲಿ ಕಂತಿನಲ್ಲಿ ನೀಡುತ್ತಾ ಕೋಟ್ಯಧಿಪತಿಗಳಾದವರು. ಮುಸ್ಲಿಂ ಧರ್ಮಗುರುಗಳ ಕುರಿತು ಹೆಚ್ಚಿನ ಮಾಹಿತಿ ನನಗಿಲ್ಲ. ಅವರೂ ಕೂಡಾ ಧರ್ಮದ ಕುರಿತು ಪ್ರಚಾರ ಮಾಡುವವರೇ ಆಗಿರುತ್ತಾರೆ. ಇಂಥವರಿಂದ ತರಬೇತಿ ಪಡೆಯುವಂತಹ ಅಗತ್ಯ ಶಾಸಕರುಗಳಿಗೆ ಇಲ್ಲ. ಬೇಕಾದರೆ ಒಂದು ಉದ್ಘಾಟನಾ ಸಮಾರಂಭ ಮಾಡಿ ಮೂರು ಧರ್ಮಗುರುಗಳನ್ನು ಅತಿಥಿಯಾಗಿ ಕರೆದು ಪುಟ್ಟ ಭಾಷಣ ಮಾಡಿಸಿ, ಬಳಿಕ ಅನಾಮಿಕವಾಗಿರುವ ವಿಷಯ ತಜ್ಞರುಗಳಿಂದ ಸೈಕೋಥೆರಫಿ, ಒತ್ತಡ ನಿರ್ವಹಣೆ ಇತ್ಯಾದಿ ವೈಜ್ಞಾನಿಕ ಕ್ರಮಬದ್ಧ ದೀರ್ಘಾವಧಿಯ ತರಬೇತಿಗಳನ್ನು ಆಯೋಜಿಸಬಹುದಿತ್ತು. ಹಾಗಂತ ಖಾದರ್ ಅವರ ಪ್ರಾಮಾಣಿಕತೆಯನ್ನು ಈ ವಿಚಾರದಲ್ಲಿ ಸಂಶಯಿಸುವುದು ತಪ್ಪಾಗಬಹುದು..
ಸಿಎಂ ಮೇಲೋ, ಸ್ಪೀಕರ್ ಮೇಲೋ ?
ಇವತ್ತು ಸರಕಾರದ ಯೋಜನೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಉಸ್ತುವಾರಿ ಸಚಿವ ಗುಂಡೂರಾವ್ ಜತೆ ಸ್ಪೀಕರ್ ಯು.ಟಿ. ಖಾದರ್ ಭಾಗವಹಿಸಿದ್ದರು. ನಾನು ಉಸ್ತುವಾರಿ ಸಚಿವನಾಗಿದ್ದಾಗ… ಎಂದು ಖಾದರ್ ಮೂರು ಬಾರಿ ಹೇಳುವಾಗ ನನಗೆ ವಿಶೇಷ ಅರ್ಥಕ್ಕಿಂತಲೂ ಯಾವುದೋ ಭಾವನೆ ಇರಬಹುದು ಎಂದೆನಿಸಿತು.
ರಾತ್ರಿ ಪತ್ರಕರ್ತರ ನಿಯೋಗ ಉಸ್ತುವಾರಿ ಸಚಿವ ದಿನೇಶ್ ಗುಂಡುರಾಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಭೇಟಿಯಾಗಲು ಹೋದಾಗ ಕದ್ರಿ ಸರ್ಕ್ಯೂಟ್ ಹೌಸ್ ಸಂಪೂಣ ಜಾಮ್ ಆಗಿತ್ತು. ಅಲ್ಲಿ ಖಾದರ್ ಸುತ್ತ ನೂರಾರು ಜನರಿದ್ದರು. ಗುಂಡುರಾವ್ ಅವರ ಸುತ್ತಲೂ ಕಾಂಗ್ರೆಸ್ ಕಾರ್ಯಕರ್ತರು ಸಣ್ಣ ಪುಟ್ಟ ಕೆಲಸಗಳಿಗಾಗಿ ಬಂದಿದ್ದರು. ಬಿಜೆಪಿ ಸರಕಾರದಲ್ಲಿ ಉಸ್ತುವಾರಿ ಸಚಿವರು ಬಂದರೆ ಗೊತ್ತೇ ಆಗುತ್ತಿರಲಿಲ್ಲ. ಮುಖ್ಯಮಂತ್ರಿ ಬಂದರೂ ಇಷ್ಟು ಕಾರ್ಯಕರ್ತರು ಸೇರುತ್ತಿರಲಿಲ್ಲ ಎಂದು ಯಾರೋ ಹೇಳಿದ್ರು. ಹೌದು ಸದನದಲ್ಲಿ ಮುಖ್ಯಮಂತ್ರಿಗಿಂತ ಸ್ಪೀಕರ್ ಸ್ಥಾನ ದೊಡ್ಡದಲ್ಲವೇ ?!
— ಜಿತೇಂದ್ರ ಕುಂದೇಶ್ವರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.